ನಾಪೋಕ್ಲು, ಅ. 19: ನಾಪೋಕ್ಲು ಸಮೀಪದ ಕಲ್ಲುಮೊಟ್ಟೆ ನಿವಾಸಿ ಇಸಾಕ್ ಎಂಬವರ ಮೇಲೆ ಕ್ಷುಲ್ಲಕ ಕಾರಣಕ್ಕೆ ಮಾರಣಾಂತಿಕ ಹಲ್ಲೆ ನಡೆಸಿದ ಆರೋಪದಡಿ ನಾಪೋಕ್ಲುವಿನ ಸಾಮಾಜಿಕ ಕಾರ್ಯಕರ್ತ ಕೆ.ಎ. ಹ್ಯಾರಿಸ್ ಹಾಗೂ ಆತನ ಸಹೋದರರಾದ ಶರೀಫ್ ಮತ್ತು ಖಾದರ್ ಎಂಬವರುಗಳ ವಿರುದ್ಧ ನಾಪೋಕ್ಲು ಠಾಣೆಯಲ್ಲಿ ಕೊಲೆಯತ್ನ ಪ್ರಕರಣ ದಾಖಲಾಗಿದೆ.

ಗಾಯಗೊಂಡಿರುವ ಇಸಾಕ್ ಅವರನ್ನು ಮಡಿಕೇರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗೆ ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿದೆ.

ಈ ನಡುವೆ ಕಲ್ಲುಮೊಟ್ಟೆಯ ಅಂಬೇಡ್ಕರ್ ಯುವಕ ಸಂಘದ ವತಿಯಿಂದ ನಾಪೋಕ್ಲು ಠಾಣೆಗೆ ಮನವಿಯೊಂದನ್ನು ನೀಡಲಾಗಿದ್ದು, ಸಂಘದ ಸದಸ್ಯರಾದ ಇಸಾಕ್ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವ ಹ್ಯಾರಿಸ್ ಗ್ರಾಮದಲ್ಲಿ ಈ ಹಿಂದಿನಿಂದಲೂ ವಿನಾಕಾರಣ ಕಲಹಗಳನ್ನು ಸೃಷ್ಟಿಸಿ ಶಾಂತಿ ಸುವ್ಯವಸ್ಥೆಯನ್ನು ಕದಡುತ್ತಿದ್ದು, ಈ ಹಿನ್ನೆಲೆಯಲ್ಲಿ ಆತನನ್ನು ಹಾಗೂ ಆತನ ಸಹೋದರರನ್ನು ಬಂಧಿಸಬೇಕು. ಜೊತೆಗೆ ಹ್ಯಾರಿಸ್‍ನನ್ನು ಗಡಿಪಾರು ಮಾಡಬೇಕೆಂದು ಕೋರಲಾಗಿದೆ.

ಕಲ್ಲುಮೊಟ್ಟೆಯ ಉಷಾ ಸ್ತ್ರೀಶಕ್ತಿ ಸಂಘದಿಂದ ವತಿಯಿಂದಲೂ ಹ್ಯಾರಿಸ್ ಹಾಗೂ ಸಹೋದರರ ವಿರುದ್ಧ ಸೂಕ್ತ ಕಾನೂನು ಕ್ರಮಕೈಗೊಳ್ಳುವಂತೆ ಮನವಿ ನೀಡಲಾಗಿದೆ.

ಮನವಿ ಸಲ್ಲಿಕೆ ಸಂದರ್ಭ ಅಂಬೇಡ್ಕರ್ ಯುವಕ ಸಂಘದ ಅಧ್ಯಕ್ಷ ಶಶಿ ಎಂ.ಎಂ, ನಿರ್ದೇಶಕ ಎಂ.ಎಂ. ಬಷೀರ್ ಆಲಿ, ಗ್ರಾಮದ ಪ್ರಮುಖರಾದ ಟಿ.ಪಿ. ರಮೇಶ್, ಮಹಮ್ಮದ್ ಪಿ.ಎಂ., ಮುಸಾಮಿಲ್ ಪಿ.ಎಂ., ಪಿ.ಎ. ಆಲಿ, ಸೌಕತ್ ಆಲಿ, ಅಬ್ದುಲ್ ಸಲಾಂ, ಪಿ.ಎ. ಹುಸೈನಾರ್, ಜಕ್ರಿಯ, ಜುಬೇರ್, ಜಕ್ರಿಯ, ಅನಿಸ್ ಸುಹೇಲ್, ಫಯಾಜ್, ಪಿ.ಎ. ರಫೀಕ್ ಇನ್ನಿತರರು ಇದ್ದರು.

ಇದೇ ಪ್ರಕರಣದಲ್ಲಿ ಗಾಯಾಳು ಇಸಾಕ್ ಹಾಗೂ ಅವರ ಸಹೋದರ ಬಷೀರ್ ಎಂಬವರುಗಳು ತಮಗೂ ಹಾಗೂ ತನ್ನ ಪತ್ನಿಗೆ ಜೀವ ಬೆದರಿಕೆಯೊಡ್ಡಿದ್ದಾರೆ ಎಂದು ಹ್ಯಾರಿಸ್ ಹಾಗೂ ಇತರರು ನಾಪೋಕ್ಲು ಠಾಣೆಯಲ್ಲಿ ಪ್ರತಿದೂರು ಸಲ್ಲಿಸಿದ್ದಾರೆ. ಪ್ರಕರಣ ದಾಖಲಾಗಿದೆ.

-ದುಗ್ಗಳ ಸದಾನಂದ