ಕೂಡಿಗೆ, ಅ. 20: ಸರ್ಕಾರದ ನಿಯಮಗಳನ್ನು ಮಹಿಳೆಯರು ಕ್ರಮಬದ್ಧವಾಗಿ ಪಾಲಿಸಿ ಗರ್ಭಿಣಿಯರು ತಮಗೆ ಸಿಗುವ ಎಲ್ಲಾ ಸೌಲಭ್ಯಗಳನ್ನು ಪಡೆದುಕೊಂಡು ತಮ್ಮ ಆರೋಗ್ಯದ ಕಡೆ ಗಮನಹರಿಸಬೇಕು ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ. ಮೋಹನ್ ತಿಳಿಸಿದರು.
ಪಿಜಿಡಿಹೆಚ್ ಸಂಸ್ಥೆ ವತಿಯಿಂದ ಗರ್ಭಪಾತ ನಿಯಂತ್ರಣ ಅರಿವು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಮುಳ್ಳುಸೋಗೆ ಗ್ರಾಮದ ಅಂಬೇಡ್ಕರ್ ಭವನದಲ್ಲಿ ನಡೆದ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿ, ಈಗ ಕೋವಿಡ್ 19 ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆ ಗರ್ಭಿಣಿ ಮಹಿಳೆಯರು ಸಾಧ್ಯವಾದಷ್ಟು ಸಾರ್ವಜನಿಕವಾಗಿ ದೂರವಿರುವುದು ಒಳ್ಳೆಯದು ಎಂದರು.
ಗರ್ಭಿಣಿಯರು ಸಮತೋಲನ ಆಹಾರ ಸೇವನೆ ಮಾಡಿ ಆರೋಗ್ಯವಂತರಾಗಬೇಕೆಂದು ಜಿಲ್ಲಾ ಆರ್ಸಿಹೆಚ್ ಅಧಿಕಾರಿ ಗೋಪಿನಾಥ್ ಕರೆ ನೀಡಿದರು. ಪೌಷ್ಟಿಕಾಂಶ ಕೊರತೆಯಿಂದ ಗರ್ಭಿಣಿಯರು ಮತ್ತು ಶಿಶುಗಳು ಮರಣ ಹೊಂದುತ್ತಿರುವದನ್ನು ತಡೆಗಟ್ಟಬಹುದು. ಸಮಯಕ್ಕೆ ಸರಿಯಾಗಿ ಲಸಿಕೆ ಮತ್ತು ಔಷಧಿಗಳ ಸೇವನೆಯಿಂದ ಸಾವಿನಿಂದ ತಪ್ಪಿಸಿಕೊಳ್ಳಲು ಸಾಧ್ಯವೆಂದು ತಿಳಿಸಿದರು.
ಉಪನ್ಯಾಸಕಿ ಗೀತಾಂಜಲಿ ಅನೇಕ ಉಪಯುಕ್ತ ಮಾಹಿತಿಗಳನ್ನು ನೀಡಿದರು. ಪ್ರಶಿಕ್ಷಣಾರ್ಥಿ ಹೆಚ್.ಕೆ. ಶಾಂತಿ, ಕೂಡಿಗೆ ಪ್ರಾಥಮಿಕ ಆರೋಗ್ಯ ಕೇಂದ್ರದ ಕಿರಿಯ ಆರೋಗ್ಯ ಸಹಾಯಕಿ ಸುಶೀಲಾ, ಮೋಹಿನಿ, ವಿಜಯೇಂದ್ರ, ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತರು ಮತ್ತು 30ಕ್ಕೂ ಹೆಚ್ಚು ಗರ್ಭಿಣಿ ಮಹಿಳೆಯರು ಹಾಜರಿದ್ದರು.