ವೀರಾಜಪೇಟೆ, ಅ. 11: ಮಾತೃಭಾಷೆಯ ಜೊತೆಗೆ ಇತರ ಭಾಷೆಗಳ ಕಲಿಕೆಯು ವ್ಯಕ್ತಿಯಲ್ಲಿನ ಕೌಶಲ್ಯವನ್ನು ವೃದ್ಧಿಸುವಂತೆ ಮಾಡುತ್ತದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಮಚ್ಚಾಡೋ ಅಭಿಪ್ರಾಯಪಟ್ಟರು.

ವೀರಾಜಪೇಟೆಯ ಸಂತ ಅನ್ನಮ್ಮ ಶಾಲೆಯ ಸಭಾಂಗಣದಲ್ಲಿ ಹಿಂದಿ ದಿವಸದ ಅಂಗವಾಗಿ ಅತಿಥಿಯಾಗಿ ಭಾಗವಹಿಸಿದ್ದ ಅವರು ಮಾತೃ ಭಾಷೆಯೊಂದಿಗೆ ಇತರ ಭಾಷೆಗಳಿಗೂ ಆದ್ಯತೆ ನೀಡುವಂತಾಗಬೇಕೆಂದರು. ವೀರಾಜಪೇಟೆ ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀಶೈಲ ಬಿಳಗಿ, ಸಮನ್ವಯಾಧಿಕಾರಿ ವನಜಾಕ್ಷಿ, ಸಂಪನ್ಮೂಲ ವ್ಯಕ್ತಿ ಡಾ.ವಿಜಿ ಹಾಗೂ ತಾಲೂಕು ಹಿಂದಿ ಶಿಕ್ಷಕರ ಸಂಘದ ಅಧ್ಯಕ್ಷ ಶರತ್ ಕುಮಾರ್ ಮಾತನಾಡಿದರು.

ಹಿಂದಿ ಶಿಕ್ಷಕರ ಸಂಘದಿಂದ ಈ ಸಂದರ್ಭ ಸಂತ ಅನ್ನಮ್ಮ ಶಾಲೆಯ ಶಿಕ್ಷಕ ಜೋನಾಥನ್, ಚಿಟ್ಟಡೆಯ ಹಿರಿಯ ಪ್ರಾಥಮಿಕ ಶಾಲೆಯ ಶಾಹಿದಾ ಖಾನ್, ಪಟ್ಟಣದ ಸರ್ಕಾರಿ ಪ್ರೌಢಶಾಲೆಯ ಪ್ರತೀಕ ಹಾಗೂ ಕೊಂಡಂಗೇರಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ನಳಿನಿ ಅವರಿಗೆ ಉತ್ತಮ ಹಿಂದಿ ಶಿಕ್ಷಕ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. ಮಚ್ಚಾಡೋ ಹಾಗೂ ಶ್ರೀಶೈಲ ಬಿಳಗಿ ಇವರುಗಳನ್ನು ಸಭೆಯಲ್ಲಿ ಸನ್ಮಾನಿಸಲಾಯಿತು. ಸಂಘದ ಉಪಾಧ್ಯಕ್ಷೆ ಪ್ರತೀಕ ನಿರೂಪಿಸಿದರು.