ವೀರಾಜಪೇಟೆ, ಅ. 12: ವೀರಾಜಪೇಟೆ ಪ್ರವಾಸಿ ಮಂದಿರದ ಹಿಂಬದಿಯ ಖಾಲಿ ಜಾಗದಲ್ಲಿ ಅತಿ ಗಣ್ಯರ ಅತಿಥಿ ಗೃಹ ನಿರ್ಮಾಣಕ್ಕೆ ವೀರಾಜಪೇಟೆ ಕ್ಷೇತ್ರದ ಶಾಸಕ ಕೆ.ಜಿ. ಬೋಪಯ್ಯ ಭೂಮಿಪೂಜೆ ನಡೆಸಿ ಆಧುನಿಕತೆಯೊಂದಿಗೆ ಎಲ್ಲ ಸೌಲಭ್ಯಗಳುಳ್ಳ ಅತಿಥಿ ಗೃಹ ಈ ವಿಭಾಗಕ್ಕೆ ಅಗತ್ಯವಾಗಿದೆ ಎಂದು ಹೇಳಿದರು.

ರೂ. ಒಂದು ಕೋಟಿ ವೆಚ್ಚದಲ್ಲಿ ನೆಲ ಹಾಗೂ ಮೊದಲನೇ ಮಹಡಿ ಸೇರಿದಂತೆ 430 ಚದರ ಮೀಟರ್ ವಿಸ್ತ್ರೀರ್ಣದ ಸುತ್ತಳತೆಯಲ್ಲಿ ನಿರ್ಮಾಣವಾಗುವ ಅತಿಥಿ ಗೃಹದ ನೆಲ ಮಳಿಗೆಯಲ್ಲಿ ವಿ.ಐ.ಪಿ ಕೊಠಡಿ, ಅಡುಗೆ ಮನೆ, ಊಟದ ಕೋಣೆ, ಮೊದಲ ಮಹಡಿಯಲ್ಲಿ ವಿ.ಐ.ಪಿ ಕೊಠಡಿ ಹಾಗೂ ಸಭಾಂಗಣ ನಿರ್ಮಾಣವಾಗಲಿದೆ ಎಂದರು.

ಜಿಲ್ಲಾ ಪಂಚಾಯಿತಿ ಸದಸ್ಯ ಮೂಕೊಂಡ ಶಶಿ ಸುಬ್ರಮಣಿ, ಪಟ್ರಪಂಡ ರಘು ನಾಣಯ್ಯ, ಪಟ್ಟಣ ಪಂಚಾಯಿತಿ ಸದಸ್ಯರುಗಳಾದ ಸಿ.ಕೆ. ಪ್ರಥ್ವಿನಾಥ್, ಆಶಾ ಸುಬ್ಬಯ್ಯ, ಸುಶ್ಮಿತಾ, ಯಶೋಧ, ಲೋಕೋಪಯೋಗಿ ಸಹಾಯಕ ಕಾರ್ಯಪಾಲ ಅಭಿಯಂತರ ಎಂ.ಈ. ಸುರೇಶ್, ಸಹಾಯಕ ಅಭಿಯಂತರ ಯತೀಶ್, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಎ.ಎಂ. ಶ್ರೀಧರ್, ಕಂದಾಯ ಅಧಿಕಾರಿ ಸಿ.ಎಸ್. ಪಳಂಗಪ್ಪ, ಪ್ರಕಾಶ್ ಮತ್ತಿತರರು ಹಾಜರಿದ್ದರು.