ಇಂಗ್ಲೆಂಡ್‍ನಿಂದ ಕೋವಿಡ್ ಲಸಿಕೆ
ಲಂಡನ್, ಅ. 18: ಕೋವಿಡ್-19 ವಿರುದ್ಧದ ಲಸಿಕೆ ಹೊಸ ವರ್ಷದ ಆರಂಭದ ವೇಳೆಗೆ ಸಿದ್ಧವಾಗಬಹುದು ಎಂದು ಇಂಗ್ಲೆಂಡ್‍ನ ಹಿರಿಯ-ವೈದ್ಯಕೀಯ ಮುಖ್ಯಸ್ಥರೊಬ್ಬರು ಹೇಳಿದ್ದಾರೆ. ಆಕ್ಸ್ ಫರ್ಡ್ ಯೂನಿವರ್ಸಿಟಿ ಸೃಷ್ಟಿಸಿರುವ ಲಸಿಕೆಯನ್ನು ಅಸ್ಟ್ರಾಜಿನೆಕಾ ಕಂಪೆನಿ ತಯಾರಿಸುತ್ತಿದ್ದು, ಡಿಸೆಂಬರ್‍ನಲ್ಲಿ ಕ್ರಿಸ್‍ಮಸ್ ನಂತರ ಸಿದ್ಧಗೊಳ್ಳಬಹುದೆಂದು ಇಂಗ್ಲೆಂಡ್ ಉಪ ಮುಖ್ಯ ಆರೋಗ್ಯಾಧಿಕಾರಿ ಜೊನಾಥನ್ ವ್ಯಾನ್-ಟಾಮ್ ಸಂಸತ್ ಸದಸ್ಯರಿಗೆ ಹೇಳಿರುವುದಾಗಿ ವರದಿಯಾಗಿದೆ. ಕೊರೊನಾ ವೈರಸ್ ಸಾಂಕ್ರಾಮಿಕ ಕುರಿತ ಸರ್ಕಾರದ ಸಲಹೆಗಾರರಲ್ಲಿ ಜೊನಾಥನ್ ವ್ಯಾನ್-ಟಾಮ್ ಕೂಡಾ ಒಬ್ಬರಾಗಿದ್ದಾರೆ. ಭಾರತದಲ್ಲಿ ಸೆರಮ್ ಇನ್ಸಿಟಿಟ್ಯೂಟ್ ಆಫ್ ಇಂಡಿಯಾ ಈ ಲಸಿಕೆಯ ಪಾಲುದಾರರಾಗಿದ್ದು, ಪ್ರಯೋಗಗಳು ನಡೆಯುತ್ತಿವೆ. ಕ್ರಿಸ್‍ಮಸ್ ನಂತರ ಕೋವಿಡ್-19 ಲಸಿಕೆಯನ್ನು ರೋಗಿಗಳಿಗೆ ನೀಡಲಾಗುವುದು, ಇದು ಆಸ್ಪತ್ರೆಗೆ ದಾಖಲಾಗುವ ಸೋಂಕಿತರು ಹಾಗೂ ಸಾವಿನ ಪ್ರಮಾಣದ ಮೇಲೆ ಮಹತ್ವದ ಪರಿಣಾಮ ಬೀರಲಿದೆ.
ಫೆಬ್ರವರಿಯಲ್ಲಿ ಕಡಿಮೆಯಾಗಲಿದೆ ಕೊರೊನಾ
ನವದೆಹಲಿ, ಅ. 18: ದೇಶದಲ್ಲಿ ಉತ್ತುಂಗಕ್ಕೇರಿರುವ ಕೋವಿಡ್-19 ಸಾಂಕ್ರಾಮಿಕ ರೋಗ ಒಂದು ವೇಳೆ ಸೂಕ್ತ ರೀತಿಯಲ್ಲಿ ಸುರಕ್ಷತಾ ಕ್ರಮಗಳನ್ನು ಮುಂದುವರೆಸಿದರೆ ಮುಂದಿನ ವರ್ಷದ ಫೆಬ್ರವರಿಯೊಳಗೆ ಸಕ್ರಿಯ ಪ್ರಕರಣಗಳು 40 ಸಾವಿರಕ್ಕಿಂತ ಕಡಿಮೆಯಾಗಲಿವೆ ಎಂದು ಕೇಂದ್ರ ಸರ್ಕಾರ ರಚಿಸಿರುವ ತಜ್ಞರ ಸಮಿತಿ ಭಾನುವಾರ ಹೇಳಿದೆ. ಕೋವಿಡ್-19 ಪ್ರಗತಿಗೆ ರಾಷ್ಟ್ರೀಯ ಸೂಪರ್ ಮಾಡೆಲ್‍ನ್ನು ವೀಕ್ಷಿಸಲು ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಈ ಸಮಿತಿಯನ್ನು ಜೂನ್ 2020 ರಂದು ರಚಿಸಿತು. ಪ್ರೊ. ಎಂ. ವಿದ್ಯಾಸಾಗರ್, ಎಫ್‍ಆರ್‍ಎಸ್ (ಐಐಟಿ ಹೈದ್ರಾಬಾದ್ ಮುಖ್ಯಸ್ಥ) ಪ್ರೊ. ಎಂ. ಅಗರ್‍ವಾಲ್ (ಐಐಟಿ ಕಾನ್ಫುರ ಮುಖ್ಯಸ್ಥ) ಪ್ರೊ. ಬಿ. ಬಾಗ್ಚಿ (ಐಐಎಸ್ ಸಿ ಬೆಂಗಳೂರು) ಪ್ರೊ. ಎ. ಬೊಸ್ (ಎಸ್‍ಐಸ್‍ಐ ಕೊಲ್ಕತ್ತಾ) ಡಾ. ಜಿ. ಕಂಗ್, ಎಫ್‍ಆರ್‍ಎಸ್ (ಸಿಎಂಸಿ ವೆಲ್ಲರೂ) ಲೆಫ್ಟಿನೆಂಟ್ ಜನರಲ್ ಎಂ. ಕಾನಿಟ್ಕರ್ ಮತ್ತು ಪ್ರೊಫೆಸರ್ ಎಸ್.ಕೆ. ಪಾಲ್ (ಐಎಸ್‍ಐ ಕೊಲ್ಕತ್ತಾ) ಅವರು ಈ ಸಮಿತಿಯ ಸದಸ್ಯರಾಗಿದ್ದಾರೆ. ಮುಂಬರುವ ಹಬ್ಬದ ಸಂದರ್ಭ ಸೋಂಕಿನ ಪ್ರಮಾಣ ಹೆಚ್ಚಾಗಬಹುದು ಮತ್ತು ಮುನ್ನೆಚ್ಚರಿಕಾ ಕ್ರಮಗಳಲ್ಲಿ ಉದಾಸೀನತೆಯಿಂದಾಗಿ ತಿಂಗಳೊಳಗೆ 26 ಲಕ್ಷ ಸೋಂಕುಗಳಿಗೆ ಕಾರಣವಾಗಬಹುದು ಎಂದು ಸಮಿತಿ ಎಚ್ಚರಿಕೆ ನೀಡಿದೆ.
ಯುವ ಪತ್ರಕರ್ತ ಕೋವಿಡ್‍ನಿಂದ ಸಾವು
ಮೈಸೂರು, ಅ. 18: ಯುವ ಪತ್ರಕರ್ತ ಪವನ ಹೆತ್ತೂರು (36) ಕೊರೊನಾ ಸೋಂಕಿನಿಂದ ಸಾವನ್ನಪ್ಪಿದ್ದಾರೆ. ಪ್ರಜಾವಾಣಿಯ ಮೈಸೂರು ಬ್ಯೂರೋ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ಪವನ ಅವರಿಗೆ ಕೆಲವು ದಿನಗಳ ಹಿಂದೆ ಕೋವಿಡ್ ಸೋಂಕು ತಗುಲಿತ್ತು. ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಪವನ ಅವರು ಚಿಕಿತ್ಸೆ ಫಲಿಸದೆ ಕೊನೆಯುಸಿರೆಳೆದಿದ್ದಾರೆ. ಸಕಲೇಶಪುರ ತಾಲೂಕಿನ ಹೆತ್ತೂರಿನವರಾಗಿದ್ದ ಪವನ ರಾಜಕಾರಣಿ ಕೃಷ್ಣಪ್ರಸಾದ್ ಕುಟುಂಬಕ್ಕೆ ಸೇರಿದ್ದರು. ಅವರ ತಂದೆ ಶಾಲಾ ಶಿಕ್ಷಕರಾಗಿದ್ದರು. ಮೃತ ಪವನ ಅವರಿಗೆ ಪತ್ನಿ, ಇಬ್ಬರು ಪುಟ್ಟ ಮಕ್ಕಳಿದ್ದಾರೆ.