ಕಣಿವೆ, ಅ. 12: ಕಾಫಿ ಗಿಡಗಳನ್ನು ನೆಟ್ಟು ಆ ಗಿಡಗಳನ್ನು ಮಕ್ಕಳಂತೆ ಆರೈಕೆ ಮಾಡಿ, ಆ ಕಾಫಿ ಗಿಡಗಳಿಗೆ ಪೂರಕವಾಗುವ ನೆರಳು ಗಿಡಗಳನ್ನು ನೆಟ್ಟು ಬೆಳೆಸಿದ ನಂತರದ ಮೂರ್ನಾಲ್ಕು ವರ್ಷಗಳಲ್ಲಿ ಕಾಫಿಯಿಂದ ಗಳಿಸುವ ಆದಾಯ ಕ್ಕಿಂತ ಒಮ್ಮೆ ನೆಟ್ಟು ಬೆಳೆಸುವ ಸೀಬೆ ಗಿಡ ಅಥವಾ ಪೇರಲ ಗಿಡಗಳೇ ಹೆಚ್ಚು ಲಾಭಕಾರಿ ಎನ್ನುತ್ತಿದ್ದಾರೆ ಅರೆಯೂರು ಕೃಷಿಕರು.

ಕಾಫಿ ತೋಟದ ಕೆಲಸಗಳಿಗೆ ಕೂಲಿ ಕಾರ್ಮಿಕರ ಅಭಾವ ಇರುವ ಇಂದಿನ ಪರಿಸ್ಥಿತಿಯಲ್ಲಿ ದೂರದ ಊರುಗಳಿಂದ ಕಾರ್ಮಿಕರನ್ನು ಕರೆತಂದು ಅವರಿಷ್ಟ ಬಂದಂತೆ ಕೆಲಸ ವನ್ನು ಮಾಡಿಸಿಕೊಂಡು ಗಳಿಸುವ ಆದಾಯ ಅಷ್ಟಕ್ಕೇ ಐತಿ ಬಿಡಿ ಅಂತಾರೆ ಕಾಫಿ ತೋಟಗಳ ಬಹಳಷ್ಟು ಬೆಳೆಗಾರರು. ಏಕೆಂದರೆ ವರ್ಷವಿಡೀ ಕಷ್ಟಪಟ್ಟು ಏನೆಲ್ಲಾ ಗೋಳಿಟ್ಟು ಬೆಳೆದ ಕಾಫಿಯಿಂದ ಸಿಗುವ ಆದಾಯ ಕ್ಕಿಂತಲೂ ಹೆಚ್ಚಿನದಾಗಿ ಒಂದೇ ಬಾರಿ ನೆಟ್ಟು ಬೆಳೆಸಿದ ಸೀಬೆ ಗಿಡಗಳು ಆರ್ಥಿಕ ವಾಗಿ ನಮ್ಮನ್ನು ಸಂಪನ್ನವಾಗಿಸುತ್ತವೆ ಎಂಬುದು ಅರೆಯೂರು ಗ್ರಾಮದ ಕೃಷಿಕರ ಅಭಿಮತ.

ಒಮ್ಮೆ ನೆಟ್ಟ ಸೀಬೆ ಗಿಡ ಒಂದು ವರ್ಷದ ಅವಧಿಯಲ್ಲಿ ಫಲ ಕೊಡುತ್ತದೆ. ಆರಂಭದ ಒಂದೆರಡು ವರ್ಷಗಳಲ್ಲಿ ಫಸಲು ಕಡಿಮೆ ಯಾದರೂ ಕೂಡ ಗಿಡಗಳು ಬಲಿಷ್ಠವಾಗಿ ಬೆಳೆದಾಗ ಹೆಚ್ಚಿನ ಫಸಲು ಕೊಡುತ್ತವೆ ಎನ್ನುತ್ತಾರೆ ಸೀಬೆ ಕೃಷಿಕ ಅರೆಯೂರು ಗ್ರಾಮದ ಪುಟ್ಟರಾಜು.

ಎರಡು ಎಕರೆ ಜಾಗದಲ್ಲಿ ಕಳೆದ ನಲವತ್ತು ವರ್ಷಗಳ ಹಿಂದೆ ಸೀಬೆ ಗಿಡ ನೆಟ್ಟಿದ್ದೆ. ಇಂದು ಅವುಗಳು ಮರಗಳಾಗಿವೆ. ಈಗ ಒಂದು ಸೀಬೆ ಗಿಡದಲ್ಲಿ ಗರಿಷ್ಠ ನೂರು ಕೆಜಿ ಯಷ್ಟು ಸೀಬೆ ಫಸಲು ಬಿಡುತ್ತದೆ. ನಾನು ಕಳೆದ ಹಲವಾರು ವರ್ಷಗಳಿಂದ ಕೇರಳದ ವ್ಯಾಪಾರಿಗಳಿಗೆ ಹುಂಡಿ ಹುಂಡಿ ಯಾಗೇ ಮಾರಾಟ ಮಾಡುತ್ತಿದ್ದೇನೆ. ನನಗೆ ಎರಡು ಎಕರೆ ಸೀಬೆ ತೋಟದಿಂದ ವಾರ್ಷಿಕ ಎರಡರಿಂದ ಎರಡೂವರೆ ಲಕ್ಷ ರೂ. ಆದಾಯ ಬರುತ್ತದೆ. ಜೊತೆಗೆ ಇದೇ ಸೀಬೆ ತೋಟದೊಳಗೆ ನಾನು ಹಸುಗಳು ಹಾಗೂ ಹಂದಿಗಳನ್ನು ಸಾಕಿದ್ದು ಅವುಗಳು ಹುಲುಸಾಗಿ ಹುಲ್ಲು ಮೇಯುತ್ತವೆ. ಹೀಗಾಗಿ ಹೈನು ಗಾರಿಕೆಗೂ ಅನುಕೂಲವಾಗುತ್ತಿದೆ ಎಂದು ಕೃಷಿಕ ಪುಟ್ಟರಾಜು ವಿವರಿಸುತ್ತಾರೆ. ನಮ್ಮ ಪ್ರದೇಶದಲ್ಲಿ ಕಾಫಿಗೆ ಪರಿಸರ ಅಷ್ಟು ಸೂಕ್ತವಲ್ಲ. ಬೋರಲು ರೋಗ ಹೆಚ್ಚಾಗಿ ಕಾಡುತ್ತದೆ. ಜೊತೆಗೆ ಕಾಫಿ ತೋಟಕ್ಕೆ ಕಾಲ ಕಾಲಕ್ಕೆ ನೀರು ಹಾಯಿಸಬೇಕು. ಕೂಲಿ ಕಾರ್ಮಿಕರನ್ನು ಕರೆ ತಂದು ಕೆಲಸ ಮಾಡಿಸಬೇಕು. ಔಷಧಿ ಸಿಂಪಡಿಸ ಬೇಕು. ಕಾಫಿ ಹಣ್ಣು ಕಟಾವು ಮಾಡಿ ಅವುಗಳನ್ನು ಒಣಗಿಸಿ ಮಾರಾಟ ಮಾಡಿ ವ್ಯಯಿಸಿದ ಹಣ ಗಳಿಸುವಲ್ಲಿ ಸಾಕು ಸಾಕಾಗಿ ಹೋಗುತ್ತದೆ. ಆದರೆ, ಸೀಬೆ ತೋಟದಲ್ಲಿ ಹಾಗಲ್ಲ. ಒಮ್ಮೆ ಗಿಡ ನೆಟ್ಟು ಎರಡರಿಂದ ಮೂರು ವರ್ಷ ಆರೈಕೆ ಮಾಡಿದರೆ ಸಾಕು. ನಾವಿರುವ ತನಕವೂ ಅವುಗಳು ನಮಗೆ ಆದಾಯವನ್ನು ತಂದು ಕೊಡುವ ಕಾಮಧೇನು ಆಗುತ್ತದೆ. ನಾನು ನಲವತ್ತು ವರ್ಷಗಳ ಹಿಂದೆ ಸೋಮವಾರಪೇಟೆ ಪಟ್ಟಣಕ್ಕೆ ಬೆಳೆದ ಸೀಬೆಯನ್ನು ಹೊತ್ತು ಸಾಗಿ ಪೈಸೆ ಪೈಸೆಗೆ ಸೀಬೆ ಹಣ್ಣು ಮಾರಾಟ ಮಾಡುತ್ತಿದ್ದೆ. ಆವಾಗ ಎರಡು ಪೈಸೆ, ಮೂರು ಪೈಸೆ. ಐದು ಪೈಸೆ ಇವತ್ತಿನ ಐವತ್ತು ರೂಗೆ ಸಮ. ಆದರೆ ಇವತ್ತು ಪರಿಸ್ಥಿತಿ ಹಾಗಿಲ್ಲ ನೋಡಿ. ನಮ್ಮ ಹತ್ತಿರವೇ ವ್ಯಾಪಾರಿಗಳು ಬಂದು ಖರೀದಿಸಿ ಕೊಂಡೊಯ್ಯುತ್ತಾರೆ ನೋಡಿ.

ಈ ಬಾರಿ ಶಾಲಾ-ಕಾಲೇಜುಗಳು ಮುಚ್ಚಿದ ಪರಿಣಾಮ ವಿದ್ಯಾರ್ಥಿಗಳ ಸಂಚಾರವಿಲ್ಲದೆ ಪೇಟೆ ನಗರಗಳಲ್ಲಿ ಸೀಬೆ ಹಣ್ಣಿನ ವ್ಯಾಪಾರ ಕಡಿಮೆ ಆಗಿದೆ. ಆದರೆ ಕೇರಳದ ವ್ಯಾಪಾರಿಗಳು ಇದನ್ನು ಫ್ಯಾಕ್ಟರಿ ಗಳಿಗೆ ಸಾಗಿಸುತ್ತಾರೆ ಎನ್ನುತ್ತಾರೆ ಪುಟ್ಟರಾಜು.

ಸೇಬುಗಿಂತ ಹೆಚ್ಚು ಆರೋಗ್ಯ

ಬಡವರ ಬಾದಾಮಿಯಾಗಿರುವ ಈ ಸೀಬೆ ಮನುಷ್ಯನ ಆರೋಗ್ಯಕ್ಕೆ ಅತ್ಯಂತ ಹೆಚ್ಚು ಪೌಷ್ಟಿಕಾಂಶಗಳನ್ನು ಪೂರೈಸುವ ಸಂಜೀವಿನಿ. ಸೇಬಿನ ಹಣ್ಣಿಗಿಂತಲೂ ಹೆಚ್ಚು ಉಪಯುಕ್ತ ವಾಗಿದೆ. ಸೇಬಿಗೆ ಹೆಚ್ಚು ರಾಸಾಯನಿಕ ಸಿಂಪಡಿಸಲಾಗುತ್ತದೆ. ಆದರೆ ಸ್ಥಳೀಯವಾಗಿ ಬೆಳೆವ ಈ ಸೀಬೆ ಸ್ವಾಭಾವಿಕವಾಗಿ ಬೆಳೆಯುವಂತದ್ದು. ಈ ಸೀಬೆ ಹಣ್ಣನ್ನು ನಿತ್ಯವೂ ಒಂದೊಂದು ತಿಂದರೆ ಮರೆವಿನ ಕಾಯಿಲೆ ದೂರ. ಅರ್ಥರೈಟಿಸ್ ದೂರ. ಕಣ್ಣಿನ ಪೆÇರೆಗೂ ರಾಮಬಾಣ. ಮನುಷ್ಯನ ದೇಹದಲ್ಲಿನ ಕೊಬ್ಬು ನಿವಾರಿಸಿ ಶ್ವಾಸಕೋಶದ ರೋಗಗಳನ್ನು ದೂರ ಮಾಡುತ್ತದೆ. ಈ ಹಣ್ಣಿನಲ್ಲಿ ಬೆಟಾ ಕೆರಾಟಿನ್, ಪೆÇಟ್ಯಾಷಿಯಂ ಹಾಗೂ ಅಧಿಕ ನಾರಿನಂಶವಿರುತ್ತದೆ. ನೆನಪಿನ ಶಕ್ತಿ ಹೆಚ್ಚಳಕ್ಕೂ ಈ ಸೀಬೆ ಅಥವಾ ಪೇರಲ ಹಣ್ಣು ಪೂರಕ ಎಂದು ವೈದ್ಯಕೀಯ ಸಂಶೋಧನೆಗಳು ದೃಢಪಡಿಸಿವೆ.

ಒಟ್ಟಾರೆ ಹೆಚ್ಚು ಪ್ರಮಾಣದಲ್ಲಿ ಕೃಷಿ ಭೂಮಿ ಹೊಂದಿರುವ ಕೃಷಿಕರು ಕಡಿಮೆ ಖರ್ಚಿನಲ್ಲಿ ಹೆಚ್ಚಿನ ಮತ್ತು ಅನೇಕ ವರ್ಷಗಳವರೆಗೂ ಆದಾಯವನ್ನು ತರಬಲ್ಲ ಈ ಸೀಬೆ ಹಣ್ಣು ಕೃಷಿಗೆ ಇನ್ನಷ್ಟು ತೊಡಗಿಸಿ ಕೊಳ್ಳುವ ಮೂಲಕ ಆರ್ಥಿಕವಾಗಿ ಸ್ವಾವಲಂಬನೆ ಸಾಧಿಸಬಹುದಾಗಿದೆ. ಕೂಡಿಗೆಯಿಂದ ಏಲಕ್ಕನೂರು ಹೊಸಳ್ಳಿ ಮಾರ್ಗವಾಗಿ ಸೋಮವಾರಪೇಟೆಗೆ ತೆರಳುವ ರಸ್ತೆಯಲ್ಲಿ ಸಿಗುವ ಈ ಅರೆಯೂರು ಗ್ರಾಮದಲ್ಲಿ ಹತ್ತಕ್ಕು ಹೆಚ್ಚು ಕೃಷಿಕರು ಸೀಬೆ ಕೃಷಿ ಮಾಡಿರುವುದರಿಂದ ರಸ್ತೆಯ ಇಕ್ಕೆಲಗಳಲ್ಲಿ ಕಾಫಿ ತೋಟ ಕ್ಕಿಂತ ಸೀಬೆ ತೋಟವೇ ಹೆಚ್ಚಾಗಿ ಕಾಣಸಿಗುತ್ತದೆ. ಜೊತೆಗೆ ಹಣ್ಣು ಕಟಾವು ಮಾಡುವ ಸಂದರ್ಭ ಈ ಮಾರ್ಗದಲ್ಲಿ ತೆರಳಿ ದರಂತೂ ಸೀಬೆಯ ಹಣ್ಣಿನ ಸುವಾಸಿತ ಪರಿಮಳ ಮೂಗಿಗೆ ರಾಚುತ್ತದೆ.

- ಕೆ.ಎಸ್. ಮೂರ್ತಿ.