ಮಡಿಕೇರಿ, ಅ. 11 : ದಕ್ಷಿಣ ಕೊಡಗಿನ ಶ್ರೀಮಂಗಲ ಸನಿಹದ ಗ್ರಾಮ ಕುಮುಟೂರುವಿನಲ್ಲಿ ವಾಸವಿರುವ ಕಳ್ಳಂಗಡ ಕುಟುಂಬಕ್ಕೂ ತಲಕಾವೇರಿ ಕ್ಷೇತ್ರಕ್ಕೂ ಒಂದು ರೀತಿಯ ಬಾಂಧವ್ಯವಿದೆ. ಈ ಕುಟುಂಬ ಕೊಡಗಿನ ಕೊಡವ ಜನಾಂಗದ ಎಂಟು ದೇಶತಕ್ಕ ಕುಟುಂಬಗಳಲ್ಲಿ ಒಂದಾಗಿದೆ. ಪುರಾತನ ಕಾಲದಲ್ಲಿ ರಾಜರ ಆಳ್ವಿಕೆ ಸಂದರ್ಭ ಈ ಕುಟುಂಬದ ಹೆಸರು ಕಳ್ಳೆರ ಎಂದಾಗಿದ್ದು, ಬಳಿಕ ಪೂರ್ವಜರು ಕಳ್ಳಂಗಡ ಎಂದು ಬದಲಾಯಿಸಿದ್ದಾರೆ. ಎಂಟು ದೇಶ ತಕ್ಕ ಕುಟುಂಬಗಳಲ್ಲಿ ಮೊದಲನೆಯ ಹೆಸರು ಈ ಕುಟುಂಬದ್ದಾಗಿದೆ.
ಕಳ್ಳೆ, ಬೊಳ್ಳೆ, ಮಾತ, ಬುಡುವ, ಪಾಂಡಿ, ಪರದ, ಪೋರೆ, ಪರುವ (ಪ್ರಸ್ತುತ ಕರೆಯಲ್ಪಡುವ ಕಳ್ಳಂಗಡ, ಬೊಳ್ಳೆರ, ಮಾತಂಡ, ಬುಡುವಂಡ, ಪಾಂಡಿರ, ಪರದಂಡ, ಪೋರೆರ, ಪರುವಂಡ) ಈ ಎಂಟು ಕುಟುಂಬ ಗಳಿಗೆ ದೇಶ ತಕ್ಕರು ಎಂಬ ಮಾನ್ಯತೆ ಇದೆ. ಇದು ಐತಿಹಾಸಿಕವಾಗಿ ಬಂದಿರುವಂತಹ ಒಂದು ವಿಚಾರವಾಗಿದೆ.
ಇದರಲ್ಲಿ ಕಳ್ಳಂಗಡ ಕುಟುಂಬದ ಪೂರ್ವಜರು 1917-18ರ ಸಂದರ್ಭ ದಲ್ಲಿ ಮೂಲ ಕಾವೇರಿ ಮಾತೆಗೆ ಕುಮುಟೂರಿನಲ್ಲಿ ಮೂರು ಎಕರೆ ಭತ್ತದ ಭೂಮಿ ಹಾಗೂ ಎರಡು ಎಕರೆ ಬಾಣೆ ಜಾಗವನ್ನು ಭಕ್ತಿಯಿಂದ ಉದಾರವಾಗಿ ನೀಡಿ ಮೀಸಲಿಟ್ಟಿ ದ್ದಾರೆ. ಸದರಿ ಭೂಮಿಯನ್ನು ಮೂಲ ಗೇಣಿಯಂತೆ ವ್ಯವಸಾಯ ಮಾಡಿ 15 ಬಟ್ಟಿ ಭತ್ತ (ಒಂದುಗಾಡಿ ಭತ್ತ) ಅಥವಾ ಇದರ ಬೆಲೆಯನ್ನು ಹಣದ ರೂಪದಲ್ಲಿ ತಲಕಾವೇರಿ ಕ್ಷೇತ್ರಕ್ಕೆ ಕೊಡುವ ಪರಿಪಾಲನೆ ಇದಾಗಿದೆ. ಇತ್ತೀಚೆಗೆ ಭತ್ತದ ವ್ಯವಸಾಯದಲ್ಲಿನ ತೊಂದರೆಯಿಂದಾಗಿ ಇದರ ಬದಲಾಗಿ ಪ್ರತಿವರ್ಷ ಕುಟುಂಬದ ಮೂಲಕ ರೂ. 10 ಸಾವಿರ ಹಣವನ್ನು ತಪ್ಪದೇ ತಲಕಾವೇರಿ ಕ್ಷೇತ್ರಕ್ಕೆ ಒದಗಿಸಲಾಗುತ್ತಿದೆ.
ಇದರಂತೆ ಇಲ್ಲಿನ ಧಾನ್ಯ ಅಥವಾ ಹಣದಿಂದ ತಲಕಾವೇರಿಯಲ್ಲಿ ನಿತ್ಯಪೂಜೆಗೆ ಒಂದು ಪಾವು ಅಕ್ಕಿಯ ನೈವೇದ್ಯವನ್ನು ತಲಕಾವೇರಿಗೆ ಮಾಡಲಾಗುವದು.
ಕಳ್ಳಂಗಡ ಕುಟುಂಬದವರು ಕ್ಷೇತ್ರಕ್ಕೆ ಜಾಗವನ್ನು ಉದಾರವಾಗಿ ನೀಡಿರುವ ಹಿನ್ನೆಲೆಯಲ್ಲಿ ಈ ಕುಟುಂಬಸ್ಥರು ಜಾತ್ರೆಯಲ್ಲಿ ಪಾಲ್ಗೊಳ್ಳುತ್ತಿದ್ದಾಗ ರಾತ್ರಿ ತಂಗಲು ಭಾಗಮಂಡಲದ ಭಗಂಡೇಶ್ವರ ದೇವಸ್ಥಾನದ ‘ಪೌಳಿ’ಯಲ್ಲಿ ಒಂದು ಕೊಠಡಿಯನ್ನು ಇವರಿಗಾಗಿ ಕಾಯ್ದಿರಿಸಿಕೊಂಡು ಬರಲಾಗುತ್ತಿತ್ತು. ಆದರೆ ಕ್ಷೇತ್ರ ಜೀರ್ಣೋದ್ಧಾರಗೊಂಡ ಬಳಿಕ ಈ ಪೌಳಿಯಲ್ಲಿ ಕೊಠಡಿ ಕಾಯ್ದಿರಿಸುವ ವಿಚಾರ ಇಲ್ಲವಾಗಿದೆ ಎನ್ನುತ್ತಾರೆ ಕುಟುಂಬದ ಈಗಿನವರು.
ಈ ಉದಾರ ಕೊಡುಗೆಗಾಗಿ ಭಾಗಮಂಡಲದ ದೇವಸ್ಥಾನದ ‘ಪೌಳಿ’ಯ ಗೋಡೆಯ ಈ ಕುರಿತಾದ ಮಾಹಿತಿಯ ಶಿಲಾ ಶಾಸನವನ್ನೂ ಇಡಲಾಗಿತ್ತು. ಇದನ್ನೂ ಕೂಡ ಇತ್ತೀಚಿನ ವರ್ಷದಲ್ಲಿ ವಿವಿಧ ಕೆಲಸದ ಸಂದರ್ಭ ತೆಗೆದು ಹಾಕಲಾಗಿದೆ ಎಂದು ಮಾಹಿತಿಯಿತ್ತಿರುವ ಕುಟುಂಬಸ್ಥರು ಶಿಲಾಶಾಸನವನ್ನು ಯಥಾಪ್ರಕಾರ ಅದೇ ಸ್ಥಳದಲ್ಲಿ ಮತ್ತೆ ಇಡಲು ಕ್ರಮಕೈಗೊಳ್ಳುವಂತೆ ಕುಟುಂಬದ ಮೂಲಕ ಆಡಳಿತ ಮಂಡಳಿಯನ್ನು ವಿನಂತಿಸಲಾಗಿದೆ ಎಂದು ತಿಳಿಸಿದ್ದಾರೆ.
ರೂ. 25 ಸಾವಿರ ನಿರುಖು ಠೇವಣಿ
ಜಾಗ ಉದಾರವಾಗಿ ನೀಡಿರುವದು ಹಿಂದಿನ ಪೂರ್ವಜ ರಾದರೆ, ಈಗಿನ ಪೀಳಿಗೆಯವರು ಸೇರಿ ಈ ಹಿಂದೆ 20-10-2003ರಲ್ಲಿ ಆಗಿನ ಕೊಡಗು ಜಿಲ್ಲಾಧಿಕಾರಿಗಳಾಗಿದ್ದ ಸುಬೋಧ್ ಯಾದವ್ ಸಮ್ಮುಖದಲ್ಲಿ ರೂ. 25 ಸಾವಿರ ನಗದು ಹಣವನ್ನು ಕೂಡ ನಿರಖು ಠೇವಣಿಯಾಗಿ ಇಟ್ಟಿದ್ದಾರೆ. ಇದರ ಬಡ್ಡಿಯಿಂದ ವರ್ಷಂಪ್ರತಿ ತಲಕಾವೇರಿಯಲ್ಲಿ ಜಾತ್ರೆಯ ಸಂದರ್ಭದಲ್ಲಿ ವಿಶೇಷ ಪೂಜೆ ನೆರವೇರಿಸಲೂ ಇದಕ್ಕೆ ಅನುಗುಣವಾಗಿ ಒಪ್ಪಿಗೆಯನ್ನು ಕುಟುಂಬದವರಿಗೆ ನೀಡಲಾಗಿದೆ.
ಮಾತೆ ಕಾವೇರಮ್ಮ ಹೆಸರಲ್ಲಿ ಆರ್ಟಿಸಿ
ಉದಾರವಾಗಿ ನೀಡಿರುವ ಜಾಗವನ್ನು ಭವಿಷ್ಯದಲ್ಲೂ ಕೂಡ ಯಾವದೇ ಸಮಸ್ಯೆ ಎದುರಾಗ ದಂತಿರಲು ಕುಟುಂಬದವರು ಗಮನ ಹರಿಸಿದ್ದಾರೆ. ಮೂಲದೇಣಿ ಪ್ರಕಾರ ಇದರ ನಿರ್ವಹಣೆಯ ಜವಾಬ್ದಾರಿ ಕುಟುಂಬದವರಿಗೆಯಾದರೂ ಸಂಬಂಧಿತ ಜಾಗವನ್ನು ‘ಮಾತೆ ಕಾವೇರಮ್ಮನವರು’ ಎಂಬ ಹೆಸರಿನಲ್ಲಿ ಎರಡು ಪ್ರತ್ಯೇಕ ಆರ್ಟಿಸಿಯನ್ನು ಕಳೆದ ಹದಿನೈದು ವರ್ಷಗಳ ಹಿಂದೆಯೇ ಮಾಡಿಸಲಾಗಿದೆ.
ಈ ಹಿಂದೊಮ್ಮೆ ಕೆಲವು ವರ್ಷಗಳ ಹಿಂದೆ ಜಾಗದ ನಿರ್ವಹಣೆ ಹಾಗೂ ಕ್ಷೇತ್ರಕ್ಕೆ ನೀಡುತ್ತಿದ್ದ ಹಣ, ಧಾನ್ಯದ ವಿಚಾರದಲ್ಲಿ ಸ್ವಲ್ಪಮಟ್ಟಿಗೆ ಕಡೆಗಣನೆಯಾಗಿತ್ತು. ಈ ಸಂದರ್ಭ ದಲ್ಲಿ ಈ ವಿಚಾರ ಅಷ್ಟಮಂಗಲ ಪ್ರಶ್ನೆಯಲ್ಲಿ ಕಂಡು ಬಂದು ಕುಟುಂಬಕ್ಕೆ ದೋಷ ಎದುರಾಗುವ ವಿಚಾರ ಪ್ರಸ್ತಾಪವಾಗಿತ್ತು. ಇದನ್ನು ತಲಕಾವೇರಿ - ಭಾಗಮಂಡಲ ವ್ಯವಸ್ಥಾಪನಾ ಸಮಿತಿಯ ವ್ಯವಸ್ಥಾಪಕ ರಾಗಿದ್ದ ಸಂಪತ್ಕುಮಾರ್ ಅವರು ಕುಟುಂಬದ ಪ್ರಮುಖರಿಗೆ ಮಾಹಿತಿ ನೀಡಿದ್ದರು. ಇದರನ್ವಯ ಕುಟುಂಬದವರು ಸೇರಿ ಚರ್ಚಿಸಿ ಆ ತನಕ ಸುಮಾರು ನಾಲ್ಕು ವರ್ಷ ಕಡೆಗಣನೆಯಾಗಿದ್ದ ಹಿನ್ನೆಲೆಯಲ್ಲಿ ರೂ. 25 ಸಾವಿರವನ್ನು ನಿರಖು ಠೇವಣಿಯಾಗಿ ನೀಡಲಾಗಿದೆ.
ಅಲ್ಲದೆ ಕುಟುಂಬದ ಪ್ರತಿಮನೆ ಯಿಂದ ಒಂದು ಹಿಡಿ ನಾಣ್ಯ (ಪುಡಿಪಣ)ವನ್ನು ಸಂಗ್ರಹಿಸಿ ನೀಡಲಾಗಿದೆ ಎಂದು ಕಳ್ಳಗಂಡ ಕುಟುಂಬದ ಈಗಿನ ಅಧ್ಯಕ್ಷರಾಗಿರುವ ಅಪ್ಪಾಜಿ ಹಾಗೂ ಕಾರ್ಯದರ್ಶಿ ಮೋಹನ್ ಭೀಮಯ್ಯ ಅವರುಗಳು ತಿಳಿಸಿದರು. ಈ ಹಿಂದೆ 1918ರ ಅವಧಿಯಲ್ಲಿ ಆಗಿನ ಬ್ರಿಟಿಷ್ ಚೀಫ್ ಕಮೀಷನರ್ ಇದ್ದ ಸಂದರ್ಭದಲ್ಲಿ ಈ ಜಾಗ ನೀಡಿರುವದಾಗಿ ಕುಟುಂಬದ ಮಾಜಿ ಅಧ್ಯಕ್ಷ ಪೂವಯ್ಯ ತಿಳಿಸಿದ್ದಾರೆ. ಪ್ರಸ್ತುತ ಅಪ್ಪಾಜಿ ಅವರೇ ಈ ಜಾಗದ ನಿರ್ವಹಣೆಯನ್ನು ಇತರರ ಸಹಕಾರ ದೊಂದಿಗೆ ಮಾಡಿಕೊಂಡು ಬರುತ್ತಿದ್ದು, ವರ್ಷಂಪ್ರತಿ ಕಾಣಿಕೆಯನ್ನು ಕ್ಷೇತ್ರಕ್ಕೆ ಸಮರ್ಪಕವಾಗಿ ಒಪ್ಪಿಸಿಕೊಂಡು ಬರಲಾಗುತ್ತಿದೆ. ಕಾವೇರಿಗೆ ಸಂಬಂಧಿಸಿದ ಹಲವು ಐತಿಹ್ಯಗಳಲ್ಲಿ ಈ ವಿಚಾರವೂ ಒಂದಾಗಿದೆ.
- ಕಾಯಪಂಡ ಶಶಿ ಸೋಮಯ್ಯ