ಗೋಣಿಕೊಪ್ಪ ವರದಿ, ಅ. 12: ಹೊಸೂರು ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ಆಯೋಜಿಸಿದ್ದ ವಿಶೇಷ ಗ್ರಾಮ ಸಭೆಯಲ್ಲಿ ಹೊಸೂರು ಗ್ರಾಮವನ್ನು ಕೇಂದ್ರವನ್ನಾಗಿಟ್ಟುಕೊಂಡು ಮಹಿಳಾ ಹಾಲು ಉತ್ಪಾದಕರ ಸ್ವಸಹಾಯ ಸಂಘ ಸ್ಥಾಪಿಸಲು ನಿರ್ಧರಿಸಲಾಯಿತು.

ಹೊಸೂರು ಗ್ರಾ.ಪಂ. ಮಾಜಿ ಅಧ್ಯಕ್ಷ ಕೊಲ್ಲಿರ ಗೋಪಿ ಚಿಣ್ಣಪ್ಪ ಅಧ್ಯಕ್ಷತೆಯಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಈ ಬಗ್ಗೆ ನಿರ್ಣಯ ತೆಗೆದುಕೊಳ್ಳಲಾಯಿತು. ನಿಯೋಜಿತ ಆಡಳಿತ ಮಂಡಳಿಯಲ್ಲಿ 13 ಮಹಿಳೆಯರನ್ನು ಆಯ್ಕೆ ಮಾಡಿ ಕೊಂಡು ಮುಂದುವರಿಯುವಂತೆ ನಿರ್ಧರಿಸಲಾಯಿತು.

ಹಾಲು ಒಕ್ಕೂಟದ ವಿಸ್ತರಣಾ ಅಧಿಕಾರಿ ವೀಣಾ ಮಾತನಾಡಿ, ಸರ್ಕಾರದ ನಿರ್ದೇಶನದಂತೆ ಹೊಸೂರು ಗ್ರಾಮವನ್ನು ಕೇಂದ್ರಿಕರಿಸಿಕೊಂಡು ಮಹಿಳಾ ಹಾಲು ಉತ್ಪಾದಕರ ಸ್ವಸಹಾಯ ಸಂಘ ಸ್ಥಾಪಿಸಲು ಹಾಸನ ಹಾಲು ಒಕ್ಕೂಟದಿಂದ ಮಂಜೂರಾಗಿದೆ. ಸಂಘ ನೋಂದಾವಣೆ ಆಗುವವರೆಗೂ ಒಂದು ನಿಯೋಜಿತ ಆಡಳಿತ ಮಂಡಳಿಯ ಅವಶ್ಯಕತೆ ಇದ್ದು ಸಭೆಯಲ್ಲಿ 13 ಮಹಿಳೆಯರನ್ನು ಒಳಗೊಂಡಂತೆ ಆಯ್ಕೆ ಮಾಡಿಕೊಳ್ಳಲು ಸಲಹೆ ನೀಡಿದರು.

ಅಮ್ಮತ್ತಿ ನಾಡು ವ್ಯಾಪ್ತಿಯ ಏಳೆಂಟು ಗ್ರಾಮಗಳಲ್ಲಿ ಹೈನುಗಾರಿಕೆ ಉದ್ಯಮದಲ್ಲಿ ತೊಡಗಿರುವವರ ಬೇಡಿಕೆಯಂತೆ ಗ್ರಾಮಗಳಲ್ಲಿ ಆಂತರಿಕ ಸಮೀಕ್ಷೆ ನಡೆಸಿರುವ ಬಗ್ಗೆ ಮಾಹಿತಿ ನೀಡಲಾಯಿತು.

ಜಿ.ಪಂ. ಮಾಜಿ ಸದಸ್ಯ ಕೊಲ್ಲೀರ ಧರ್ಮಜ ಮಾತನಾಡಿ, ಹಲವು ವರುಷಗಳ ನಿರಂತರ ಪ್ರಯತ್ನದಿಂದಾಗಿ ಈಗ ಹಾಲು ಉತ್ಪಾದಕರ ಸಂಘ ನೋಂದಾವಣೆಯಾಗುತ್ತಿದೆ. ಹಾಲು ಉತ್ಪಾದನೆಗೆ ಗ್ರಾಮಸ್ಥರ ಆಸಕ್ತಿ ಮತ್ತಷ್ಟು ಹೆಚ್ಚಾಗಬೇಕು ಎಂದರು.

ಹೊಸೂರು ಗ್ರಾ.ಪಂ. ಮಾಜಿ ಅಧ್ಯಕ್ಷ ಗೋಪಿ ಚಿಣ್ಣಪ್ಪ ಮಾತನಾಡಿ, ಹೈನು ಕೃಷಿಗೆ ಹೆಚ್ಚು ಅನುಕೂಲ ವಾಗುತ್ತಿದೆ. ರೈತರು ಸ್ವಾವಲಂಭಿ ಜೀವನ ಕಾಣಬಹುದು ಎಂದರು.

ಪಿಡಿಒ ಶ್ರೀನಿವಾಸ್, ಸ್ಥಳೀಯರಾದ ಪಟ್ಟಡ ಧನು ಉತ್ತಯ್ಯ, ಮಂಡೆಪಂಡ ಶ್ಯಾಮ್, ಮುರುವಂಡ ತಮ್ಮಯ್ಯ, ಗ್ರೇಸಿ ತಮ್ಮಯ್ಯ, ಕತ್ರಿಕೊಲ್ಲಿ ಚಂದ್ರಶೇಖರ್, ಚೇತನ್, ಸಂದೀಪ್, ಬಿಪಿನ್‍ಕುಮಾರ್, ಶಾಂತ, ವಿಶಾಲಾಕ್ಷಿ ಇದ್ದರು.

ಆಯ್ಕೆ: ಈ ಸಂದರ್ಭ ನಿಯೋಜಿತ ಅಧ್ಯಕ್ಷೆಯಾಗಿ ಸುಭಾಷಿಣಿ, ಕಾರ್ಯದರ್ಶಿಯಾಗಿ ಪಂದ್ಯಂಡ ಶಾಂತಿ ಸೋಮಯ್ಯ ಅವರನ್ನು ಆಯ್ಕೆ ಮಾಡಲಾಯಿತು. ಸಂಘದ ನೋಂದಣಿ ನಂತರ ಚುನಾವಣೆ ಮೂಲಕ ಆಡಳಿತ ಮಂಡಳಿ ರಚಿಸಲು ಸೂಚಿಸಿದರು.