ಪಾಲಿಬೆಟ್ಟ, ಅ. 19: ಹತ್ರಾಸ್‍ನಲ್ಲಿ ದಲಿತ ಯುವತಿಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿ ಕೊಲೆ ಮಾಡಿರುವ ಆರೋಪಿಗಳ ವಿರುದ್ಧ ಸೂಕ್ತ ಕ್ರಮಕೈಗೊಂಡು ಸಂತ್ರಸ್ತ ಕುಟುಂಬಕ್ಕೆ ನ್ಯಾಯ ದೊರಕಿಸಿಕೊಡಬೇಕೆಂದು ಒತ್ತಾಯಿಸಿ ಬಸ್ ನಿಲ್ದಾಣದಲ್ಲಿ ವೀರಾಜಪೇಟೆ ಬ್ಲಾಕ್ ಯುವ ಕಾಂಗ್ರೆಸ್ ಉಪಾಧ್ಯಕ್ಷ ಸಮೀರ್ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು.

ವೀರಾಜಪೇಟೆ ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ಸೋಮಣ್ಣ ಮಾತನಾಡಿ, ವಿಶ್ವವೇ ತಲೆ ತಗ್ಗಿಸುವಂಥ ಅತ್ಯಾಚಾರ ಘಟನೆ ನಡೆದಿದ್ದು, ಆರೋಪಿಗಳಿಗೆ ತಕ್ಕ ಶಿಕ್ಷೆಯಾಗಬೇಕೆಂದರು.

ಕಾಂಗ್ರೆಸ್ ಮುಖಂಡ ಸಿ.ಎ. ಹಂಸ ಮಾತನಾಡಿ, ಬಿಜೆಪಿ ಆಡಳಿತಾವಧಿಯಲ್ಲಿ ದೇಶದ ಹಲವೆಡೆ ಇಂತಹ ಘಟನೆಗಳು ಮರುಕಳಿಸುತ್ತಲೇ ಇದೆ ಎಂದು ದೂರಿದರು.

ಜಿಲ್ಲಾ ಪಂಚಾಯಿತಿ ಸದಸ್ಯೆ ಲೀಲಾವತಿ ಮಾತನಾಡಿ, ದೇಶದಲ್ಲಿ ಹಲವೆಡೆ ಅತ್ಯಾಚಾರ ಕೊಲೆಯಂತಹ ಘಟನೆಗಳು ನಿರಂತರವಾಗಿ ನಡೆಯುತ್ತಿದ್ದು ರಕ್ಷಣೆ ನೀಡಬೇಕಾದ ಕೇಂದ್ರ ಸರಕಾರ ಮೌನ ವಹಿಸಿದೆ ಎಂದು ದೂರಿದರು.

ಮಾಲ್ದಾರೆ ವಲಯ ಕಾಂಗ್ರೆಸ್ ಅಧ್ಯಕ್ಷ ಸಜಿ ಥಾಮಸ್ ಮಾತನಾಡಿ, ದೇಶದಲ್ಲಿ ನಡೆಯುತ್ತಿರುವ ಇಂತಹ ಘಟನೆಗಳ ವಿರುದ್ಧ ಎಲ್ಲರೂ ಒಗ್ಗಟ್ಟಾಗಿ ಹೋರಾಡಬೇಕಾದ ಅವಶ್ಯಕತೆ ಇದೆ ಎಂದು ಹೇಳಿದರು.

ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ಗಣೇಶ್ ಮಾತನಾಡಿ, ಇಂತಹ ಅನ್ಯಾಯದ ವಿರುದ್ಧ ದಲಿತ ಹಿಂದುಳಿದ ಅಲ್ಪಸಂಖ್ಯಾತ ಬಂಧುಗಳನ್ನು ಒಟ್ಟು ಸೇರಿಸಿ ಮುಂದಿನ ದಿನಗಳಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದರು

ತಾಲೂಕು ಪಂಚಾಯಿತಿ ಸದಸ್ಯೆ ಚಿನ್ನಮ್ಮ ಮಾತನಾಡಿ, ಬಿಜೆಪಿ ಸರಕಾರ ಶಾಂತಿ ಸುವ್ಯವಸ್ಥೆ ಕಾಪಾಡುವಲ್ಲಿ ವಿಫಲವಾಗಿದೆ ಎಂದು ಆರೋಪಿಸಿದರು.

ಈ ಸಂದರ್ಭ ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ಹೆಚ್.ಸಿ. ಸಣ್ಣಯ್ಯ, ವಲಯ ಕಾಂಗ್ರೆಸ್ ಬ್ಲಾಕ್ ಕಾರ್ಯದರ್ಶಿ ಯೋಗೇಶ್, ಮುರುಗ, ಗ್ರಾ.ಪಂ. ಮಾಜಿ ಸದಸ್ಯರಾದ ಮಹಮ್ಮದ್ ಅಲಿ, ಅಬೂಬಕ್ಕರ್, ಲಲಿತ, ಗಣೇಶ್, ಮಹಿಳಾ ಸಂಘದ ಪುಟ್ಟಮ್ಮ, ಯುವ ಕಾಂಗ್ರೆಸ್‍ನ ಪ್ರಮುಖರಾದ ಸುಹೈಲ್, ರಫೀಕ್, ರಂಜು, ಮನ್ಸೂರ್ ಸೇರಿದಂತೆ ಮತ್ತಿತರರು ಹಾಜರಿದ್ದರು.