ಮಡಿಕೇರಿ, ಅ. 16: ಗಾಳಿಬೀಡು ಗ್ರಾಮ ಪಂಚಾಯಿತಿ ವ್ಯಾಪ್ತಿಯ ದೇವಸ್ತೂರು ನಿವಾಸಿ ಹಾಗೂ ಮಡಿಕೇರಿಯ ಖಾಸಗಿ ಹೊಟೇಲ್‍ವೊಂದರಲ್ಲಿ ಉದ್ಯೋಗಿಯಾಗಿದ್ದ ವ್ಯಕ್ತಿಯೋರ್ವ ಕೋವಿಯಿಂದ ಗುಂಡು ಹೊಡೆದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ದೇವಸ್ತೂರು ಗ್ರಾಮದ ಕೊಚ್ಚೇರ ಎಸ್. ದಿನುಭೀಮಯ್ಯ (48) ಆತ್ಮಹತ್ಯೆ ಮಾಡಿಕೊಂಡಿದ್ದು, ಆರ್ಥಿಕ ಸಮಸ್ಯೆಯಿಂದ ಸಾವಿಗೆ ಶರಣಾಗಿರಬಹುದು ಎಂದು ಗ್ರಾಮಸ್ಥರು ಶಂಕೆ ವ್ಯಕ್ತಪಡಿಸಿದ್ದಾರೆ. ಮೃತ ವ್ಯಕ್ತಿ ಪತ್ನಿ ಹಾಗೂ ಓರ್ವ ಪುತ್ರ ಮತ್ತು ಪುತ್ರಿಯನ್ನು ಅಗಲಿದ್ದು, ಮಡಿಕೇರಿಯಿಂದ 2 ದಿನ ಹಿಂದೆ ಸಂಸಾರವನ್ನು ಊರಿಗೆ ಬಿಟ್ಟು ಬಂದಿದ್ದಾರೆ.
ಇಂದು ಬೆಳಿಗ್ಗೆ ಗ್ರಾಮಸ್ಥರು ಮಡಿಕೇರಿ ಸಂತೆಗೆ ಬರುವಾಗ ಮಾರ್ಗ ಮಧ್ಯೆ ದಿನು ಭೀಮಯ್ಯ ತನ್ನ ವಾಹನವನ್ನು ನಿಲುಗಡೆಗೊಳಿಸಿ, ಕೋವಿಯಿಂದ ಎದೆಭಾಗಕ್ಕೆ ಗುಂಡು ಹೊಡೆದುಕೊಂಡು ರಕ್ತದ ಮಡುವಿನಲ್ಲಿ ಸಾವನ್ನಪ್ಪಿರುವ ದೃಶ್ಯ ಎದುರಾಗಿದೆ. ಈ ಬಗ್ಗೆ ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಮೊಕದ್ದಮೆಯೊಂದಿಗೆ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.