ಗೋಣಿಕೊಪ್ಪಲು, ಅ. 11: ಕೊಡಗಿನ ಪ್ರಬಲ ಸಮುದಾಯದಿಂದ ಇದೀಗ ಎಸ್.ಟಿ. ಮೀಸಲಾತಿ ನೀಡಬೇಕೆಂಬ ಒತ್ತಾಯ ಕೇಳಿ ಬರುತ್ತಿದೆ. ಬಲಾಢ್ಯ ಸಮುದಾಯಕ್ಕೆ ಎಸ್.ಟಿ. ಮೀಸಲಾತಿ ನೀಡಿದರೆ ಬುಡಕಟ್ಟು ಸಮುದಾಯದ ಸ್ಥಾನಮಾನ ಕಸಿದಂತಾಗುತ್ತದೆ. ಈ ಕಾರಣದಿಂದ ಆ ಸಮುದಾಯಕ್ಕೆ ಎಸ್ಟಿ ಸ್ಥಾನಮಾನ ನೀಡಬಾರದು ಎಂದು ಒತ್ತಾಯಿಸಿ ಆದಿವಾಸಿಗಳು ಸಭೆ ನಡೆಸಿ ಪ್ರತಿಭಟಿಸಿದರು.
ತಿತಿಮತಿ ಪಂಚಾಯಿತಿ ವ್ಯಾಪ್ತಿಯ ಬೊಂಬುಕಾಡು ಅರಣ್ಯ ವ್ಯಾಪ್ತಿಯಲ್ಲಿ ಸೇರಿದ ತಾಲೂಕಿನ ವಿವಿಧ ಭಾಗದ ಆದಿವಾಸಿಗಳು ಬುಡಕಟ್ಟು ಕೃಷಿಕರ ಸಂಘದ ಮುಂದಾಳತ್ವದಲ್ಲಿ ಸಭೆ ನಡೆಸಿದರು.
ಆದಿವಾಸಿ ಮುಖಂಡ ತಿತಿಮತಿಯ ಸುಬ್ರು ಮಾತನಾಡಿ, ಜಿಲ್ಲೆಯಲ್ಲಿ ನೆಲೆಸಿರುವ ಪ್ರಬಲ ಜನಾಂಗ ಆದಿವಾಸಿಗಳ ಹಕ್ಕನ್ನು ಕಸಿದುಕೊಳ್ಳುವ ಪ್ರಯತ್ನದಲ್ಲಿ ತೊಡಗಿವೆ. ಇದರಿಂದ ನೈಜ ಆದಿವಾಸಿಗಳ ಬದುಕಿಗೆ ಸಂಚಕಾರ ಎದುರಾಗಲಿದೆ. ಇನ್ನೂ ಕೂಡಾ ಆದಿವಾಸಿಗಳು ಸಮಾಜದ ಮುಖ್ಯ ವಾಹಿನಿಯಲ್ಲಿ ಗುರುತಿಸಿಕೊಳ್ಳಲು ಸಾಧ್ಯವಾಗಿಲ್ಲ. ಶೇ. 3 ಮೀಸಲಾತಿ ಮಾತ್ರ ಆದಿವಾಸಿಗಳಿಗೆ ಲಭ್ಯವಾಗುತ್ತಿದೆ. ಈ ಮೀಸಲಾತಿಯ ಪ್ರಯೋಜನ ನೈಜ ಆದಿವಾಸಿಗಳಿಗೆ ಸಿಗುತ್ತಿಲ್ಲ. ಯಾವುದೇ ಕಾರಣಕ್ಕೂ ಸರಕಾರ ಪ್ರಬಲ ಜನಾಂಗಕ್ಕೆ ಎಸ್ಟಿ ಮೀಸಲಾತಿ ನೀಡಬಾರದು ಎಂದು ಆಗ್ರಹಿಸಿದರು.
ಆದಿವಾಸಿಗಳನ್ನು ಉದ್ದೇಶಿಸಿ ಮಾತನಾಡಿದ ಜಿಲ್ಲಾ ಪಂಚಾಯಿತಿ ಸದಸ್ಯೆ ಪಿ.ಆರ್. ಪಂಕಜ, ಜಿಲ್ಲೆಯ ಪ್ರಬಲ ಜನಾಂಗದವರು ಆದಿವಾಸಿಗಳ ಕಷ್ಟದಲ್ಲಿ ಭಾಗಿಯಾಗುವ ಮೂಲಕ ಮಾರ್ಗದರ್ಶನ ನೀಡುತ್ತಿದ್ದರು. ಇವರ ತೋಟ, ಗದ್ದೆಗಳಲ್ಲಿ ಕೆಲಸ ಮಾಡಿ ಜೀವನ ಕಂಡುಕೊಂಡವರು ಸ್ವಾತಂತ್ರ್ಯ ಬಂದು ದಶಕಗಳು ಉರುಳಿದರೂ ಬದುಕು ಬದಲಾಗಿಲ್ಲ. ಇನ್ನೂ ಕೂಡ ಜನಾಂಗವು ಗುಡಿಸಲಿನಲ್ಲಿ ಜೀವನ ಸಾಗಿಸುತ್ತಿದ್ದಾರೆ. ಇದೀಗ ಆದಿವಾಸಿ ಗಳ ಹಕ್ಕಿನ ಮೇಲೆ ಸವಾರಿ ಮಾಡುವ ಮೂಲಕ ಜನಾಂಗದೊಂದಿಗೆ ಇದ್ದ ಉತ್ತಮ ಸಂಬಂಧ ಹಾಳಾಗುವ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ಎಸ್.ಟಿ. ಮೀಸಲಾತಿ ಪ್ರಬಲ ಜನಾಂಗ ಕೇಳುತ್ತಿರುವುದರಿಂದ ಇವರ ಅಸ್ತಿತ್ವಕ್ಕೆ ಧಕ್ಕೆ ಬಂದಂತಾಗಿದೆ. ಇಂತಹ ಸೂಕ್ಷ್ಮ ವಿಚಾರದಲ್ಲಿ ಸರಕಾರ ನ್ಯಾಯ ಪರವಾಗಿರಬೇಕು; ಆದಿವಾಸಿ ಗಳ ರಕ್ಷಣೆಗೆ ಧಾವಿಸಬೇಕೆಂದರು.
ಆದಿವಾಸಿಗಳ ಮುಖಂಡ ಆರ್.ಕೆ. ಚಂದ್ರು ಮಾತನಾಡಿ, ಜಿಲ್ಲೆಯಲ್ಲಿ 21 ಮೂಲನಿವಾಸಿಗಳು ತಮ್ಮದೇ ಆದ ವಿಶಿಷ್ಟ ಆಚಾರ, ವಿಚಾರಗಳನ್ನು ರೂಢಿಸಿಕೊಂಡು ಬಂದಿದ್ದಾರೆ. ಬುಡಕಟ್ಟು ಜನಾಂಗದ ಸಂಸ್ಕøತಿಗಳು ಇನ್ನೂ ಜೀವಂತವಿದೆ. ಆದರೆ ಸಮುದಾಯದ ಜನಾಂಗ ತಮ್ಮ ಹಕ್ಕುಗಳನ್ನು ಪಡೆಯಲು ಸಾಧ್ಯವಾಗಿಲ್ಲ. ಇದ್ದಂತಹ ರಾಜಕೀಯ ಮೀಸಲಾತಿ ಇದೀಗ ಇಲ್ಲದಾಗಿದೆ. ಜಿ.ಕೆ. ಸುಬ್ಬಯ್ಯ ಹೊರತುಪಡಿಸಿ ಬೇರೆ ಯಾರಿಗೂ ನ್ಯಾಯಯುತವಾದ ಮೀಸಲಾತಿ ಇಲ್ಲಿಯ ತನಕ ಸಿಗಲಿಲ್ಲ. ಆದಿವಾಸಿ ಗಳು ಅಲ್ಲದವರಿಗೆ ರಾಜಕೀಯ ಮೀಸಲಾತಿ ದೊರೆತಿವೆ. ಇನ್ನು ಮುಂದೆ ನೈಜ ಆದಿವಾಸಿಗಳು ಮೀಸಲಾತಿ ಯಿಂದ ಹೊರಹೋಗುವ ಸಾಧ್ಯತೆ ತಳ್ಳಿಹಾಕುವಂತಿಲ್ಲ. ಆದ್ದರಿಂದ ಪ್ರಬಲ ಜನಾಂಗಕ್ಕೆ ಎಸ್.ಟಿ. ಮೀಸಲಾತಿ ನೀಡುವ ಬಗ್ಗೆ ನಮ್ಮ ಹೋರಾಟ ನಿರಂತರವಾಗಿ ನಡೆಯಲಿದೆ. ಸರಕಾರ ಇಲ್ಲಿನ ವಸ್ತುಸ್ಥಿತಿ ಅವಲೋಕನ, ಅಧ್ಯಯನ ಮಾಡಬೇಕು, ಅಧಿಕಾರಿಗಳು ಆಮಿಷಕ್ಕೆ ಒಳಗಾಗದೆ ಕೆಲಸ ಮಾಡಬೇಕು, ಆದಿವಾಸಿಗಳ ಹಿತಕಾಪಾಡಬೇಕು ಎಂದರು.
ಬುಡಕಟ್ಟು ಕೃಷಿಕರ ಸಂಘದ ಅಧ್ಯಕ್ಷ ಪಿ.ಸಿ. ರಾಮು ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಉಪಾಧ್ಯಕ್ಷ ಮಣಿಕುಂಞÂ, ಕಾರ್ಯದರ್ಶಿ ಉದಯ, ತಾಲೂಕು ಪಂಚಾಯಿತಿ ಸದಸ್ಯ ವೈ.ಎಂ. ಪ್ರಕಾಶ್, ಗ್ರಾಮ ಪಂಚಾಯಿತಿ ಮಾಜಿ ಸದಸ್ಯೆ ಇಂದಿರಾ, ಜೆ.ಕೆ. ರಾಜು, ರಘು, ಶಾಂತ, ಮಂಜುಳ, ಸಿದ್ದಪ್ಪ, ಶಾಂತಮ್ಮ, ಪಿ.ಟಿ. ರಾಜು, ರವಿ, ಬೋಜಪ್ಪ, ಸೋಮಯ್ಯ, ಮಲ್ಲಪ್ಪ ಮುಂತಾದವರು ಮಾತನಾಡಿದರು. ಠಾಣಾಧಿಕಾರಿ ಸುರೇಶ್ ಬೋಪಣ್ಣ ಮುಂದಾಳತ್ವದಲ್ಲಿ ಪೆÇಲೀಸ್ ಸಿಬ್ಬಂದಿ ಬಿಗಿ ಬಂದೋಬಸ್ತ್ ಕೈಗೊಂಡಿದ್ದರು.