ಸೋಮವಾರಪೇಟೆ,ಅ.19: ಚುನಾವಣೆ ನಡೆದು ಬರೋಬ್ಬರಿ 2 ವರ್ಷಗಳಾಗುತ್ತಾ ಬಂದಿರುವ ಕೊಡಗಿನ ಮೂರು ಪಟ್ಟಣ ಪಂಚಾಯಿತಿ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆಗೆ ಮತ್ತೊಮ್ಮೆ ಹಿನ್ನಡೆಯಾಗಿದ್ದು, ಮೂರು ಪ.ಪಂ.ಗಳಲ್ಲಿ ಅಧಿಕಾರ ಹಿಡಿಯುವ ದಾವಂತದಲ್ಲಿದ್ದ ಬಿಜೆಪಿಯ ಆಸೆಗೆ ಹೈಕೋರ್ಟ್ ಆದೇಶ ತಣ್ಣೀರೆರಚಿದಂತಾಗಿದೆ.ಅಧ್ಯಕ್ಷ-ಉಪಾಧ್ಯಕ್ಷ ಹುದ್ದೆಗೆ ಸರ್ಕಾರ ನಿಗದಿಪಡಿಸಿದ್ದ ಮೀಸಲಾತಿಯನ್ನು ಪ್ರಶ್ನಿಸಿ ಜೆಡಿಎಸ್ ಹಾಗೂ ಕಾಂಗ್ರೆಸ್‍ನಿಂದ ಚುನಾವಣೆಗೆ ಸ್ಪರ್ಧಿಸಿ, ಚುನಾಯಿತರಾಗಿದ್ದ ಸದಸ್ಯರು ಹೈಕೋರ್ಟ್‍ನಲ್ಲಿ ರಿಟ್ ಅರ್ಜಿ ಸಲ್ಲಿಸಿದ್ದರಿಂದ, ತಾ. 20ರಂದು (ಇಂದು) ನಿಗದಿಯಾಗಿದ್ದ ಚುನಾವಣೆ ಪ್ರಕ್ರಿಯೆ ರದ್ದುಗೊಳ್ಳುವಂತಾಗಿದೆ.ಆ ಮೂಲಕ ಜಿಲ್ಲೆಯ ಸೋಮವಾರಪೇಟೆ, ಕುಶಾಲನಗರ ಮತ್ತು ವೀರಾಜಪೇಟೆಯ ಪಟ್ಟಣ ಪಂಚಾಯಿತಿಯಲ್ಲಿ ಅಧಿಕಾರದ ಗದ್ದುಗೆಗೇರಲು ತುದಿಗಾಲಲ್ಲಿ ನಿಂತಿದ್ದ ಬಿಜೆಪಿ ಸದಸ್ಯರಿಗೆ ನಿರಾಸೆಯಾಗಿದೆ.

ಸೋಮವಾರಪೇಟೆ ಪಟ್ಟಣ ಪಂಚಾಯಿತಿಯ ವಾರ್ಡ್ 10ರಿಂದ ಜೆಡಿಎಸ್ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿ, ಜಯಗಳಿಸಿದ್ದ ಜಯಂತಿ ಶಿವಕುಮಾರ್ ಅವರೊಂದಿಗೆ ಇತರ ಪಟ್ಟಣ ಪಂಚಾಯಿತಿಗಳಾದ ಚನ್ನಗಿರಿ ಬಾಗೇಪಲ್ಲಿಯ ಬಿಜೆಪಿಯೇತರ ಸದಸ್ಯರುಗಳು ಸಲ್ಲಿಸಿದ್ದ ಪ್ರತ್ಯೇಕ ಅರ್ಜಿಗಳನ್ನು ಇಂದು ವಿಚಾರಣೆ ನಡೆಸಿದ, ಹೈಕೋರ್ಟ್ ಏಕಸದಸ್ಯ ಪೀಠದ ನ್ಯಾಯಾಧೀಶರಾದ ದೇವದಾಸ್ ಅವರು, ತಾ. 20ರಂದು ನಡೆಯಬೇಕಿದ್ದ ಚುನಾವಣೆಗೆ ತಡೆಯಾಜ್ಞೆ ನೀಡಿದ್ದಾರೆ.

ಹೈಕೋರ್ಟ್‍ನ ತಡೆಯಾಜ್ಞೆ ಕೊಡಗು ಮಾತ್ರವಲ್ಲದೇ ರಾಜ್ಯದ ಇತರ ಜಿಲ್ಲೆಗಳಿಗೂ ಅನ್ವಯವಾಗುತ್ತಿದ್ದು, ಎಲ್ಲೆಡೆಯೂ ಚುನಾವಣಾ ಪ್ರಕ್ರಿಯೆ ರದ್ದುಗೊಂಡಿದೆ. ರಾಜ್ಯದ ಇತರ ಜಿಲ್ಲೆಗಳಿಂದಲೂ ಹೈಕೋರ್ಟ್‍ಗೆ ರಿಟ್ ಸಲ್ಲಿಕೆಯಾಗಿದ್ದ ಹಿನ್ನೆಲೆ, ಹೈಕೋರ್ಟ್‍ನ ಆದೇಶ ಇತರ ಜಿಲ್ಲೆಗಳ ಪ.ಪಂ. ಮೇಲೂ ಪ್ರಭಾವ ಬೀರಲಿದೆ ಎಂದು ಹಿರಿಯ ವಕೀಲ ಚಂದ್ರಮೌಳಿ ತಿಳಿಸಿದ್ದಾರೆ.

ಜಿಲ್ಲೆಯ ಹಿರಿಯ ವಕೀಲ ಚಂದ್ರಮೌಳಿ ಅವರ ಪುತ್ರ ಪ್ರತೀಕ್ ಚಂದ್ರಮೌಳಿ ಅವರ ಮೂಲಕ ಹೈಕೋರ್ಟ್‍ಗೆ ಸಲ್ಲಿಕೆಯಾಗಿದ್ದ ರಿಟ್ ಅರ್ಜಿಯ ಪರ ಕೊಡಗಿನ ವಕೀಲರಾದ ಎ.ಎಸ್. ಪೊನ್ನಣ್ಣ ಅವರು ವಾದ ಮಂಡಿದ್ದರು.

2018ರಿಂದಲೂ ರಾಜ್ಯದ ಪ.ಪಂ.ಗಳಿಗೆ ಚುನಾವಣೆ ನಡೆಸಿಲ್ಲ. ಕೇವಲ ನೋಟಿಫಿಕೇಷನ್ ಹೊರಡಿಸಿ, ನಂತರ ವಾಪಸ್ ಪಡೆಯುತ್ತಿದ್ದಾರೆ. ಇದರೊಂದಿಗೆ 27.08.2020ರಂದು ಬಿಡುಗಡೆ ಮಾಡಿರುವ ಮಾರ್ಗಸೂಚಿಯಲ್ಲಿ ನೀಡಿರುವ ಅಂಶಗಳನ್ನು ಪಾಲಿಸಿಲ್ಲ. ಮೀಸಲಾತಿ ನಿಗದಿ ಸಂದರ್ಭ

(ಮೊದಲ ಪುಟದಿಂದ) ಸ್ಥಳೀಯ ಜನಸಂಖ್ಯೆಯ ಶೇಕಡಾವಾರು ಆಧಾರದ ಮೇಲೆ ನಿಗದಿ ಪಡಿಸಬೇಕಿದ್ದರೂ, ಇವುಗಳನ್ನು ಗಾಳಿಗೆ ತೂರಲಾಗಿದೆ ಎಂಬಿತ್ಯಾದಿ ಅಂಶಗಳನ್ನು ಹೈಕೋರ್ಟ್ ಗಮನಕ್ಕೆ ತರಲಾಗಿದೆ ಎಂದು ಅರ್ಜಿದಾರರ ಪರ ವಾದ ಮಂಡಿಸಿದ ವಕೀಲರುಗಳು ತಿಳಿಸಿದ್ದಾರೆ.

ಸೋಮವಾರಪೇಟೆ ಪ.ಪಂ.ಗೆ ನಿಗದಿಪಡಿಸಿದ ಮೀಸಲಾತಿ ಸಮರ್ಪಕವಾಗಿಲ್ಲ. ಬಹುಮತ ಇರುವ ಆಡಳಿತಕ್ಕೆ ವಿರುದ್ಧವಾಗಿದೆ. ಕುತಂತ್ರದ ಮೂಲಕ ಅಧಿಕಾರ ಹಿಡಿಯಲು ಮುಂದಾಗಿದ್ದಾರೆ. ನೋಟಿಫಿಕೇಷನ್‍ನಲ್ಲಿ ಕಾನೂನು ದುರುದ್ದೇಶ ಹೊಂದಲಾಗಿದೆ. ಇದು ದೋಷಮುಕ್ತವಾಗಿಲ್ಲ ಎಂದು 11637/2020ರಡಿ ಸೋಮವಾರಪೇಟೆಯ ಜಯಂತಿ ಶಿವಕುಮಾರ್ ಅವರು ಅರ್ಜಿ ಸಲ್ಲಿಸಿದ್ದರು.

ಸರ್ಕಾರದ ಪರವಾಗಿ ಅಡ್ವೋಕೇಟ್ ಜನರಲ್ ಪ್ರಭುಲಿಂಗ ನಾವಡಗಿ ವಾದ ಮಂಡಿಸಿ, ಮೀಸಲಾತಿ ನಿಗದಿಪಡಿಸುವ ಅಧಿಕಾರ ಸರ್ಕಾರಕ್ಕೆ ಇದೆ. ಇದರಲ್ಲಿ ಯಾವದೇ ದುರುದ್ದೇಶ ಇಲ್ಲ. ಪ್ರತಿಯೋರ್ವರಿಗೂ ಸಾಮಾಜಿಕ ನ್ಯಾಯ ಸಿಗಬೇಕೆಂದು ಮೀಸಲಾತಿ ಹೊರಡಿಸಲಾಗಿದೆ ಎಂದು ಕೋರ್ಟ್‍ನ ಗಮನಕ್ಕೆ ತಂದರು. ವಾದ ಆಲಿಸಿದ ನ್ಯಾಯಾಧೀಶರಾದ ದೇವದಾಸ್ ಅವರು, ಈಗಾಗಲೇ ನಿಗದಿಯಾಗಿರುವ ಮೀಸಲಾತಿಗೆ ತಡೆ ನೀಡಿ, 21ಕ್ಕೆ ವಿಚಾರಣೆಯನ್ನು ಮುಂದೂಡಿ ಆದೇಶ ಹೊರಡಿಸಿದರು.

ಪ.ಪಂ. ಸ್ಥಿತಿಗತಿಗಳೇನು-ಸೋಮವಾರಪೇಟೆ: 11 ಸದಸ್ಯ ಬಲದ ಸೋಮವಾರಪೇಟೆ ಪಟ್ಟಣ ಪಂಚಾಯಿತಿಯಲ್ಲಿ ಬಿಜೆಪಿ ಕೇವಲ 3 ಸ್ಥಾನಗಳಲ್ಲಿ ಜಯಗಳಿಸಿದ್ದರೂ ಈಗಿನ ಮೀಸಲಾತಿ ಬಿಜೆಪಿಯ ಪರ ಬಂದಿತ್ತು. ಸೋಮವಾರಪೇಟೆ ಪಟ್ಟಣ ಪಂಚಾಯಿತಿ ಅಧ್ಯಕ್ಷ ಸ್ಥಾನ ಪರಿಶಿಷ್ಟ ಜಾತಿ ಹಾಗೂ ಉಪಾಧ್ಯಕ್ಷ ಸ್ಥಾನ ಹಿಂದುಳಿದ ವರ್ಗ (ಅ) ಕ್ಕೆ ಮೀಸಲಾತಿ ಬಂದಿದ್ದು, ಅಧ್ಯಕ್ಷ ಸ್ಥಾನಕ್ಕೆ ವಾರ್ಡ್ 2 ರ ಪಿ.ಕೆ. ಚಂದ್ರು ಹಾಗೂ ವಾರ್ಡ್ 3 ರ ನಳಿನಿಗಣೇಶ್ ಅರ್ಹರಾಗಿದ್ದರು. ಈರ್ವರೂ ಸಹ ಬಿಜೆಪಿಯಿಂದಲೇ ಜಯಗಳಿಸಿದ್ದಾರೆ.

ಉಪಾಧ್ಯಕ್ಷ ಸ್ಥಾನ ಹಿಂದುಳಿದ ವರ್ಗ (ಅ)ಕ್ಕೆ ನಿಗದಿಯಾಗಿದ್ದು, ಕಾಂಗ್ರೆಸ್‍ನ ಬಿ.ಸಿ. ವೆಂಕಟೇಶ್, ಬಿ.ಸಂಜೀವ, ಜೆಡಿಎಸ್‍ನ ನಾಗರತ್ನ, ಬಿಜೆಪಿಯ ಬಿ.ಆರ್. ಮಹೇಶ್, ಪಕ್ಷೇತರರಾಗಿರುವ ಶುಭಕರ್ ಅವರುಗಳು ಅರ್ಹತೆ ಹೊಂದಿದ್ದರು.11 ಸದಸ್ಯ ಬಲದ ಸೋಮವಾರಪೇಟೆ ಪಟ್ಟಣ ಪಂಚಾಯಿತಿಯಲ್ಲಿ ಬಿಜೆಪಿ 3, ಕಾಂಗ್ರೆಸ್ 4, ಜೆಡಿಎಸ್ 3 ಹಾಗೂ ಪಕ್ಷೇತರ (ಬಿಜೆಪಿ ಬಂಡಾಯ) ಸದಸ್ಯರೋರ್ವರು ಜಯಗಳಿಸಿದ್ದಾರೆ.

ಕುಶಾಲನಗರ ಪ.ಪಂ: ಕುಶಾಲನಗರ ಪಟ್ಟಣ ಪಂಚಾಯಿತಿ ಅಧ್ಯಕ್ಷ ಸ್ಥಾನ ಪರಿಶಿಷ್ಟ ಜಾತಿ, ಉಪಾಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಾಗಿದ್ದು, ಬಿಜೆಪಿಯಿಂದ ಸ್ಪರ್ಧಿಸಿದ್ದ 5ನೇ ವಾರ್ಡ್ ಸದಸ್ಯ ಜಯವರ್ದನ್, 2ನೇ ವಾರ್ಡ್‍ನಿಂದ ಕಾಂಗ್ರೆಸ್‍ನಿಂದ ಜಯಗಳಿಸಿದ್ದ ಪುಟ್ಟಲಕ್ಷ್ಮೀ ಅವರುಗಳು ಅಧ್ಯಕ್ಷ ಸ್ಥಾನಕ್ಕೆ ಅರ್ಹತೆ ಹೊಂದಿದ್ದರು. ಈ ಮಧ್ಯೆ ಶಾಸಕ-ಸಂಸದರ ಮತಗಳಿಂದ ಬಿಜೆಪಿ ಅಧಿಕಾರ ಹಿಡಿಯುವ ಅವಕಾಶಗಳಿದ್ದವು. ಉಳಿದಂತೆ ಉಪಾಧ್ಯಕ್ಷ ಸ್ಥಾನಕ್ಕೆ 7 ಮಂದಿ ಮಹಿಳಾ ಸದಸ್ಯರು ಅರ್ಹತೆ ಪಡೆದಿದ್ದರು. ಕುಶಾಲನಗರ ಪ.ಪಂ.ನ 16 ಸ್ಥಾನಗಳ ಪೈಕಿ ಬಿಜೆಪಿ 6, ಜೆಡಿಎಸ್ 4, ಕಾಂಗ್ರೆಸ್ 6 ಸ್ಥಾನಗಳಲ್ಲಿ ಜಯಗಳಿಸಿದೆ.

ವೀರಾಜಪೇಟೆ ಪ.ಪಂ: ವೀರಾಜಪೇಟೆ ಪಟ್ಟಣ ಪಂಚಾಯಿತಿಯ ಅಧ್ಯಕ್ಷ ಸ್ಥಾನ ಪರಿಶಿಷ್ಟ ಜಾತಿ ಮಹಿಳೆ ಹಾಗೂ ಉಪಾಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ ಮೀಸಲಾಗಿತ್ತು. ಇದರಿಂದಾಗಿ 17ನೇ ವಾರ್ಡ್‍ನಿಂದ ಜಯಗಳಿಸಿದ್ದ ಬಿಜೆಪಿಯ ಸದಸ್ಯೆ ಶಿವಕೇರಿಯ ಹೆಚ್.ಎಂ. ಪೂರ್ಣಿಮಾ, 4ನೇ ವಾರ್ಡ್ ಸದಸ್ಯೆ ಟಿ.ಆರ್. ಸುಶ್ಮಿತಾ ಅವರುಗಳು ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಲು ಅರ್ಹತೆ ಪಡೆದಿದ್ದರು. ವೀರಾಜಪೇಟೆ ಪಟ್ಟಣ ಪಂಚಾಯಿತಿಯ 18 ಸ್ಥಾನಗಳ ಪೈಕಿ ಬಿಜೆಪಿ 8, ಕಾಂಗ್ರೆಸ್ 6, ಜೆಡಿಎಸ್ 1 ಹಾಗೂ ಮೂವರು ಪಕ್ಷೇತರರು ಗೆಲುವು ಸಾಧಿಸಿದ್ದರು.

ಕಳೆದ 2018ರ ಅಕ್ಟೋಬರ್ 29 ರಂದು ಜಿಲ್ಲೆಯ ಮೂರು ಪಟ್ಟಣ ಪಂಚಾಯಿತಿಗಳಿಗೆ ಚುನಾವಣೆ ನಡೆದು, ಅಕ್ಟೋಬರ್ 31ರಂದು ಫಲಿತಾಂಶ ಹೊರಬಿದ್ದಿತ್ತು. ಇದಾದ ನಂತರ 2 ಬಾರಿ ಮೀಸಲಾತಿ ನಿಗದಿಯಾಗಿದ್ದರೂ ನ್ಯಾಯಾಲಯದ ಮೊರೆ ಹೋದ ಹಿನ್ನೆಲೆ ಚುನಾವಣೆ ನಡೆದಿರಲಿಲ್ಲ. ಇದೀಗ 08.10.2020ರಂದು ಹೊಸದಾಗಿ ಮೀಸಲಾತಿ ಪ್ರಕಟಿಸಿ, ಚುನಾವಣೆಗೆ ದಿನಾಂಕ ನಿಗದಿ ಮಾಡಿದ್ದರೂ ಸಹ ಮತ್ತೆ ನ್ಯಾಯಾಲಯದ ಕದ ತಟ್ಟಿರುವದರಿಂದ ಸದ್ಯಕ್ಕೆ ಆಡಳಿತ ಮಂಡಳಿ ರಚನೆ ಅಸಾಧ್ಯವಾಗಿದೆ.

ಇದೀಗ ಪಟ್ಟಣ ಪಂಚಾಯಿತಿ ಅಧ್ಯಕ್ಷ-ಉಪಾಧ್ಯಕ್ಷರ ಮೀಸಲಾತಿ ಗೊಂದಲದ ಚೆಂಡು ಹೈಕೋರ್ಟ್ ಅಂಗಳದಲ್ಲಿದ್ದು, ಈಗಿನ ಮೀಸಲಾತಿಯನ್ನೇ ಎತ್ತಿ ಹಿಡಿಯುತ್ತದೆಯೇ ಅಥವಾ ನೂತನ ಮೀಸಲಾತಿಗೆ ಸೂಚನೆ ನೀಡುತ್ತದೆಯೇ ಎಂಬುದನ್ನು ಕಾದು ನೋಡಬೇಕಿದೆ. ಈ ಬಗೆಗಿನ ಅರ್ಜಿ ವಿಚಾರಣೆಯನ್ನು ತಾ. 21ಕ್ಕೆ ಮುಂದೂಡಲಾಗಿದೆ.

- ವಿಜಯ್ ಹಾನಗಲ್