ಮಡಿಕೇರಿ, ಅ. 20: ತಾವಳಗೇರಿ ಮೂಂದ್‍ನಾಡ್ ಕೊಡವ ಸಮಾಜದ (ಟಿ. ಶೆಟ್ಟಿಗೇರಿ) ಅಧ್ಯಕ್ಷರಾಗಿದ್ದ ಟಿ. ಶೆಟ್ಟಿಗೇರಿ ಕೊರಕೋಟು ಗ್ರಾಮದ ನಿವಾಸಿ ಕೋಟ್ರಮಾಡ ಅರುಣ್ ಅಪ್ಪಣ್ಣ (63) ಅವರು ತಾ. 20 ರಂದು ನಿಧನರಾದರು. ಮೃತರು ಪತ್ನಿ, ಓರ್ವ ಪುತ್ರ, ಓರ್ವ ಪುತ್ರಿಯನ್ನು ಅಗಲಿದ್ದಾರೆ.

ಇವರು ಟಿ. ಶೆಟ್ಟಿಗೇರಿ ಕೃಷಿ ಪತ್ತಿನ ಸಹಕಾರ ಸಂಘದ ಮಾಜಿ ಅಧ್ಯಕ್ಷರು, ಹಾಲಿ ನಿರ್ದೇಶಕರಾಗಿದ್ದರು. ಈ ಹಿಂದೆ ಬಿಜೆಪಿ ಸ್ಥಾನೀಯ ಸಮಿತಿಯ ಅಧ್ಯಕ್ಷರಾಗಿ ಹಾಗೂ ಇನ್ನಿತರ ಸಂಘ-ಸಂಸ್ಥೆಗಳಲ್ಲೂ ಇವರು ಕರ್ತವ್ಯನಿರ್ವಹಿಸಿದ್ದರು. ಇವರ ಅವಧಿಯಲ್ಲಿ ಟಿ. ಶೆಟ್ಟಿಗೇರಿ ಕೊಡವ ಸಮಾಜದಲ್ಲಿ ‘ಚಂಗ್ರಾಂದಿ ಪತ್ತಾಲೋದಿ’ ಕಾರ್ಯಕ್ರಮವನ್ನು ಪ್ರಾರಂಭಿಸಲಾಗಿತ್ತು.

ಸಂತಾಪ ಸಭೆ: ಅರುಣ್ ಅಪ್ಪಣ್ಣ ನಿಧನಕ್ಕೆ ಇಂದು ಟಿ. ಶೆಟ್ಟಿಗೇರಿ ಕೊಡವ ಸಮಾಜದಲ್ಲಿ ಸಂತಾಪ ಸಭೆ ನಡೆಸಲಾಯಿತು. ಉಪಾಧ್ಯಕ್ಷ ಚೊಟ್ಟೆಯಂಡಮಾಡ ಬೋಸ್ ವಿಶ್ವನಾಥ್, ಕಾರ್ಯದರ್ಶಿ ಮನ್ನಿರ ರಮೇಶ್, ಖಜಾಂಚಿ ಚೊಟ್ಟೆಯಂಡಮಾಡ ವಿಶು, ನಾಡ್‍ತಕ್ಕ ಕೈಬುಲಿರ ಹರೀಶ್ ಅಪ್ಪಯ್ಯ, ಕಟ್ಟೆರ ಈಶ್ವರ, ಚಟ್ಟಂಗಡ ರವಿ ಸುಬ್ಬಯ್ಯ, ತಡಿಯಂಗಡ ಕರುಂಬಯ್ಯ, ಆಂಡಮಾಡ ಸತೀಶ್, ಮಣಿರ ವಿಜಯ್, ಕೋಟ್ರಮಾಡ ಕುಟುಂಬಸ್ಥರು ಮತ್ತಿತರರು ಹಾಜರಿದ್ದರು.

ಪತ್ತಾಲೋದಿ ದಿನವಾದ ತಾ. 27 ರಂದು ಸಾರ್ವಜನಿಕ ಶ್ರದ್ಧಾಂಜಲಿ ಕಾರ್ಯಕ್ರಮ ನಡೆಸಲು ಈ ಸಂದರ್ಭ ತೀರ್ಮಾನಿಸಲಾಯಿತು.