*ಸಿದ್ದಾಪುರ, ಅ. 19: ಚೆಟ್ಟಳ್ಳಿ ಮತ್ತು ಕೆದಕಲ್ ಗ್ರಾ.ಪಂ. ವ್ಯಾಪ್ತಿಯಲ್ಲಿ ತಾ.ಪಂ. ಸದಸ್ಯರ ಅನುದಾನದಲ್ಲಿ ಸುಮಾರು ರೂ. 13 ಲಕ್ಷಗಳ ವಿವಿಧ ಕಾಮಗಾರಿಗಳಿಗೆ ಸೋಮವಾರಪೇಟೆ ತಾ.ಪಂ. ಸದಸ್ಯ ಬಲ್ಲಾರಂಡ ಮಣಿ ಉತ್ತಪ್ಪ ಭೂಮಿಪೂಜೆ ನೆರವೇರಿಸಿದರು.
ಚೆಟ್ಟಳ್ಳಿ ಗ್ರಾ.ಪಂ.ನ ಈರಳೆ ಗ್ರಾಮದಲ್ಲಿ ರ್ಯಾಂಪ್ ನಿರ್ಮಾಣ, ಪೊನ್ನತ್‍ಮೊಟ್ಟೆಯಲ್ಲಿ ಸಾರ್ವಜನಿಕ ಕಾಲು ಸೇತುವೆ, ಕಾಲು ಸೇತುವೆಗೆ ಕೈಹಿಡಿ ನಿರ್ಮಾಣ, ಅಬ್ಯಾಲ ಗ್ರಾಮದ ಮಡಿಕೇರಿ ಮುಖ್ಯರಸ್ತೆಯಿಂದ ಸುಂಟಿಕೊಪ್ಪ ಮುಖ್ಯ ರಸ್ತೆಗೆ ಕಾಂಕ್ರಿಟ್ ಹಾಕುವುದು, ಈರಳೆವಳಮುಡಿ ಗ್ರಾಮದ ಸಾರ್ವಜನಿಕ ರಸ್ತೆ ಬದಿ ಕಾಂಕ್ರೀಟ್ ಚರಂಡಿ ಮತ್ತು ರಸ್ತೆ ನಿರ್ಮಾಣ, ದೊರೆ ಮನೆ ಹತ್ತಿರ ರ್ಯಾಂಪ್ ನಿರ್ಮಾಣ ಹಾಗೂ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲಾಗುತ್ತಿದೆ.
ಪೊನ್ನತ್‍ಮೊಟ್ಟೆ ಗ್ರಾಮದಲ್ಲಿ ಸಾರ್ವಜನಿಕ ಚರಂಡಿಗೆ ಸ್ಲ್ಯಾಬ್ ಹಾಕುವುದು, ಕೆದಕಲ್ ಗ್ರಾ.ಪಂ. ವ್ಯಾಪ್ತಿಯ ಹೊರೂರು ಅಂಗನವಾಡಿ ಕೇಂದ್ರದ ಮೇಲ್ಛಾವಣಿ ದುರಸ್ತಿ, ವರೂರು ಗ್ರಾಮದ ಅಂಗನವಾಡಿ ಕೇಂದ್ರಕ್ಕೆ ವಿಶೇಷಚೇತನ ಸ್ನೇಹಿ ರ್ಯಾಂಪ್ ನಿರ್ಮಾಣ, ಚೆಟ್ಟಳ್ಳಿ ಈರಳೆವಳಮುಡಿಯಲ್ಲಿ ಸಾರ್ವಜನಿಕ ಕುಡಿಯುವ ನೀರಿನ ಪೈಪ್‍ಲೈನ್ ವಿಸ್ತರಣೆ, ಜೇನುಕೊಲ್ಲಿ ತೆರೆದ ಬಾವಿ ದುರಸ್ತಿ ಕಾಮಗಾರಿ, ಮುಳ್ಳಂಡ ಕಾಶಿ ಅವರ ಮನೆÉಯಿಂದ ತ್ಯಾಜ್ಯ ನೀರು ಹರಿಯಲು ಸಾರ್ವಜನಿಕ ಚರಂಡಿ ನಿರ್ಮಿಸಲಾಗುತ್ತಿದೆ.
ಈ ಸಂದರ್ಭ ಮಾತನಾಡಿದ ಮಣಿಉತ್ತಪ್ಪ ತನ್ನ ಅವಧಿಯಲ್ಲಿ ಸಾಧ್ಯವಾದಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದು, ಮುಂದಿನ ದಿನಗಳಲ್ಲಿ ಶಾಸಕರ ಬಳಿಗೆ ನಿಯೋಗ ತೆರಳಿ ಬಾಕಿ ಇರುವ ಕಾಮಗಾರಿ ಪೂರ್ಣಗೊಳಿಸಲು ಮನವಿ ಮಾಡಿಕೊಳ್ಳಲಾಗುವುದೆಂದರು.
ಚೆಟ್ಟಳ್ಳಿ ಸಹಕಾರ ಸಂಘದ ನಿರ್ದೇಶಕ ಪೇರಿಯನ ಪೂಣಚ್ಚ, ಬಿಜೆಪಿ ತಾಲೂಕು ಮಂಡಲದ ಕಾರ್ಯದರ್ಶಿ ಮೇರಿ ಅಂಬುದಾಸ್, ಪ್ರಮುಖರಾದ ಮುದ್ದಮ್ಮಯ್ಯ, ಒಬಿಸಿ ಮೋರ್ಚಾದ ಅಧ್ಯಕ್ಷ ಸುನೀಲ್, ರೈತ ಮೋರ್ಚಾದ ಅಧ್ಯಕ್ಷ ಯದುಕುಮಾರ್, ಬಿಜೆಪಿ ಯುವ ಮೋರ್ಚಾದ ಅಧ್ಯಕ್ಷ ಅರುಣ್ ಕುಮಾರ್, ಈರಳೆವಳಮುಡಿ ವಾರ್ಡ್‍ನ ಅಧ್ಯಕ್ಷ ಲೋಕೇಶ್, ಪ್ರಮುಖರಾದ ಪೇರಿಯನ ಉದಯ, ಆನಂದ್, ಅಂಬುದಾಸ್ ಮತ್ತಿತರರು ಹಾಜರಿದ್ದರು.