*ಗೋಣಿಕೊಪ್ಪಲು, ಅ. 12: ದೇಶದ ಹೆಸರಾಂತ ರಾಷ್ಟ್ರೀಯ ಉದ್ಯಾನವಾದ ನಾಗರಹೊಳೆ ರಾಜೀವ್ ಗಾಂಧಿ ರಾಷ್ಟ್ರೀಯ ಉದ್ಯಾನದಲ್ಲಿ ಸ್ಥಗಿತಗೊಂಡಿದ್ದ ಸಫಾರಿಯನ್ನು ಪುನರ್ ಆರಂಭಿಸಲಾಗಿದೆ.

ಕೋವಿಡ್-19 ರ ನಿಬರ್ಂಧದಿಂದಾಗಿ ಕಳೆದ ಎಂಟು ತಿಂಗಳಿನಿಂದ ಸಾರ್ವಜನಿಕರ ಪ್ರವೇಶವನ್ನು ಉದ್ಯಾನದೊಳಗೆ ನಿಷೇಧಿಸಲಾಗಿತ್ತು. ಇದೀಗ ಸರಕಾರವೇ ನಿಬರ್ಂಧ ತೆರವುಗೊಳಿಸಿದ್ದರಿಂದ ಅರಣ್ಯ ಇಲಾಖೆ ನಾಗರಹೊಳೆಯಲ್ಲಿ ಸಫಾರಿಯನ್ನು ಭಾನುವಾರದಿಂದ ಆರಂಭಿಸಿದೆ.

ಪ್ರತಿದಿನ ಬೆಳಿಗ್ಗೆ 6 ಮತ್ತು 7.30ಕ್ಕೆ ಮಧ್ಯಾಹ್ನ 2 ಮತ್ತು 3.30ಕ್ಕೆ ಸಫಾರಿಯನ್ನು ನಿಗದಿಪಡಿಸಲಾಗಿದೆ. ಸಫಾರಿ ಪುನರ್ ಆರಂಭವಾದ ಮೊದಲ ದಿನ ಸಾರ್ವಜನಿಕರ ಸಂಖ್ಯೆ ಕಡಿಮೆ ಇತ್ತು. ಈ ಕಾರಣ ಬೆಳಿಗ್ಗೆ ಒಂದು ಬಾರಿ ಮಾತ್ರ ಸಫಾರಿ ನಡೆಸಲಾಗಿದೆ ಎಂದು ಮಾಹಿತಿ ನೀಡಿರುವ ನಾಗರಹೊಳೆಯ ನೂತನ ಎ.ಸಿ.ಎಫ್. ಗೋಪಾಲ್ ಅವರು, ಕೋವಿಡ್‍ಗೆ ಸಂಬಂಧಿಸಿದಂತೆ ಎಲ್ಲಾ ಮುನ್ನೆಚ್ಚರಿಕೆ ಕ್ರಮಗಳನ್ನು ಕಡ್ಡಾಯವಾಗಿ ಪಾಲಿಸಲಾಗುತ್ತಿದೆ. ಸಫಾರಿ ಬಸ್‍ನಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಕಡ್ಡಾಯ ವಾಗಿದ್ದು, ಈ ಕಾರಣದಿಂದ ಬಸ್ಸಿನಲ್ಲಿ ಕೇವಲ 20 ಜನರಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ ಎಂದು ಅವರು ‘ಶಕ್ತಿ'ಗೆ ತಿಳಿಸಿದ್ದಾರೆ.