ಸೋಮವಾರಪೇಟೆ, ಅ. 17: ಆಕಸ್ಮಿಕವಾಗಿ ಕೆರೆಗೆ ಬಿದ್ದು ಸಾವಿನಂಚಿಗೆ ತಲುಪಿದ್ದ ವೃದ್ಧನನ್ನು ಅಪ್ಪ-ಮಗ ರಕ್ಷಿಸಿದ ಘಟನೆ ಸಮೀಪದ ಗಣಗೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಉಂಜಿಗನಹಳ್ಳಿಯಲ್ಲಿ ಇಂದು ಬೆಳಿಗ್ಗೆ ನಡೆದಿದೆ.

ಚಿಕ್ಕಕಣಗಾಲು ಗ್ರಾಮದ ನಿವಾಸಿ, ಖಾಸಗಿ ಬಸ್ ಚಾಲಕರಾಗಿರುವ ಕಾಕೇರ ರಮೇಶ್ ಮತ್ತು ಅವರ ಪುತ್ರ ಶಮಂತ್, ಹೊಲಕ್ಕೆ ತೆರಳುತ್ತಿದ್ದ ಸಂದರ್ಭ ಉಂಜಿಗನಹಳ್ಳಿಯ ಕೆರೆಯಲ್ಲಿ ವ್ಯಕ್ತಿಯೋರ್ವರ ತಲೆಭಾಗ ಗೋಚರಿಸಿದೆ.

ತಕ್ಷಣ ಶಮಂತ್ ಕಾರಿನಿಂದ ಇಳಿದು ಕೆರೆಯತ್ತ ಓಡಿ ಹೋಗಿ ನೀರಿನಲ್ಲಿ ಮುಳುಗುತ್ತಿದ್ದ ವ್ಯಕ್ತಿಯ ರಕ್ಷಣೆಗೆ ಮುಂದಾಗಿದ್ದಾರೆ. ಈ ಸಂದರ್ಭ ಕೆರೆಯೊಳಗಿದ್ದ ವ್ಯಕ್ತಿ ಶಮಂತ್‍ನ ಕೈಯನ್ನು ಎಳೆದುಕೊಂಡಿದ್ದು, ಅವರೂ ಸಹ ಕೆರೆಯೊಳಗೆ ಬಿದ್ದಿದ್ದಾರೆ.

ತಕ್ಷಣ ಕೆರೆಯ ಏರಿಯ ಮೇಲೆ ಇದ್ದ ತಂದೆ ರಮೇಶ್ ಅವರು ತಮ್ಮ ಶರ್ಟ್ ಬಿಚ್ಚಿ ಒಂದು ತುದಿಯನ್ನು ಶಮಂತ್‍ನತ್ತ ಎಸೆದಿದ್ದಾರೆ. ಇದನ್ನು ಹಿಡಿದುಕೊಂಡ ಶಮಂತ್ ನೀರಿನೊಳಗೆ ಮುಳುಗುತ್ತಿದ್ದ ವ್ಯಕ್ತಿಯನ್ನು ಹೊರಗೆಳೆದಿದ್ದಾರೆ.

ಸುಮಾರು 85 ವರ್ಷಕ್ಕೂ ಅಧಿಕ ಪ್ರಾಯದ ವೃದ್ಧ ನೀರಿಗೆ ಬಿದ್ದಿದ್ದು, ಒಂದೆರಡು ನಿಮಿಷಗಳ ಕಾಲ ತಡವಾಗಿದ್ದರೂ ಪ್ರಾಣಹಾನಿ ಸಂಭವಿಸುತ್ತಿತ್ತು. ವೃದ್ಧನ ಆಯಸ್ಸು ಗಟ್ಟಿಯಾಗಿದ್ದು, ಅದೇ ಸಮಯಕ್ಕೆ ರಮೇಶ್ ಮತ್ತು ಶಮಂತ್ ಅವರುಗಳು ಅತ್ತ ಬಂದಿದ್ದರಿಂದ ಜೀವ ಉಳಿದಿದೆ.

ಕೆರೆಯೊಳಗೆ ಮುಳುಗುತ್ತಿದ್ದ ವೃದ್ಧನನ್ನು ರಕ್ಷಿಸಿ, ಸ್ಥಳೀಯರ ಸಹಕಾರದಿಂದ ಮೇಲಕ್ಕೆ ತಂದು, ತಮ್ಮದೇ ಕಾರಿನಲ್ಲಿ ವೃದ್ದನನ್ನು ಮನೆಗೆ ತಲುಪಿಸಿ ಮಾನವೀಯತೆ ಮೆರೆದಿರುವ ಅಪ್ಪ-ಮಗನಿಗೆ ವೃದ್ಧನ ಕುಟುಂಬದವರು ಕೃತಜ್ಞತೆ ಸಲ್ಲಿಸಿದರೆ, ಸ್ಥಳೀಯರು ಸಮಯೋಚಿತ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

- ವಿಜಯ್