ಸಿದ್ದಾಪುರ, ಅ. 16: ಬಸವನಹಳ್ಳಿಯ ಗಿರಿಜನ ವಿವಿಧೋದ್ದೇಶ ಸಹಕಾರ ಸಂಘದಲ್ಲಿ ಅವ್ಯವಹಾರ ನಡೆದಿರುವ ಬಗ್ಗೆ ಆರೋಪ ಕೇಳಿ ಬಂದಿದೆ. ಸಂಘದ ಲೆಕ್ಕ ಪರಿಶೋಧನೆ ನಡೆಯುತ್ತಿದ್ದು, ರೂ. 20 ಲಕ್ಷಗಳಿಗೂ ಅಧಿಕ ಮೊತ್ತ ದುರುಪಯೋಗವಾದ ಬಗ್ಗೆ ಮಾಹಿತಿ ಲಭಿಸಿದೆ.2015 ರಿಂದ ಎಸ್.ಎನ್. ರಾಜರಾವ್ ಅವರು ಸಂಘದ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದು, 2018-19ನೇ ಸಾಲಿನ ಲೆಕ್ಕ ಪರಿಶೋಧನೆಯಿಂದ ಹಣ ದುರುಪಯೋಗ ವಾಗಿರುವ ಮಾಹಿತಿ ಬಹಿರಂಗಗೊಂಡಿದೆ.ಜೇನು ಮತ್ತು ಮರದ ಪಾಚಿ ಖರೀದಿಗಾಗಿ ಮುಂಗಡವಾಗಿ ಹಣವನ್ನು ಡ್ರಾ ಮಾಡಲಾಗಿದೆ. ಹಣ ಮಂಜೂರಾತಿ ಮತ್ತು ಡ್ರಾ ಮಾಡಲು ಕಾರ್ಯಕಾರಿ ಸಮಿತಿಯ ಅನುಮೋದನೆ ಬೇಕಾಗುತ್ತದೆ. ಆದರೆ ನಿಯಮ ಉಲ್ಲಂಘಿಸಿ ಗುಡ್ಡೆಹೊಸೂರಿನ ಕೊಡಗು ಜಿಲ್ಲಾ ಕಾವೇರಿ ಗ್ರಾಮೀಣ ಬ್ಯಾಂಕ್ ಮತ್ತು ಡಿಸಿಸಿ ಬ್ಯಾಂಕ್‍ನ ಕುಶಾಲನಗರ ಶಾಖೆಯಿಂದ ಹಣ ಡ್ರಾ ಮಾಡಿರುವ ಬಗ್ಗೆ ದಾಖಲೆ ದೊರೆತಿದೆ. ಸುಲೋಚನ, ಸಣ್ಣಯ್ಯ ಹಾಗೂ ಬಿ.ಕೆ. ಮೋಹನ್ ಅವರ ಹೆಸರಿನಲ್ಲಿ ತಲಾ ರೂ. 1 ಲಕ್ಷ ಡ್ರಾ ಮಾಡಲಾಗಿತ್ತು. ಮಾಹಿತಿ ಬಹಿರಂಗವಾದ ಹಿನ್ನೆಲೆ ಆತಂಕಗೊಂಡ ಸಣ್ಣಯ್ಯ ಹಾಗೂ ಮೋಹನ್ ತಮಗೆ ತೊಂದರೆ ಆಗಬಹುದೆನ್ನುವ ಉದ್ದೇಶದಿಂದ ಹಣವನ್ನು ಬ್ಯಾಂಕ್‍ಗೆ ಪಾವತಿ ಮಾಡಿದ್ದಾರೆ. ಗೋದಾಮು ಕೆಲಸಗಾರ ರಂಗಸ್ವಾಮಿ ಅವರ ಹೆಸರಿನಲ್ಲೂ ಹಣ ಡ್ರಾ ಆಗಿರುವ ಬಗ್ಗೆ ಮಾಹಿತಿ ಇದೆ. ಪ್ರಸ್ತುತ ಜೇನು ಮತ್ತು ಪಾಚಿ ಖರೀದಿಗೆ ಸಂಘದಲ್ಲಿ ಹಣ ಇಲ್ಲದಾಗಿದೆ. ಈಗಾಗಲೇ ಸಂಘದ ಮೂರು ಸಭೆಗಳನ್ನು ನಡೆಸಿ ಉಳಿದಿರುವ ಹಣವನ್ನು ಸಂಘಕ್ಕೆ ಪಾವತಿಸು ವಂತೆ ರಾಜಾರಾವ್ ಅವರಿಗೆ ನೋಟೀಸ್ ನೀಡಲಾಗಿದೆ. ಆದರೆ ಆಡಿಟ್ ವರದಿ ಬಂದ ನಂತರ ಲೆಕ್ಕ ನೋಡಿ ಹಣ ನೀಡುವುದಾಗಿ ರಾಜಾರಾವ್ ಹೇಳಿಕೊಳ್ಳುತ್ತಿದ್ದಾರೆ. ಗಿರಿಜನರ ಅಭಿವೃದ್ಧಿಗಾಗಿ ಇರುವ ಸಹಕಾರ ಸಂಘದಲ್ಲಿ ಈಗ ಹಣವಿಲ್ಲದ ಪರಿಸ್ಥಿತಿ ನಿರ್ಮಾಣವಾಗಿದ್ದು, ಗಿರಿಜನ ಫಲಾನುಭವಿಗಳು

(ಮೊದಲ ಪುಟದಿಂದ) ಸಂಕಷ್ಟ ಎದುರಿಸುತ್ತಿದ್ದಾರೆ. ಸಹಕಾರ ಸಂಘದ ಹಿಂಬದಿಯಲ್ಲಿ ಇರುವ ಗೋದಾಮು ನಿರ್ಮಾಣದ ಕಾಮಗಾರಿಯ ಗುತ್ತಿಗೆಯನ್ನು ತಮ್ಮ ಮಗನಿಗೆ ನೀಡಿ ಸಹಕಾರ ಸಂಘದ ನಿಯಮವನ್ನು ರಾಜಾರಾವ್ ಉಲ್ಲಂಘಿಸಿರುವ ಬಗ್ಗೆಯೂ ಆರೋಪವಿದೆ. ನಿಯಮದ ಪ್ರಕಾರ ಸಂಘದಲ್ಲಿರುವ ನಿರ್ದೇಶಕರಿಗೆ ಕಾಮಗಾರಿಯ ಗುತ್ತಿಗೆ ನೀಡುವಂತಿಲ್ಲ.

ಹಣ ದುರುಪಯೋಗದ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸಂಘದ ಈಗಿನ ಅಧ್ಯಕ್ಷ ಆರ್.ಕೆ. ಚಂದ್ರು ಲೆಕ್ಕ ಪರಿಶೋಧನೆ ನಡೆಯುತ್ತಿದ್ದು, ವರದಿ ಬಂದ ನಂತರ ಎಲ್ಲಾ ಮಾಹಿತಿ ಬಹಿರಂಗ ಪಡಿಸುವುದಾಗಿ ಹೇಳಿದ್ದಾರೆ.

ಸಂಘದಲ್ಲಿ 9 ಮಂದಿ ಚುನಾಯಿತ ನಿರ್ದೇಶಕರುಗಳಿದ್ದು, ಸಹಕಾರ ಸಂಘದ ಉಪನಿಬಂಧಕರು, ಅರಣ್ಯ ಇಲಾಖೆಯ ಡಿಎಫ್‍ಒ ಹಾಗೂ ಗಿರಿಜನ ಅಭಿವೃದ್ಧಿ ಇಲಾಖೆಯ ಅಧಿಕಾರಿಗಳು ನಿಯಮಾನುಸಾರ ನಿರ್ದೇಶಕರುಗಳಾಗಿ ಆಡಳಿತ ಮಂಡಳಿಯಲ್ಲಿರುತ್ತಾರೆ. ಸ್ವತ: ಸಹಕಾರ ಸಂಘದ ಉಪನಿಬಂಧಕರಿದ್ದರೂ ಹಣ ದುರುಪಯೋಗವಾಗಿದೆ, ಅಲ್ಲದೆ ಈ ಬಗ್ಗೆ ಯಾವುದೇ ಕ್ರಮ ಕೈಗೊಳ್ಳದೇ ಇರುವುದು ಸಂಶಯಕ್ಕೆ ಕಾರಣವಾಗಿದೆ. ತಕ್ಷಣ ದುರುಪಯೋಗವಾದ ಹಣವನ್ನು ಸಂಘಕ್ಕೆ ಪಾವತಿಯಾಗುವಂತೆ ನೋಡಿಕೊಳ್ಳಬೇಕು ಮತ್ತು ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಗಿರಿಜನ ಫಲಾನುಭವಿಗಳು ಒತ್ತಾಯಿಸಿದ್ದಾರೆ.

ಹಣ ಡ್ರಾ ಆಗಿರುವ ಮಾಹಿತಿ

ಕುಶಾಲನಗರ ಡಿಸಿಸಿ ಬ್ಯಾಂಕ್‍ನಿಂದ ತಾ. 6.9.2020 ರಂದು ಎಸ್.ಎನ್. ರಾಜಾರಾವ್ ರೂ. 5 ಲಕ್ಷ, ತಾ. 7.1.2019 ಎಸ್.ಎನ್. ರಾಜಾರಾವ್ ರೂ. 5 ಲಕ್ಷ, ತಾ. 15.7.2019 ರಂದು ರೂ. 50 ಸಾವಿರ ರಂಗಸ್ವಾಮಿ, ಗುಡ್ಡೆಹೊಸೂರು ಡಿಸಿಸಿ ಬ್ಯಾಂಕ್‍ನಲ್ಲಿ ತಾ. 7.5.2018 ರಂದು ಎಸ್.ಎನ್. ರಾಜಾರಾವ್ ರೂ. 3 ಲಕ್ಷ, ತಾ. 13.7.2018 ಬಿ.ಕೆ. ಮೋಹನ್ ರೂ. 1 ಲಕ್ಷ, ತಾ. 20.7.2018 ಸುಲೋಚನ ಮತ್ತು ಸಣ್ಣಯ್ಯ ರೂ. 2 ಲಕ್ಷ, ತಾ. 18.12.2018 ಎಸ್.ಎನ್. ರಾಜಾರಾವ್ ರೂ. 3 ಲಕ್ಷ, ತಾ. 24.12.2018 ಎಸ್.ಎನ್. ರಾಜಾರಾವ್ ರೂ. 2 ಲಕ್ಷ, 26.12.2018 ರೂ. 1 ಲಕ್ಷ ಎಸ್.ಎನ್. ರಾಜಾರಾವ್.