(ತಾ. 12 ರ ಸಂಚಿಕೆಯಿಂದ)

ಕೊಡಗು ಜಿಲ್ಲೆಗೆ ಸೀಮಿತವಾಗಿ ಹೇಳುವುದಾದಲ್ಲಿ ಜಿಲ್ಲೆ ಸುತ್ತಲೂ ಅರಣ್ಯದಿಂದ ಸುತ್ತುವರಿಯಲ್ಪಟ್ಟಿದೆ. ಸಾವಿರಾರು ಎಕರೆ ಅರಣ್ಯ ಪ್ರದೇಶವನ್ನು ಹೊಂದಿದ್ದು, ನೆರೆ ಜಿಲ್ಲೆಗಳಿಗೂ ವ್ಯಾಪಿಸಿಕೊಂಡಿದೆ. ಇಷ್ಟು ವಿಸ್ತಾರವಾದ ಮೀಸಲು ಅರಣ್ಯ, ರಕ್ಷಿತಾರಣ್ಯಗಳಿದ್ದರೂ ಕೂಡ ಕಾಡಾನೆಗಳು ಗ್ರಾಮಗಳ ಕಡೆ ಬರುತ್ತಿರುವುದೇಕೆ.

ಅರಣ್ಯ ಇಲಾಖೆ, ಸರಕಾರಗಳು ಅಥವಾ ಪರಿಸರ ಪ್ರೇಮಿಗಳು, ಪ್ರಾಣಿ ಪ್ರಿಯರು ಹಲವು ಕಾರಣಗಳನ್ನು ತಮ್ಮ ತಮ್ಮ ಮೂಗಿನ ನೇರಕ್ಕೆ ನೀಡುತ್ತಾ ಜನರ ಬಾಯಿಮುಚ್ಚಿಸುವ, ದಾರಿ ತಪ್ಪಿಸುವ ಪ್ರಯತ್ನ ಮಾಡುತ್ತಿದ್ದಾರೆ. ಮೂಲಭೂತ ಸಮಸ್ಯೆಗಳತ್ತ ತಮ್ಮ ಚಿಂತನೆಯನ್ನು ಹರಿಸುವ ಗೋಜಿಗೇ ಹೋಗುವುದಿಲ್ಲ. ಹಾಗಾದರೆ ಸಾಮಾನ್ಯ ಜನ ಚಿಂತಿಸುವ ಪರಿಯಲ್ಲಿ ಕಾಡು ಪ್ರಾಣಿಗಳು ಕಾಡನ್ನು ಬಿಟ್ಟು ನಾಡಿನತ್ತ ಬರುತ್ತಿರುವುದರ ಕಾರಣವೇನು...? ಸಾವಿರಾರು ಎಕರೆ ಅರಣ್ಯ ಪ್ರದೇಶವಿದ್ದರೂ ಕಾಡು ಪ್ರಾಣಿಗಳಿಗೆ ಮೂಲಭೂತವಾಗಿ ಇರಬೇಕಾದ ಸೌಕರ್ಯಗಳು ಕಾಡಿನೊಳಗೆ ಇವೆಯೇ... ಅರ್ಥಾತ್ ಅವುಗಳಿಗೆ ಬೇಕಾದ ಆಹಾರ, ಸಮರ್ಪಕ ಕುಡಿಯುವ ನೀರು, ವಾಸಕ್ಕೆ ಯೋಗ್ಯವಾದ ನೆಲೆ ಇತ್ಯಾದಿ. ಮಾಂಸಹಾರಿ ಪ್ರಾಣಿಗಳಾದಲ್ಲಿ ಅವುಗಳ ಜೀವನ ಚಕ್ರದ ಪ್ರಕಾರ ಇತರ ಪ್ರಾಣಿಗಳನ್ನು ಬೇಟೆಯಾಡಿ ತಿಂದು ಜೀವಿಸುತ್ತವೆ. ಆದರೆ ಆನೆ, ಕಡವೆ, ಜಿಂಕೆ, ಕಾಡೆಮ್ಮೆಗಳಂತ ಪ್ರಾಣಿಗಳು ಆಹಾರಕ್ಕಾಗಿ ಏನನ್ನು ಆಶ್ರಯಿಸಬೇಕು. ಹಸಿ ಸೊಪ್ಪು, ಹುಲ್ಲು, ಹಣ್ಣುಕಾಯಿಗಳು ಕೆಲವಕ್ಕೆ ಬೇಕಾದರೆ ಆನೆಗಳಿಗೆ ಬಿದಿರು, ಜೊಂಡು ಹುಲ್ಲು, ಹಲಸಿನ ಹಣ್ಣು ಇತ್ಯಾದಿಗಳು. ಇದರೊಂದಿಗೆ ಸ್ವಚ್ಛಂದವಾಗಿ ವಿಹರಿಸಲು ವಿಶಾಲವಾದ ನೀರಿನ ನೆಲೆ ಇವೆಲ್ಲಾ ಅರಣ್ಯದೊಳಗೆ ಲಭ್ಯವಿದೆಯೇ...? ಸರಕಾರ ಅರಣ್ಯಿಕರಣ ಯೋಜನೆಯಡಿಯಲ್ಲಿ ಹಲವು ಯೋಜನೆಗಳನ್ನು ಕೋಟ್ಯಾಂತರ ಅನುದಾನವನ್ನು ಬಡ್ಜೆಟ್‍ನಲ್ಲಿ ಘೋಷಿಸುತ್ತದೆ. ಆದರೆ ಅವೆಲ್ಲಾ ಸಮರ್ಪಕವಾಗಿ ಅನುಷ್ಠಾನಗೊಳ್ಳುತ್ತಿದೆಯೇ...? ಕಾಡಿನೊಳಗೆ ಮರ ಬೆಳೆಸುವ ನಿಟ್ಟಿನಲ್ಲಿ ಯೋಜನೆ ರೂಪಿಸಿ ಅಲ್ಲಿ ಒಂದಷ್ಟು ತೇಗದ ಮರವನ್ನು ನೆಟ್ಟು ಕಡತಗಳಲ್ಲಿ ದಾಖಲಿಸಲಾಗುತ್ತದೆ. ಆದರೆ ತೇಗದ ಮರ ಅಥವಾ ಇತರ ಕಾಡು ಮರಗಳಿಂದ ಕಾಡಿನೊಳಗಿರುವ ಪ್ರಾಣಿಗಳಿಗೆ ಏನು ಲಾಭ. ಇವುಗಳಿಂದ ಬೇರೆ ರೀತಿಯ ಲಾಭವಾಗುವುದು ಮತ್ಯಾರಿಗೊ. ಅದೇ ಕಾಡಿನೊಳಗೆ ಆನೆಗಳಿಗೆ ಬೇಕಾದ ಬಿದಿರು, ಹಲಸು, ಬೈನೆ ಇತರ ಹಣ್ಣಿನ ಮರಗಳನ್ನು ನೆಟ್ಟಲ್ಲಿ ಆನೆಗಳಿಗೆ ಬೇಕಾದ ಆಹಾರಗಳು ಕಾಡಿನೊಳಗೆ ಸಿಗುತ್ತವೆ. ಅವುಗಳಿಲ್ಲದ ಕಾರಣಕ್ಕಾಗಿಯೇ ಆನೆಗಳು ಆಯಾ ಕಾಲಮಾನಕ್ಕೆ ಅನುಗುಣವಾಗಿ ಲಭ್ಯವಾಗುವ ಆಹಾರಗಳು ನೆರೆಕರೆಯ ತೋಟಗಳಲ್ಲಿ ಸಿಗುವ ಕಾರಣದಿಂದ ಕಾಡಿನಿಂದ ನಾಡಿಗೆ, ತೋಟಕ್ಕೆ ದಾಳಿ ಇಡುತ್ತವೆ.

ಇನ್ನು ಆನೆಗಳ ಬಗ್ಗೆ ಹೇಳುವುದಾದರೆ ಪ್ರಾಣಿಗಳಲ್ಲೇ ಅತೀ ಬುದ್ಧಿವಂತ ಪ್ರಾಣಿ ಇದು. ಅತೀ ಸೂಕ್ಷ್ಮತೆಯುಳ್ಳದ್ದಾಗಿದೆ. ಇದಕ್ಕೆ ಬಹಳಷ್ಟು ಉದಾಹರಣೆಗಳಿವೆ. ಆನೆಗಳು ಕಾಡಿನಿಂದ ನಾಡಿಗೆ ಬಾರದಂತೆ ತಡೆಯಲು ಆನೆ ಕಂದಕ ನಿರ್ಮಿಸುವುದು ಹಳೆಯ ಪದ್ಧತಿಯಾಗಿದೆ. ಎಷ್ಟೇ ಆಳದ ಕಂದಕವಾದರೂ ಆನೆಗಳು ಅವುಗಳಿಗೆ ಮಣ್ಣು ತುಂಬಿಸಿ, ಮರದ ದಿಮ್ಮಿಗಳನ್ನು ತಂದು ಹಾಕಿ ದಾಟುವುದು ಸಾಮಾನ್ಯವಾಗಿದೆ.

ಇನ್ನು ವಿದ್ಯುತ್, ಸೋಲಾರ್ ತಂತಿ ಬೇಲಿಗಳು. ಆರಂಭಿಕ ಹಂತದಲ್ಲಿ ಇವುಗಳಿಗೆ ಅಂಜಿದ ಆನೆಗಳು ಕ್ರಮೇಣ ತಮ್ಮ ಬುದ್ಧಿಶಕ್ತಿ ಉಪಯೋಗಿಸಿ ಅವುಗಳ ಮೇಲೆ ಒಣಗಿದ ಮರದ ಕೊಂಬೆಗಳನ್ನು ಹಾಕಿ ಜಗ್ಗದೆ ದಾಟಲಾರಂಭಿಸಿದವು. ಇತ್ತೀಚಿನ ಆವಿಷ್ಕಾರ - ರೈಲ್ವೇ ಕಂಬಿ ಅಳವಡಿಕೆ. ಇವುಗಳನ್ನು ಹಾಕಿದರೆ ಅವುಗಳನ್ನು ಮುರಿದು ದಾಟಲಾರವು ಎಂದು ಭಾವಿಸಿ ಆನೆಗಳಿಗೆ ಅವುಗಳಿಂದಲೂ ತಡೆಯೊಡ್ಡಲಾಯಿತು. ಇತ್ತೀಚೆಗೆ ಅವುಗಳನ್ನು ದಾಟಿ ಬರುವ ಉಪಾಯಗಳನ್ನು ಆನೆಗಳು ಕಂಡುಕೊಂಡು ‘ಮನುಷ್ಯನನ್ನು ಅಯ್ಯೋ... ದಡ್ಡಾ...’ ಎಂದು ಅಣಕಿಸುವಂತಾಗಿದೆ. ಹಾಗಾದರೆ ಏನೇ ಮಾಡಿದರೂ ತಡೆಯೊಡ್ಡಲಾಗದ ಕಾಡಾನೆಗಳ ದಾಳಿಯಿಂದಾಗುತ್ತಿರುವ ಕಷ್ಟ-ನಷ್ಟ, ಸಾವು-ನೋವುಗಳನ್ನು ಇನ್ನೆಷ್ಟು ಕಾಲ ರೈತರು, ಬೆಳೆಗಾರರು ಸಹಿಸಿಕೊಂಡಿರಬೇಕು...? ಎಷ್ಟೆಂದು ತಾಳ್ಮೆವಹಿಸಬೇಕು. ಒಂದಲ್ಲಾ ಒಂದು ರೀತಿಯಲ್ಲಿ ಕಾಡು ಪ್ರಾಣಿಗಳಿಂದ, ಕಾಡಾನೆಗಳ ಉಪಟಳದಿಂದ ರೋಸಿಹೋಗಿರುವ ರೈತ ಮನಸ್ಸಿನಾಳದಲ್ಲಿ ಅವುಗಳ ನಿಗ್ರಹಕ್ಕೆ ಏನೇನೋ ಯೋಚಿಸುವುದೂ ಇದೆ. ಆದರೆ ಕಾನೂನಿಗಳಿಗೆ ಅಂಜಿ, ಗೌರವ ಕೊಟ್ಟು ನುಂಗಲೂ ಆಗದೆ, ಅರಗಿಸಿಕೊಳ್ಳಲೂ ಆಗದೆ ಪರಿತಪಿಸುತ್ತಿದ್ದಾನೆ.

ಹಾಗಾದರೆ ಸಮಸ್ಯೆಗಳಿಗೆ ಪರಿಹಾರ ಕಾಣಲು ಸಾಧ್ಯವೇ ಇಲ್ಲವೇ...? ಖಂಡಿತಾ ಇದೆ. ಮೊದಲಿಗೆ ಕಾಡು ಪ್ರಾಣಿಗಳ ಮನಸ್ಥಿತಿಯನ್ನು ಅರಿತುಕೊಳ್ಳಬೇಕಿದೆ. ಕಾಡಿನೊಳಗೆ ಅವುಗಳಿಗೆ ಬೇಕಾಗಿರುವ ಮೂಲಭೂತ ಸೌಕರ್ಯಗಳ ಕುರಿತು ತಿಳಿದುಕೊಳ್ಳಬೇಕಿದೆ. ಸಾವಿರಾರು ಕೋಟಿ ಹಣ ವ್ಯಯಮಾಡಿ ವರ್ಷಕ್ಕೊಂದಷ್ಟು ಉಪಯೋಗಕ್ಕೆ ಮರಗಳನ್ನು ನೆಡುವ ಬದಲು ಪ್ರಾಣಿಗಳ ಆಹಾರೋತ್ಪನ್ನ ಮರಗಳನ್ನು ಬೆಳೆಸಬೇಕಾಗಿದೆ.

(ಮುಂದುವರಿಯುವುದು) - ಮಾದೇಟಿರ ಬೆಳ್ಯಪ್ಪ.