ಶನಿವಾರಸಂತೆ, ಅ. 19: ಸಮೀಪದ ಕೊಡ್ಲಿಪೇಟೆಯ ಶ್ರೀ ರಾಮಲಿಂಗ ಚೌಡೇಶ್ವರಿ ದೇವಸ್ಥಾನದಲ್ಲಿ ಶರನ್ನವರಾತ್ರಿ ಪ್ರಯುಕ್ತ ಶನಿವಾರದಿಂದ ನವರಾತ್ರಿಯ ದುರ್ಗಾರಾಧನೆ ಆರಂಭವಾಯಿತು.
ಮೊದಲ ದಿನ ದೇವಸ್ಥಾನದಲ್ಲಿ ಬೆಳಿಗ್ಗೆ ದೇವಿಗೆ ವಿಶೇಷ ಅಲಂಕಾರ ಮಾಡಿ ಅಖಂಡ ದೀಪ ಸ್ಥಾಪನ, ದುರ್ಗಾ ಕಲಶ ಸ್ಥಾಪನ ಪೂರ್ವಕ ವಿಧಿವತ್ತಾಗಿ ದುರ್ಗಾರಾಧನೆ ಆರಂಭಿಸಲಾಯಿತು. ತಾ. 26 ರ ವಿಜಯದಶಮಿಯವರೆಗೆ ನವದುರ್ಗಾ ಪೂಜಾ ಕೈಂಕರ್ಯಗಳು ಅರ್ಚಕ ಮಹಾಬಲ ಅವರ ನೇತೃತ್ವದಲ್ಲಿ ನಡೆಯಲಿದೆ.
ಕೋವಿಡ್-19 ಹಿನ್ನೆಲೆ ದೇವಸ್ಥಾನದಲ್ಲಿ ಭಕ್ತಾದಿಗಳಿಗೆ ನಿಯಮಿತ ಸಮಯದ ದೇವಿ ದರ್ಶನವಾಗಲಿದೆ. ಕಡ್ಡಾಯವಾಗಿ ಮಾಸ್ಕ್ ಧರಿಸಿ, ಸ್ಯಾನಿಟೈಸರ್ ಬಳಸಿ ಅಂತರ ಕಾಪಾಡಿಕೊಂಡು ಭಕ್ತರು ಪೂಜಾ ಸಮಯದಲ್ಲಿ ಪಾಲ್ಗೊಳ್ಳಬಹುದು. ತೀರ್ಥ - ಪ್ರಸಾದವಾಗಲೀ, ಅನ್ನಸಂತರ್ಪಣೆಯಾಗಲಿ ಇರುವುದಿಲ್ಲ ಎಂದು ದೇವಸ್ಥಾನ ಸಮಿತಿ ಆಡಳಿತ ಮಂಡಳಿ ತಿಳಿಸಿದೆ.