ಮಡಿಕೇರಿ, ಅ. 17: ಕೊಡಗಿನ ಕುಲಮಾತೆ ಕಾವೇರಿ ತಾಯಿಯ ಬಳಿಯಲ್ಲಿ ನಾಡಿಗೆ ಸಮೃದ್ಧಿ ಯೊಂದಿಗೆ; ಜಾಗತಿಕ ಕೊರೊನಾ ದೂರವಾಗಿ ಜನಕೋಟಿಗೆ ಒಳಿತು ಉಂಟಾಗಲೆಂದು ಪಾವನ ತೀರ್ಥೋದ್ಭವ ಸಂದರ್ಭ ವಿಶೇಷ ಪ್ರಾರ್ಥನೆ ಸಲ್ಲಿಸಿರುವೆ ಎಂದು ಕರ್ನಾಟಕ ವಸತಿ ಖಾತೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ವಿ. ಸೋಮಣ್ಣ ಭಾವನಾತ್ಮಕ ನುಡಿಯಾಡಿದರು.

ತಲಕಾವೇರಿಯಲ್ಲಿ ಶ್ರೀ ಕಾವೇರಿ ತೀರ್ಥೋದ್ಭವ ಬಳಿಕ ಮಾಧ್ಯಮ ಬಳಗದೊಂದಿಗೆ ಪ್ರತಿಕ್ರಿಯಿಸಿದ ಸಚಿವರು, ಸತ್ ಸಂಪ್ರದಾಯದಂತೆ ಇಲ್ಲಿ ಬಂದು ಕಾವೇರಿ ತಾಯಿ ಆಶೀರ್ವಾದ ಪಡೆಯುವ ಮೂಲಕ, ಭವಿಷ್ಯದಲ್ಲಿ ಯಾವದೇ ದುರಂತಗಳು ಘಟಿಸದಂತೆ ಅನುಗ್ರಹ ನೀಡುವಂತೆ ಪ್ರಾರ್ಥನೆಯನ್ನು ಸಲ್ಲಿಸಿದ್ದಾಗಿ ವಿವರಿಸಿದರು.

ಸರಕಾರದ ನಿಯಮ ಪಾಲನೆ : ತುಲಾ ಸಂಕ್ರಮಣ ಜಾತ್ರೆ ಹಾಗೂ ದಸರಾ ಸಂದರ್ಭ ಕೇಂದ್ರ ಮತ್ತು ರಾಜ್ಯ ಸರಕಾರಗಳ ಮಾರ್ಗ ಸೂಚಿಯಂತೆ ಜನತೆಯ ಆರೋಗ್ಯ ದೃಷ್ಟಿಯಿಂದ ಕಟ್ಟುನಿಟ್ಟಿನ ಕ್ರಮ ಅನುಸರಿಸಿದ್ದು, ಎಲ್ಲಕ್ಕಿಂತ ಜನತೆಯ ಪ್ರಾಣ ರಕ್ಷಣೆಗೆ ಒತ್ತು ನೀಡಬೇಕಾ ಯಿತು ಎಂದು ಮಾರ್ನುಡಿದರು.

ಸಂದಿಗ್ಧ ಪರಿಸ್ಥಿತಿ: ಇಂದಿನ ಸಂದಿಗ್ಧ ಪರಿಸ್ಥಿತಿಯೊಂದಿಗೆ ಕೊರೊನಾ ಸಂದರ್ಭ ಜಿಲ್ಲಾಡಳಿತ ಹಾಗೂ ಜನಪ್ರತಿನಿಧಿಗಳು ಒಗ್ಗೂಡಿ ಎಲ್ಲಾ ನಿರ್ಧಾರಗಳನ್ನು ಕೈಗೊಳ್ಳಲಾಗಿದೆ ಎಂದು ಸಚಿವರು ಸ್ಪಷ್ಟಪಡಿಸಿದರು. ಇಲ್ಲಿ ಯಾರಿಗೂ ಯಾರಿಂದಲೂ ಮುಜುಗರ ಆಗದಂತೆ ಎಚ್ಚರ ವಹಿಸಬೇಕೆಂದು ತಿಳಿಹೇಳಿದ ಅವರು, ರಾಜಕೀಯ ಮರೆತು ಸನ್ನಿವೇಶಗಳನ್ನು ನಿಭಾಯಿಸಬೇಕಿದೆ ಎಂದು ಮಾರ್ನುಡಿದರು.

ರಂಜನ್ ಆಶಯ: ಶಾಸಕ ಎಂ.ಪಿ. ಅಪ್ಪಚ್ಚುರಂಜನ್ ಪ್ರತಿಕ್ರಿಯಿಸಿ ಕಾವೇರಿ ಮಾತೆ ತೀರ್ಥ ರೂಪಿಣಿಯಾಗಿ ಆವಿರ್ಭವಿಸಿ ಎಲ್ಲರನ್ನು ಹರಸಿದ್ದಾಳೆ. ಮುಂದೆ ಉತ್ತಮ ವಾತಾವರಣದೊಂದಿಗೆ ಜಾಗತಿಕ ಕ್ಷೋಭೆ ದೂರವಾಗಿ, ಕಾಲ ಕಾಲಕ್ಕೆ ಒಳ್ಳೆಯ ಮಳೆ, ಬೆಳೆ ಸಹಿತ ಜನತೆಗೆ ಸಮೃದ್ಧಿ ಜೀವನವನ್ನು ಕಾವೇರಿ ಮಾತೆ ಅನುಗ್ರಹಿಸಲೆಂದು ಪ್ರಾರ್ಥಿಸಿದ್ದಾಗಿ ಆಶಯ ನುಡಿಯಾಡಿದರು.

ಕೊರೊನಾದಿಂದ ಕಾಪಾಡಲಿ : ಇಂದು ಬೆಳಿಗ್ಗೆ ಶುಭ ವೇಳೆಯಲ್ಲಿ ತಾಯಿ ಕಾವೇರಿ ತೀರ್ಥರೂಪಿಣಿ ಯಾಗಿ ಭಕ್ತರಿಗೆ ದರ್ಶನ ನೀಡಿದ್ದು, ಈ ಸಂದರ್ಭ ಜಾಗತಿಕ ಕೊರೊನಾದಿಂದ ಜನತೆಯನ್ನು ಪಾರು ಮಾಡಿ ನಾಡಿಗೆ, ರಾಜ್ಯಕ್ಕೆ, ರಾಷ್ಟ್ರಕ್ಕೆ ಸಮೃದ್ಧಿ ಕರುಣಿಸಲಿ ಎಂದು ಪ್ರಾರ್ಥಿಸುವದಾಗಿ ವೀರಾಜಪೇಟೆ ಕ್ಷೇತ್ರದ ಶಾಸಕ ಕೆ.ಜಿ. ಬೋಪಯ್ಯ ಅವರು ‘ಶಕ್ತಿ’ಗೆ ನೀಡಿರುವ ಹೇಳಿಕೆಯಲ್ಲಿ ಪ್ರತಿಕ್ರಿಯಿಸಿದ್ದಾರೆ.

ವೀಣಾ ಅಚ್ಚಯ್ಯ ವಿಷಾದ : ಜಿಲ್ಲಾಡಳಿತ ಜನಪ್ರತಿನಿಧಿ ಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮುಕ್ತ ಸಲಹೆ ಪಡೆಯಬೇಕಿತ್ತು. ಹಾಗೆ ಮಾಡದೆ ಕಾವೇರಿ ಜಾತ್ರೆಯ ಪುಣ್ಯ ತೀರ್ಥೋದ್ಭವ ಕ್ಷಣದಲ್ಲಿ ಇಡೀ ಕ್ಷೇತ್ರ ಬಣಗುಟ್ಟುವಂತಾಗಿದೆ ಎಂದು ಮೇಲ್ಮನೆ ಸದಸ್ಯೆ ವೀಣಾ ಅಚ್ಚಯ್ಯ ವಿಷಾದಿಸಿದರು. ಮುಂದೆ ಕಾವೇರಿ ಮಾತೆ ಎಲ್ಲರಿಗೆ ಸದ್ಬುದ್ಧಿ ಕರುಣಿಸಿ ನಾಡಿಗೆ ಸನ್ಮಂಗಲ ಉಂಟು ಮಾಡಲಿ ಎಂದು ಪ್ರಾರ್ಥಿಸಿದ್ದಾಗಿ ನುಡಿದರು.

ಕಾವೇರಿ ಮಾತೆ ಅನುಗ್ರಹ : ಎಲ್ಲವೂ ಕಾವೇರಿ ಮಾತೆಯ ಅನುಗ್ರಹದಂತೆ ನಡೆಯುತ್ತಿದ್ದು, ಆ ತಾಯಿ ತನಗೆ ಬೇಕಾಗಿದ್ದನ್ನು ಮಾಡಿಸಿಕೊಳ್ಳುತ್ತಾಳೆ. ಸದ್ಭಕ್ತರು, ಜನಪ್ರತಿನಿಧಿಗಳು, ಜಿಲ್ಲಾಡಳಿತ ಕ್ಷೇತ್ರಗಳಿಗೆ ಸಂಬಂಧಿಸಿದ ಪರಂಪರೆಯನ್ನು ಮುಂದುವರೆಸಿ ಕೊಂಡು ಹೋಗುವಲ್ಲಿ ಎಲ್ಲರ ಸಹಕಾರ ಅವಶ್ಯಕ ಎಂದು ವಿಧಾನ ಪರಿಷತ್ ಸದಸ್ಯ ಎಂ.ಪಿ. ಸುನಿಲ್ ಸುಬ್ರಮಣಿ ನುಡಿದರು.