ಕೊಡಗಿನ ಜನರ ಮಾತೆ ಕಾವೇರಿ ಉದ್ಭವ

ಭಕ್ತ ಜನಕೋಟಿಗೆ ಭಕ್ತಿಯ ಧನ್ಯತಾ ಭಾವ

ಬ್ರಹ್ಮಗಿರಿ ಸುತ್ತಲಿನ ಹಸಿರು ವನರಾಶಿ ಕಾನನ

ಭಕ್ತರ ಉದ್ಘೋಷದ ನಡುವೆ ಕಾವೇರಿ ಆಗಮನ

ಕಾವೇರಿ ತುಲಾ ಸಂಕ್ರಮಣ ಭಕ್ತರಿಗೆ ಪವಿತ್ರ

ಕಾವೇರಿಯು ಪುಣ್ಯ ತೀರ್ಥದಲ್ಲಿ ಕೃಪೆಗೆ ಪಾತ್ರ

ಕಾವೇರಿ ನದಿ ಕೊಡಗಿಗೆ ಪ್ರಕೃತಿಯ ವರಪ್ರಸಾದ

ಜನ ಅರ್ಪಿಸುತಿಹರು ಶ್ರದ್ಧಾ ಭಕ್ತಿಯ ಧನ್ಯವಾದ

ಕೊಡಗಿನಲ್ಲಿ ಹುಟ್ಟು ಹರಿವ ನದಿ ಕಾವೇರಿ

ಜಪರೂಪದಲ್ಲಿ ಬೆಳಗಿ ಸಲಹುವ ಜಲಸಿರಿ

ಮಂಡ್ಯ ತಮಿಳುನಾಡಿನ ಸಿರಿ ಭಗ್ಯದಾತೆ

ಅಲ್ಲಿನ ಜನರೆಲ್ಲಾ ಸ್ಮರಿಸುವ ಪೂಜ್ಯ ಮಾತೆ

ಭಕ್ತ ಜನರಿಗೆಲ್ಲಾ ಕಾವೇರಿ ಆರಾಧನಾ ಸನ್ನಿಧಿ

ಸದಾ ತುಂಬಿ ಹರಿವ ಜನೋಪಕಾರಿ ನದಿ

ಕಾವೇರಿ ಭಕ್ತ ಕೋಟಿಗೆ ಆಧ್ಯಾತ್ಮಿಕ ಜಗನ್ಮಾತೆ

ತೀರ್ಥರೂಪಿಣಿ ದರ್ಶನದಿಂದ ಪುನೀತ ಜನತೆ.

-ಹರೀಶ್ ಸರಳಾಯ, ಮಡಿಕೇರಿ.

ಅಕ್ಷಯ ತೀರ್ಥರೂಪಿಣಿ ಕೊಡಗಿನ ಕುಲದೇವಿ ಕಾವೇರಿ

ಕುಲದೇವಿ ಶ್ರೀಕಾವೇರಿಮಾತೆಯ ಉಗಮ ಸ್ಥಾನವಾದ ಕೊಡಗಿನ ತಲಕಾವೇರಿಯಲ್ಲಿ ಜೀವನದಿ ಕಾವೇರಿ ತೀರ್ಥರೂಪಿಣಿಯಾಗಿ ಒಲಿಯುವ ಪವಿತ್ರದಿನದ ಸಾಂಪ್ರದಾಯಿಕ ಆಚರಣೆಯೇ “ಕಾವೇರಿ ತುಲಾಸಂಕ್ರಮಣ” ಹಾಗು “ಕಾವೇರಿಚಂಗ್ರಾಂದಿ” ಆ ಪವಿತ್ರ ಮುಹೂರ್ತ ಇಂದು ಬೆಳಿಗ್ಗೆ 7.30ಕ್ಕೆ ಬರಲಿದೆ. ಸೂರ್ಯನು ತುಲಾರಾಶಿಗೆ ಸೇರುವ ಸಮಯದಲ್ಲೇ ಕೊಡಗಿನ ಕುಲದೇವಿಕಾವೇರಿಯು ತನ್ನ ಉಗಮಸ್ಥಾನ ತಲಕಾವೇರಿಯ ಕುಂಡಿಕೆಯಿಂದ ತೀರ್ಥೋದ್ಬವವಾಗಿ ಬರುವಳು. ಶ್ರೀಕಾವೇರಿ ಮಾತೆಯು ತೀರ್ಥರೂಪಿಯಾದ ಬಗ್ಗೆ ಕೆಲವೊಂದು ಪುರಾಣದ ಕಥೆಯೇ ಇದೆ.

ಶ್ರೀಕಾವೇರಿಮಾತೆಯು ಮಹರ್ಷಿ ಅಗಸ್ತ್ಯರ ಪತ್ನಿ. ಕವೇರಮುನಿಯ ಸಾಕುಮಗಳು, ಬಹ್ಮದೇವರ ಮಾನಸಪುತ್ರಿ ಲೋಪಾಮುದ್ರೆ ಎನ್ನುವುದು ಈಕೆಯ ಪೂರ್ವನಾಮ. ಮಕ್ಕಳಿಲ್ಲವೆಂಬ ಕೊರಗಿನಿಂದ ಸಂತಾನ ಪ್ರಾಪ್ತಿಗಾಗಿ ಕವೇರಮುನಿಯು ಎಸಗಿದ ತಪ್ಪಿಗೆ ಒಲಿದ ಬ್ರಹ್ಮನು ಪ್ರಾಚೀನ ಕರ್ಮಫಲ ದಂತೆ ಕವೇರಮುನಿಗೆ ಈ ಜನ್ಮದಲ್ಲಿ ಸಂತಾನ ಭಾಗ್ಯವಿಲ್ಲವೆಂದು ಹೇಳಿ ತನ್ನ ಮಾನಸ ಪುತ್ರಿಯಾದ ಲೋಪಾಮುದ್ರೆಯನ್ನು ದತ್ತುಪುತ್ರಿಯಾಗಿ ಸ್ವೀಕರಿಸುವಂತೆ ಹೇಳಿ ಅನುಗ್ರಹಿಸಿದರಂತೆ. ಕವೇರಮುನಿಯ ಸಾಕುಮಗಳಾದ ಲೋಪಾಮುದ್ರೆಯು ಶ್ರೀಕಾವೇರಿಮಾತೆ ಎಂಬ ಹೆಸರಿನಲ್ಲಿ ವಿಖ್ಯಾತಿಯಾದಳು.

ಉತ್ತರಭಾರತದಿಂದ ದಕ್ಷಿಣದೇಶಕ್ಕೆ ಆಗಮಿಸಿದ ಅಗಸ್ತ್ಯ ಮಹಾಋಷಿ ಗಳು ಕವೇರಮುನಿಗಳ ಬಳಿ ಬಂದಾಗ ದಿವ್ಯಾಂಶ ಸಂಭೂತೆಯಾದ ಕಾವೇರಿ ಯನ್ನು ನೋಡಿ ತ್ರಿಕಾಲ ಜ್ಞಾನಿಗಳಾದ ಅವರು ಕಾವೇರಿಯ ಜೀವನೋದ್ದೇಶ ವನ್ನು ಗ್ರಹಿಸಿಕೊಂಡರು.ಅದರಂತೆ ಅಗಸ್ತ್ಯಮಹರ್ಷಿಗಳು ಕಾವೇರಿಯನ್ನು ವಿವಾಹವಾಗಲು ಬಯಸಿದರು. ಅವರ ಅಭಿಲಾಷೆಗೆ ಕಾವೇರಿಯು ಒಪ್ಪಿ ತನ್ನನ್ನು ಯಾವ ಕಾಲಕ್ಕೂ ಒಂದು ಕ್ಷಣವೂ ಬಿಟ್ಟು ಇರಕೂಡದು, ಒಂದು ವೇಳೆ ಬಿಟ್ಟು ಹೋದದ್ದೇಯಾದರೆ ತತ್‍ಕ್ಷಣವೇ ತಾನು ನದಿಯಾಗಿ ರೂಪ ತಳೆದು ಸಮುದ್ರದ ಕಡೆ ಹೊರಟು ಹೋಗುತ್ತೇನೆಂದಳು. ಅದಕ್ಕೆ ಅಗಸ್ತ್ಯ ಮಹರ್ಷಿಗಳು ಒಪ್ಪಿ ಋಷ್ಯಾಶ್ರಮದ ಪವಿತ್ರನೆಲೆಯಲ್ಲಿ ಶ್ರೀ ಅಗಸ್ತ್ಯ-ಕಾವೇರಿಯ ವಿವಾಹವು ಬಹಳ ವೈಭವದಿಂದ ನೆರವೇರಿತು. ಹೀಗೆ ದಿನಕಳೆದಂತೆ ಒಂದುದಿನ ಅಗಸ್ತ್ಯ ಮಹಾಋರ್ಷಿಗಳು ಬ್ರಾಹ್ಮೀ ಮುಹೂರ್ತ ದಲ್ಲಿ ಬಹ್ಮಗಿರಿಯ ತಪ್ಪಲಿನ ಕನಕಜೆಗೆ ಸ್ನಾನ ಸಂಧ್ಯಾವಂದನೆಗೆ ತೆರಳುವ ಮುನ್ನ ಕಾವೇರಿಯನ್ನು ಜಲರೂಪಿಯಾಗಿ ಪರಿವರ್ತಿಸಿ ತನ್ನ ಕಮಂಡಲುವಿ ನಲ್ಲಿ ಸೇರಿಸಿ, ಶಿಷ್ಯರಿಗೆ ಜಾಗ್ರತೆಯಿಂದ ಕಾಯ್ದುಕೊಳ್ಳಿ ಎಂದು ಹೇಳಿ ಕಮಂಡಲುವನ್ನು ಬ್ರಹ್ಮಕುಂಡಿಕೆಯಲ್ಲಿಟ್ಟು ತೆರಳಿದರು. ಆ ಸಮಯದಲ್ಲಿ ಜಲರೂಪಿಣಿಯಾಗಿದ್ದ ಕಾವೇರಿಯು ಮೇಲುಕ್ಕಿ ಬಹ್ಮಕುಂಡಿಕೆಗೆ ಹರಿದು ನದಿರೂಪಿಯಾಗಿ ಮುಂದೆ ಹರಿದಾಗ ಶಿಷ್ಯರು ತಡೆಯಲು ಮುಂದಾದಾಗ ಕಾವೇರಿಯು ಗುಪ್ತಗಾಮಿನಿಯಾಗಿ ಮುಂದೆ ಸಾಗಿದಳು. ಅತ್ತ ಅಗಸ್ತ್ಯಮಹರ್ಷಿಗಳಿಗೆ ತಮ್ಮ ದಿವ್ಯದೃಷ್ಟಿ ಮೂಲಕ ಈ ವಿಚಾರ ತಿಳಿದು ಧಾವಿಸಿ ಬಂದು ಕಾವೇರಿಯನ್ನು ನದಿಯಾಗಿ ಹೋಗುವುದು ಬೇಡವೆಂದು ಕೇಳಿಕೊಂಡರು, ಆಗ ಕಾವೇರಿಯು ತಾನು ತನ್ನ ಶರೀರದ ಒಂದಂಶದಲ್ಲಿ ನದಿಯಾಗಿ ತೆರಳಿ ಲೋಕಕಲ್ಯಾಣಕ್ಕಾಗಿಯೂ, ಉಳಿದೊಂದಂಶ ಪತ್ನಿಯಾಗಿ ಉಳಿಯುವೆನೆಂದು ಸಮಾದಾನ ಹೇಳಿ ತನ್ನ ದಿವ್ಯ ಅವತಾರ ಲೀಲಾಕಾರ್ಯವನ್ನು ಮುಂದುವರಿಸಿ ನದಿಯಾಗಿ ಹರಿದು ಪುಣ್ಯಕ್ಷೇತ್ರವಾದ ಭಾಗಮಂಡಲದ ಕನ್ನಿಕಾ ಸುಜ್ಯೋತಿ ನದಿಗಳು ಕಾವೇರಿಯೊಡನೆ ಸಂಗಮವಾಗಿ ಸಂಗಮಕ್ಷೇತ್ರವಾಗಿ ರೂಪುಗೊಂಡಿತು.

‘‘ಎಲ್ಲಿಯ ತನಕ ನೀವು ನನ್ನನ್ನು ನಂಬಿ ಆರಾಧಿಸುತ್ತೀರೋ ಅಲ್ಲಿ ತನಕ ನಾಡಿಗೆಲ್ಲ ಮಾತೆಯಾಗಿ ಸಮಸ್ತರ ಯೋಗಕ್ಷೇಮವನ್ನು ನೋಡಿಕೊಳ್ಳುತ್ತೇನೆ’’ ಎಂದು ವಚನ ನೀಡಿ ಶ್ರೀಕಾವೇರಿಮಾತೆಯು ನದಿಯಾಗಿ ಮುಂದೆ ಹರಿಯತೊಡಗಿದಳು.

ಇನ್ನೊಂದು ಪುರಾಣ ಕಥೆಯ ಪ್ರಕಾರ ವಿಷ್ಣುಮಾಯಾ ಎಂಬ ಬ್ರಹ್ಮನ ಮಗಳನ್ನು ಕವೇರಮುನಿ ಸಾಕಿಕೊಂಡಿದ್ದಳು, ವಿಷ್ಣುವಿನ ಆಜ್ಞೆಯಂತೆ ಈ ಕನ್ಯೆಯು ದೇಹರೂಪಿಯಾಗಿ ಲೋಪಾಮುದ್ರಾ ಎಂಬ ಹೆಸರಿನಿಂದ ಅಗಸ್ತ್ಯ ಸತಿಯು ನದಿರೂಪಿಯಾಗಿ ಕಾವೇರಿಯಾದಳು. ದಕ್ಷಿಣದಲ್ಲಿ ಜಲಕ್ಷಾಮವಿದೆ ಯೆಂದು ಸುದ್ದಿ ತಿಳಿದ ಅಗಸ್ತ್ಯನು ತನ್ನ ಪತ್ನಿಯ ಜೊತೆ ಸಹ್ಯಾದ್ರಿಯ ತಪ್ಪಲ ಬ್ರಹ್ಮಗಿರಿಗೆ ಬಂದಾಗ ಜೋರಾದ ಗಾಳಿಬೀಸಿ ಕಮಂಡಲು ಉರುಳಿ ಅದರಲ್ಲಿ ಜಲರೂಪಿಯಾಗಿದ್ದ ಕಾವೇರಿಯು ನದಿಯಾಗಿ ಹರಿದಳೆಂದು ಹೇಳಿದರೆ ಮತ್ತೊಂದು ಕತೆಯಲ್ಲಿ ಶೂರಪದ್ಮನೆಂಬ ಅಸುರನು ತನ್ನ ವಿಶೇಷ ಶಕ್ತಿಯಿಂದ ಮಳೆಬೀಳುವುದನ್ನು ತಡೆದ ನಂತೆ ಇದರಿಂದ ದಕ್ಷಿಣ ಭಾರತದಲ್ಲಿ ಹಾಹಾಕಾರ ವಾಗಲು ಇಂದ್ರನ ಪ್ರಾರ್ಥನೆಯಂತೆ ಗಣೇಶನು ಕಾಗೆಯ ರೂಪತಳೆದು ಕವೇರ ಋಷಿಯ ಕಮಂಡಲುವನ್ನು ಕೆಡವಿ ಕಾವೇರಿಯ ಪ್ರವಾಹಕ್ಕೆ ಕಾರಣನಾದನೆಂದು ಹೇಳುತ್ತಾರೆ. ಕೊಡಗಿನ ಕಾವೇರಿ ಪುರಾಣದಲ್ಲಿನ ಕಾವೇರಿ ಮಾತೆ ಕಥೆಯನ್ನು ಸವಿವರವಾಗಿ ಕೊಡವಹಾಡಿನಲ್ಲಿ ರಚಿಸಲಾಗಿದೆ.

ಕೊಡಗಿನವರ ಪಾಲಿನ ಕುಲದೇವಿ ಕಾವೇರಿಮಾತೆಯು ಕೊಡಗಿನ ತಲಕಾವೇರಿ, ಭಾಗಮಂಡಲದಲ್ಲಿ ನದಿಯಾಗಿ ಹರಿದು ಬಲಮುರಿಗೆ ಬರುವಾಗ ಒಮ್ಮೆಗೆ ತನ್ನ ಪ್ರವಾಹದ ದಿಕ್ಕನ್ನು ಬದಲಾಯಿಸುತ್ತಾಳೆ. ಆ ಸಮಯದಲ್ಲಿ ಅಲ್ಲಿ ಇದ್ದ ಕೊಡವ ಮಹಿಳೆಯರ ಸೀರೆಯ ಮುಂದೆ ಇದ್ದ ನೆರಿಗೆಯು ನೀರಿನ ರಭಸಕ್ಕೆ ಹಿಂದಕ್ಕೆ ತಿರುಗಿತಂತೆ; ಅಲ್ಲಿಂದ ಕೊಡವ ಮಹಿಳೆಯರು ಸೀರೆ ಉಡುವಾಗ ನೆರಿಗೆಯನ್ನು ಹಿಂದಕ್ಕೆ ಹಾಕುವ ಬಗ್ಗೆ ಪ್ರತೀತಿ ಇದೆ.

ಕೊಡಗಿನವರು ಕಾವೇರಿಮಾತೆಯನ್ನು ನಂಬುತ್ತಾ ಬರುತ್ತಿದ್ದು ಉಗಮ ಸ್ಥಾನವಾದ ಪವಿತ್ರನೆಲೆ ತಲಕಾವೇರಿಯಲ್ಲಿ ವರ್ಷದ ಹಲವುಬಾರಿ ವಿಶೇಷ ಪೂಜಾದಿ ಉತ್ಸವಗಳನ್ನು ನಡೆಸಿಕೊಂಡು ಬರುತ್ತಿದ್ದು ಪ್ರತೀ ವರ್ಷದ ಅಕ್ಟೋಬರ್ ತಿಂಗಳ ತುಲಾ(ಸಂಕ್ರಮಣ)ಮಾಸದಲ್ಲಿ ಕಾವೇರಿ ಜಾತ್ರೆಯು ನಡೆಯಲಿದ್ದು ಜ್ಯೋತಿಷ್ಯಶಾಸ್ತ್ರದ ರೀತಿ ನಿಶ್ಚಿತವಾದ ತುಲಾ ಮುಹೂರ್ತದಲ್ಲಿ ಕುಂಡಿಕೆಯಿಂದ ತೀಥೋದ್ಬವವಾಗುತ್ತದೆ. ಮುಹೂರ್ತÀ ಸಮಯವು ಸಮೀಪಿಸಿದಂತೆ ಅರ್ಚಕರು ಶ್ರೀ ಕಾವೇರಿ ಕುಂಡಿಕೆಯಲ್ಲಿ ಶ್ರೀ ಕಾವೇರಿ ದೇವಿಗೆ ಮಹಾಸಂಕಲ್ಪ ಪೂಜೆ, ಸಹಸ್ರನಾಮಾರ್ಚನೆ, ಮಹಾಪೂಜೆ, ಮಂತ್ರೋಕ್ತವಾಗಿ ವಿಧಿಪೂರ್ವಕವಾಗಿ ಮಹಾಮಂಗಳಾರತಿ ಮಾಡುವ ಮೂಲಕ ಕೃಪಾಶೀರ್ವಾದವನ್ನು ಕೋರುತ್ತಾರೆ. ಆ ಹೊತ್ತಿಗೆ ತೀರ್ಥ ಕುಂಡಿಕೆಯಿಂದ ಪವಿತ್ರಜಲವು ಮೇಲುಕ್ಕಿ ಬರುತ್ತದೆ. ಅಷ್ಟರಲ್ಲಿ ಅರ್ಚಕರು ಶ್ರೀಜಲರೂಪಿಣಿ ಕಾವೇರಿಗೆ ಆರತಿಯನ್ನು ಬೆಳಗಿ ಪುಣ್ಯತೀರ್ಥವನ್ನು ಕುಂಡಿಕೆಯಿಂದ ತೆಗೆದು ನೆರೆದಿದ್ದ ಭಕ್ತಸಮೂಹದ ಮುಂದೆ ಎರಚುತ್ತಿದ್ದಂತೆ ಭಕ್ತ ಸಮೂಹ ಜೈ ಜೈ ಮಾತಾ.. ಕಾವೇರಿ.. ಎನ್ನುತ್ತಾ ತೀರ್ಥೋದ್ಬವವನ್ನು ಕಣ್ತುಂಬಿಕೊಳ್ಳುತ್ತಾರೆ. ಕುಂಡಿಕೆಯಿಂದ ಅದೆಷ್ಟು ತೀರ್ಥ ತೆಗೆದರೂ ಪವಿತ್ರ ಕುಂಡಿಕೆಯಲ್ಲಿ ತೀರ್ಥ ಕಡಿಮೆಯಾಗುವುದೇ ಇಲ್ಲ. ತೀರ್ಥೋದ್ಬವ ಹಾಗೂ ತೀರ್ಥ ಅಕ್ಷಯ ತಲಕಾವೇರಿಯಲ್ಲಿ ಪ್ರತಿವರ್ಷ ಕಂಡುಬರುವ ದೈವಿಕ ಪವಾಡದ ದೃಶ್ಯವೆಂದೇ ಹೇಳಲಾಗುತ್ತಿದೆ.

ಯಾರು ಕಾವೇರಿಯ ಪರಮ ಪವಿತ್ರವಾದ ತೀರ್ಥದಲ್ಲಿ ಸ್ನಾನಮಾಡುವರೋ ಅವರ ಜನ್ಮಾಂತರ ಪಾಪಗಳೆಲ್ಲ ನಾಶವಾಗುವುದು, ಸೂರ್ಯನು ತುಲಾರಾಶಿಯನ್ನು ಪ್ರವೇಶಿಸುವ ತೀರ್ಥೋದ್ಭವದ ಸಮಯದಲ್ಲಿ ತೀರ್ಥಸ್ನಾನ ಮಾಡುವುದರಿಂದ ಆಶ್ವಮೇಧಯಾಗ ಫಲವು ಹಾಗೂ ಕಾವೇರಿ ಜಲದಲ್ಲಿ ಒಂದು ತಿಂಗಳು ಎಡೆಬಿಡದೆ ಸ್ನಾನ ಪೂಜಾದಿ ಕೈಂಕರ್ಯವನ್ನು ಮಾಡುವುದರಿಂದ ಮಂಗಳಕರ ದಿವ್ಯಗತಿ ಹೊಂದುವರೆಂಬ ನಂಬಿಕೆಯೂ ಇದೆ. ತಲಕಾವೇರಿಗೆ ಹೋಗಲು ಸಾಧ್ಯವಾಗದವರು ಹರಿಶ್ಚಂದ್ರ, ಬಲಮುರಿ ಹಾಗೂ ಗುಯ್ಯ ಮೊದಲಾದ ಸ್ಥಳಗಳಿಗೆ ಹೋಗಿ ಕಾವೇರಿಯಲ್ಲಿ ಸ್ನಾನ ಮಾಡಿ ಪೂಜೆ ಸಲ್ಲಿಸುವರು. ಶ್ರೀಕಾವೇರಿಮಾತೆಯು ತೀರ್ಥರೂಪಿಣಿ ಯಾಗಿ ಬಂದು ನಾಡಿನ ಸಮಸ್ತರಿಗೆ ಒಳಿತುಮಾಡಲಿ ಎಂದು ಪ್ರಾರ್ಥಿಸೋಣ.

-ಪುತ್ತರಿರ ಕರುಣ್‍ಕಾಳಯ್ಯ, ಕೊಡಗು

ಏಚಿಡಿuಟಿಟಚಿಟಚಿiಚಿh@gmಚಿiಟ.ಛಿom