ಸೋಮವಾರಪೇಟೆ, ಅ. 20: ಜಿಲ್ಲೆಯ ಮಟ್ಟಿಗೆ ಅರೇಬಿಕಾ ಕಾಫಿಯನ್ನು ಹೆಚ್ಚು ಬೆಳೆಯುತ್ತಿರುವ ಉತ್ತರ ಕೊಡಗಿನಾದ್ಯಂತ ಪ್ರಸಕ್ತ ವರ್ಷ ಅಕಾಲಿಕವಾಗಿ ಅರೇಬಿಕಾ ಕಾಫಿ ಹಣ್ಣಾಗುತ್ತಿದ್ದು, ಬೆಳೆಗಾರರು ಫಸಲು ನಷ್ಟ ಅನುಭವಿಸಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ.

ಸೋಮವಾರಪೇಟೆ ತಾಲೂಕಿನಲ್ಲಿ ಅರೇಬಿಕಾ ಕಾಫಿಯನ್ನು ಹೆಚ್ಚಾಗಿ ಬೆಳೆಯುತ್ತಿದ್ದು. ಒಟ್ಟು 28,540 ಹೆಕ್ಟೇರ್‍ನಲ್ಲಿ ಕಾಫಿ ಬೆಳೆಯಲಾಗುತ್ತಿದೆ. ಅರೇಬಿಕಾ ಕಾಫಿ ಬೆಳೆಯಲು ಸೂಕ್ತ ಪ್ರದೇಶವಾಗಿರುವುದರಿಂದ 22,940 ಹೆ.ನಲ್ಲಿ ಅರೇಬಿಕಾ, 5,600 ಹೆ.ನಲ್ಲಿ ರೋಬಸ್ಟಾ ಬೆಳೆಯಲಾಗುತ್ತಿದೆ.

ಸೆಪ್ಟೆಂಬರ್ ಮತ್ತು ಅಕ್ಟೋಬರ್ ತಿಂಗಳಿನಲ್ಲೂ ಆಗಾಗ್ಗೆ ಮಳೆಯಾಗುತ್ತಿದ್ದು, ನಡುವೆ ಬಿಸಿಲಿನ ವಾತಾವರಣ ಇರುವದರಿಂದ ಹವಾಮಾನದಲ್ಲಿ ವೈಪರಿತ್ಯ ಉಂಟಾಗಿ ಅವಧಿಗೂ ಮುನ್ನವೇ ಅರೇಬಿಕಾ ಕಾಫಿ ಹಣ್ಣಾಗುತ್ತಿದೆ.

ತಾಲೂಕಿನ ಪುಷ್ಪಗಿರಿ ಬೆಟ್ಟತಪ್ಪಲಿನ ಶಾಂತಳ್ಳಿ ಹೋಬಳಿಯಲ್ಲಿ ಇಂದಿಗೂ ಶೀತಮಯ ವಾತಾವರಣವಿದ್ದು, ಅರೇಬಿಕಾ ಕಾಫಿ ಮಳೆ-ಬಿಸಿಲಿನಿಂದಾಗಿ ನೆಲಕ್ಕಚ್ಚುತ್ತಿದೆ. ಇದರೊಂದಿಗೆ ಶನಿವಾರಸಂತೆ, ಕೊಡ್ಲಿಪೇಟೆ, ಸೋಮವಾರಪೇಟೆ ಕಸಬಾ, ಸುಂಟಿಕೊಪ್ಪ ಹೋಬಳಿ ವ್ಯಾಪ್ತಿಯ ಗ್ರಾಮಗಳ ಕೆಲ ತೋಟಗಳಲ್ಲಿ ಈಗಾಗಲೇ ಶೇ.10 ರಿಂದ 20ರಷ್ಟು ಕಾಫಿ ಹಣ್ಣಾಗಿದ್ದು, ಕೊಯ್ಲು ಮಾಡಿ ಒಣಗಿಸಲು ಸಾಧ್ಯವಾಗದೇ ಪರಿತಪಿಸುತ್ತಿದ್ದಾರೆ.

ಮುಂಗಾರು ಕಳೆದ ನಂತರ ನವೆಂಬರ್, ಡಿಸೆಂಬರ್‍ನಲ್ಲಿ ಕಾಫಿ ಕೊಯ್ಲಿಗೆ ಬರುತ್ತದೆ. ಆದರೆ ಪ್ರಸಕ್ತ ವರ್ಷ ಸೆಪ್ಟೆಂಬರ್-ಅಕ್ಟೋಬರ್ ತಿಂಗಳಲ್ಲಿಯೇ ಹಣ್ಣಾಗುತ್ತಿರುವದರಿಂದ ಬೆಳೆಗಾರರ ವರ್ಗದಲ್ಲಿ ಆತಂಕ ಎದುರಾಗಿದೆ.

ಹಣ್ಣು ಕೊಯ್ಲು ಮಾಡಿದ ನಂತರ 24 ಗಂಟೆಗಳ ಒಳಗೆ ಪಲ್ಪಿಂಗ್ ಮಾಡಬೇಕಿದೆ. ಕಾಫಿ ಬೀಜಗಳನ್ನು ನಾಲ್ಕೈದು ದಿನ ಬಿಸಿಲಿನಲ್ಲಿ ಒಣಗಿಸಿದರೆ ಮಾತ್ರ ಗುಣಮಟ್ಟ ಕಾಯ್ದುಕೊಳ್ಳಲು ಸಾಧ್ಯ. ಕಪ್ಪು ಬಣ್ಣಕ್ಕೆ ತಿರುಗಿದ ಪಾರ್ಚ್‍ಮೆಂಟ್ ಕಾಫಿಯನ್ನು ಕೊಳ್ಳುವವರು ಇಲ್ಲದಂತಾಗುತ್ತದೆ. ಅಲ್ಲದೆ ಈಗ ಯಾವುದೇ ಪಲ್ಪಿಂಗ್ ಘಟಕಗಳು ಕಾರ್ಯನಿರ್ವಹಿಸುತ್ತಿಲ್ಲ.

ಹಣ್ಣಾದ ಕಾಫಿಯನ್ನು ಗಿಡದಲ್ಲೇ ಬಿಟ್ಟರೆ, ಕೊಳೆತು ನೆಲಕ್ಕೆ ಬಿದ್ದು ಮಣ್ಣು ಸೇರುತ್ತವೆ. ಕೊಯ್ಲು ಮಾಡಿದರೆ, ಒಣಗಿಸಲು ಸಾಧ್ಯವಾಗದೆ ಕೊಳೆತು ಹೋಗುತ್ತವೆ. ಒಟ್ಟಾರೆ ತ್ರಿಶಂಕು ಸ್ಥಿತಿಯಲ್ಲಿ ಕೃಷಿಕ ವರ್ಗ ಸಿಲುಕಿದೆ ಎಂದು ಹರಗ ಗ್ರಾಮದ ಕೃಷಿಕ ಶರಣ್, ಶಾಂತಳ್ಳಿಯ ಸುಂದರ್ ಅವರುಗಳು ಅಭಿಪ್ರಾಯಿಸಿದ್ದಾರೆ.

ಕಳೆದ ಮೂರು ವರ್ಷಗಳಿಂದ ಅಕಾಲಿಕ ಮಳೆ ಹಾಗೂ ಧಾರಾಕಾರ ಮಳೆಯಿಂದ ಕಾಫಿ ಫಸಲು ಹಾನಿಯಾಗುತ್ತಿದೆ. ಮಾರ್ಚ್, ಏಪ್ರಿಲ್ ತಿಂಗಳಲ್ಲಿ ಹದವಾದ ಮಳೆ ಬಿದ್ದರೆ ಮಾತ್ರ ಕಾಫಿ ಹೂ ಅರಳುತ್ತದೆ. ಆದರೆ ಕೆಲವೊಮ್ಮೆ ಜನವರಿ, ಫೆಬ್ರವರಿ ತಿಂಗಳಲ್ಲಿ ಅಕಾಲಿಕ ಮಳೆ ಬಿದ್ದ ಹಿನ್ನೆಲೆಯಲ್ಲಿ ಕೆಲವು ಕಡೆ ಹೂ ಅರಳಿ, ಈಗ ಹಣ್ಣಾಗುತ್ತಿದೆ.

ಈ ಸಮಸ್ಯೆಯಿಂದ ದೊಡ್ಡಮಟ್ಟದ ಹಾನಿಯಾಗಿದೆ. ಮಳೆ ಜಾಸ್ತಿಯಾಗಿ ಕಾಫಿ ತೋಟಗಳು ರೋಗಪೀಡಿತವಾಗಿವೆ. ಎಲೆಚುಕ್ಕಿ ಹಾಗು ಕೊಳೆರೋಗದಿಂದಲೂ ಕಾಫಿ ಕಾಯಿ ಉದುರುತ್ತಿದೆ. ಪ್ರಸಕ್ತ ವರ್ಷ ಕಾಫಿ ಫಸಲನ್ನು ಉಳಿಸಿಕೊಳ್ಳುವುದು ಕಷ್ಟಸಾಧ್ಯವಾಗಿದ್ದು, ನಿರೀಕ್ಷಿತ ಆದಾಯ ಗಳಿಸಲು ಸಾಧ್ಯವಾಗುವದಿಲ್ಲ ಎಂದು ಕಾಫಿ ಬೆಳೆಗಾರರ ಹೋರಾಟ ಸಮಿತಿ ಅಧ್ಯಕ್ಷ ಮುದ್ದಪ್ಪ ತಿಳಿಸಿದ್ದಾರೆ.

ಫೆಬ್ರವರಿಯಲ್ಲಿ ಬಿದ್ದ ಮಳೆಯಿಂದ, ಬೇಗ ಹೂ ಅರಳಿ, ಶೇ.5ರಷ್ಟು ಕಾಫಿ ಹಣ್ಣಾಗಿರಬಹುದು. ಹಣ್ಣನ್ನು ಹಾಗೇ ಬಿಟ್ಟರೆ, ಬೇರ್ರಿಬೋರರ್ ಕೀಟ ಹಾವಳಿ ಜಾಸ್ತಿಯಾಗಿ ಉಳಿದ ಫಸಲಿಗೂ ಹಾನಿಯಾಗುತ್ತದೆ. ಹಣ್ಣನ್ನು ಕೊಯ್ಲು ಮಾಡಿ, ಬಿಸಿನೀರಿನಲ್ಲಿ ನೆನೆಸಿ ಒಣಗಿಸಿ ಚೆರ್ರಿ ಕಾಫಿ ಮಾಡಿಕೊಳ್ಳಬೇಕು ಎಂದು ಕಾಫಿ ಮಂಡಳಿಯ ಹಿರಿಯ ಸಂಪರ್ಕಾಧಿಕಾರಿ ಮುರುಳೀಧರ್ ಅವರು ಬೆಳೆಗಾರರಿಗೆ ಸಲಹೆ ನೀಡಿದ್ದಾರೆ.