2 ವರ್ಷದ ಬಳಿಕ ಮರುಜೀವ

ಸೋಮವಾರಪೇಟೆ, ಅ. 10: ಪಟ್ಟಣ ಪಂಚಾಯಿತಿಯಾಗಿ ರೂಪುಗೊಂಡ ನಂತರದ ಬಹುತೇಕ ಅವಧಿಯಲ್ಲಿ ಭಾರತೀಯ ಜನತಾ ಪಾರ್ಟಿಯ ಆಡಳಿತವನ್ನೇ ಕಂಡಿರುವ ಸೋಮವಾರಪೇಟೆ ಪಟ್ಟಣ ಪಂಚಾಯಿತಿಯಲ್ಲಿ, ಈಗಿನ ಮೀಸಲಾತಿಯಿಂದ ಮತ್ತೆ ಬಿಜೆಪಿ ಪಾರುಪತ್ಯ ಮುಂದುವರೆಯುವಂತೆ ಕಾಣುತ್ತಿದೆ.

11 ಸದಸ್ಯ ಬಲದ ಪಟ್ಟಣ ಪಂಚಾಯಿತಿಯಲ್ಲಿ ಬಿಜೆಪಿ ಕೇವಲ 3 ಸ್ಥಾನಗಳಲ್ಲಿ ಜಯಗಳಿಸಿದ್ದರೂ ಈಗಿನ ಮೀಸಲಾತಿ ಬಿಜೆಪಿಯ ಪರ ಬಂದಿರುವದರಿಂದ ರಾಜಕೀಯ ಚಟುವಟಿಕೆ ಗರಿಗೆದರಲಾರಂಭಿಸಿದೆ.

ಸೋಮವಾರಪೇಟೆ ಪಟ್ಟಣ ಪಂಚಾಯಿತಿ ಅಧ್ಯಕ್ಷ ಸ್ಥಾನ ಪರಿಶಿಷ್ಟ ಜಾತಿ ಹಾಗೂ ಉಪಾಧ್ಯಕ್ಷ ಸ್ಥಾನ ಹಿಂದುಳಿದ ವರ್ಗ (ಅ) ಕ್ಕೆ ಮೀಸಲಾತಿ ಬಂದಿದ್ದು, ಅಧ್ಯಕ್ಷ ಸ್ಥಾನಕ್ಕೆ ವಾರ್ಡ್ 2 ರ ಪಿ.ಕೆ. ಚಂದ್ರು ಹಾಗೂ ವಾರ್ಡ್ 3 ರ ನಳಿನಿ ಗಣೇಶ್ ಅರ್ಹರಾಗಿದ್ದಾರೆ. ಈರ್ವರೂ ಸಹ ಬಿಜೆಪಿಯಿಂದಲೇ ಜಯಗಳಿಸಿದವರಾಗಿದ್ದು, ಈರ್ವರ ನಡುವೆ ಸ್ಪರ್ಧೆ ಏರ್ಪಟ್ಟಿದೆ.

ನಳಿನಿ ಗಣೇಶ್ ಈ ಹಿಂದೆ ಪಂಚಾಯಿತಿ ಅಧ್ಯಕ್ಷೆಯಾಗಿ ಕಾರ್ಯನಿರ್ವಹಿಸಿದ್ದು, ಪಿ.ಕೆ. ಚಂದ್ರು ಇದೇ ಮೊದಲ ಬಾರಿಗೆ ಚುನಾವಣೆ ಎದುರಿಸಿ ಗೆಲುವು ಸಾಧಿಸಿದ್ದಾರೆ. ಚಂದ್ರು ಹಾಗೂ ನಳಿನಿ ಗಣೇಶ್ ಶಾಸಕರಿಗೂ ಆಪ್ತರಾಗಿದ್ದಾರೆ. ಈ ಹಿನ್ನೆಲೆ ಈರ್ವರ ನಡುವೆ ಅಧ್ಯಕ್ಷರಾಗುವವರು ಯಾರು? ಎಂಬ ಪ್ರಶ್ನೆ ಎದ್ದಿದೆ.

ನಳಿನಿ ಗಣೇಶ್ ಅವರು ಈಗಾಗಲೇ ಅಧ್ಯಕ್ಷೆಯಾಗಿ ಕೆಲಸ ಮಾಡಿದ್ದಾರೆ. ಈ ಹಿನ್ನೆಲೆ ಯುವಕರು ಹಾಗೂ ಸಮಾಜದಲ್ಲಿ ಉತ್ತಮ ಒಡನಾಟ ಹೊಂದಿರುವ ಪಿ.ಕೆ. ಚಂದ್ರು ಅವರಿಗೆ ಅವಕಾಶ ಒದಗಿಸಬೇಕು. ಆ ಮೂಲಕ ಮೊಗೇರ ಸಮುದಾಯಕ್ಕೂ ಪ್ರಾತಿನಿಧ್ಯ ನೀಡಬೇಕೆಂದು ಕೆಲವರು ಶಾಸಕರ ಮನವೊಲಿಸುವ ಯತ್ನ ನಡೆಸುತ್ತಿದ್ದಾರೆ.

ಅನುಭವಿ ಹಾಗೂ ಹಿರಿಯರಾಗಿರುವ ನಳಿನಿ ಗಣೇಶ್ ಅವರು ಪಕ್ಷದಲ್ಲೂ ಹಲವಾರು ವರ್ಷ ಸೇವೆ ಮಾಡಿದ್ದಾರೆ. ಅಧ್ಯಕ್ಷರಾಗಿಯೂ ಅನುಭವ ಇದೆ. ಈ ಹಿನ್ನೆಲೆ ನಳಿನಿ ಅವರನ್ನು ಅಧ್ಯಕ್ಷರನ್ನಾಗಿ ಮಾಡಬೇಕೆಂದು ಅವರ ಆಪ್ತರು ಶಾಸಕರ ಗಮನ ಸೆಳೆಯುತ್ತಿದ್ದಾರೆ.

ಉಪಾಧ್ಯಕ್ಷ ಸ್ಥಾನ ಹಿಂದುಳಿದ ವರ್ಗ (ಅ)ಕ್ಕೆ ನಿಗದಿಯಾಗಿದ್ದು, ಕಾಂಗ್ರೆಸ್‍ನ ಬಿ.ಸಿ. ವೆಂಕಟೇಶ್, ಬಿ.ಸಂಜೀವ, ಜೆಡಿಎಸ್‍ನ ನಾಗರತ್ನ, ಬಿಜೆಪಿಯ ಬಿ.ಆರ್. ಮಹೇಶ್, ಪಕ್ಷೇತರರಾಗಿರುವ ಶುಭಕರ್ ಅವರುಗಳು ರೇಸ್‍ನಲ್ಲಿದ್ದಾರೆ.

ಮರುಜೀವ: ಕಳೆದ 2018ರ ಅಕ್ಟೋಬರ್ 29 ರಂದು ಸೋಮವಾರಪೇಟೆ ಪಟ್ಟಣ ಪಂಚಾಯಿತಿಗೆ ಚುನಾವಣೆ ನಡೆದಿದ್ದು, ಅಕ್ಟೋಬರ್ 31 ರಂದು ಫಲಿತಾಂಶ ಹೊರಬಿದ್ದಿತ್ತು. ಇನ್ನು 19 ದಿನಗಳು ಕಳೆದರೆ ಚುನಾವಣೆ ನಡೆದು ಬರೋಬ್ಬರಿ 2 ವರ್ಷ ಪೂರ್ಣಗೊಳ್ಳುತ್ತದೆ. ಇಂತಹ ಸನ್ನಿವೇಶದಲ್ಲಿ ಮೀಸಲಾತಿ ಪ್ರಕಟಗೊಂಡಿದೆ.

ಬಿಜೆಪಿ ಭದ್ರಕೋಟೆ: ಹಿಂದೆ ಪುರಸಭೆಯಾಗಿದ್ದ ಸ್ಥಳೀಯಾಡಳಿತ ನಂತರ ಮಂಡಲ ಪಂಚಾಯಿತಿ, ಆ ನಂತರ ಪರಿವರ್ತಿತ ಮಂಡಲ ಪಂಚಾಯಿತಿಯಾಗಿ 1996 ರಲ್ಲಿ ಪ್ರಥಮವಾಗಿ ಪಟ್ಟಣ ಪಂಚಾಯ್ತಿ ಅಸ್ತಿತ್ವಕ್ಕೆ ಬಂತು. 25.7.1996 ರಂದು ಪಟ್ಟಣ ಪಂಚಾಯಿತಿಯ ಪ್ರಥಮ ಆಡಳಿತ ಚುಕ್ಕಾಣಿ ಹಿಡಿದ ಬಿಜೆಪಿ ಕಳೆದ 20 ವರ್ಷಗಳಿಂದ ಆಡಳಿತ ನಡೆಸುತ್ತಾ ಪಂಚಾಯಿತಿಯನ್ನು ಬಿ.ಜೆ.ಪಿ.ಯ ಭದ್ರಕೋಟೆ ಮಾಡಿಕೊಂಡಿತ್ತು. ಬಹುಮತಕ್ಕೆ ಒಂದೆರಡು ಸ್ಥಾನಗಳ ಕೊರತೆ ಇದ್ದಾಗಲೂ ರಾಜಕೀಯ ತಂತ್ರಗಾರಿಕೆ ನಡೆಸಿ ಅಧಿಕಾರ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿತ್ತು.

- ವಿಜಯ್ ಹಾನಗಲ್‍ಕುಶಾಲನಗರ

ಕುಶಾಲನಗರ, ಅ. 10: ಸ್ಥಳೀಯ ಆಡಳಿತಗಳಿಗೆ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಗಳಿಗೆ ಮೀಸಲಾತಿಯನ್ನು ಸರಕಾರ ಘೋಷಿಸಿದ್ದು ಕುಶಾಲನಗರ ಪಟ್ಟಣ ಪಂಚಾಯಿತಿ ಅಧ್ಯಕ್ಷ ಸ್ಥಾನಕ್ಕೆ ಪರಿಶಿಷ್ಟ ಜಾತಿ ಮತ್ತು ಉಪಾಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ ಮೀಸಲಿರಿಸಲಾಗಿದೆ. ಇದೀಗ ಕಳೆದ ಎರಡು ವರ್ಷಗಳಿಂದ ಅಧ್ಯಕ್ಷ ಸ್ಥಾನಕ್ಕೆ ಏರುವ ಕನಸು ಹೊತ್ತಿದ್ದ ಬಹುತೇಕರ ಕನಸು ಭಗ್ನಗೊಂಡಂತಾಗಿದೆ. ಕುಶಾಲನಗರ ಪಟ್ಟಣ ಪಂಚಾಯಿತಿಗೆ 2018 ಅಕ್ಟೋಬರ್‍ನಲ್ಲಿ ಚುನಾವಣೆ ನಡೆದಿದ್ದರೂ ಅಧಿಕಾರ ಹಸ್ತಾಂತರಕ್ಕೆ ಕಾನೂನಿನ ತೊಡಕು ಎದುರಾಗಿತ್ತು.

ಈ ನಡುವೆ ಅಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ ಮೀಸಲಾದ ಹಿನ್ನೆಲೆ ಬಹುತೇಕ ಮಂದಿ ಅಧ್ಯಕ್ಷ ಗಾದಿ ಮೇಲೆ ಕಣ್ಣಿಡುವುದರೊಂದಿಗೆ ಬಿರುಸಿನ ಚಟುವಟಿಕೆ ನಡೆದು ನಂತರದಲ್ಲಿ ಕೊರೊನಾ ಎಲ್ಲಾ ಚಟುವಟಿಕೆಗಳಿಗೆ ಅಡ್ಡಿಯುಂಟು ಮಾಡಿತ್ತು.

ಕುಶಾಲನಗರ ಪಟ್ಟಣ ಪಂಚಾಯಿತಿಯಲ್ಲಿ ಒಟ್ಟು 16 ಪ್ರತಿನಿಧಿಗಳು ಆಡಳಿತ ಮಂಡಳಿಗೆ ಚುನಾಯಿತರಾಗಿದ್ದು ಯಾವುದೇ ಪಕ್ಷಗಳು ಬಹುಮತ ಪಡೆಯುವಲ್ಲಿ ವಿಫಲಗೊಂಡಿವೆ.

ಒಟ್ಟು 16 ಸ್ಥಾನಗಳಲ್ಲಿ 6 ಬಿಜೆಪಿ, 6 ಕಾಂಗ್ರೆಸ್, ಜೆಡಿಎಸ್ 4 ಸ್ಥಾನಗಳಿಗೆ ತೃಪ್ತಿ ಪಟ್ಟಿತ್ತು. ಈ ಬಾರಿಯ ಚುನಾಯಿತ ಪ್ರತಿನಿಧಿಗಳಲ್ಲಿ ಬೆರಳೆಣಿಕೆಯಷ್ಟು ಮಾತ್ರ ಪ್ರತಿನಿಧಿಗಳು ಮರು ಆಯ್ಕೆಗೊಂಡಿದ್ದರೆ ಹೆಚ್ಚಿನವರು ಪ್ರಥಮ ಬಾರಿಗೆ ಪಂಚಾಯ್ತಿ ಚುನಾವಣೆಯಲ್ಲಿ ಗೆಲುವು ಸಾಧಿಸಿದವರಾಗಿದ್ದಾರೆ. ಇದರಲ್ಲಿಯೂ 7 ಮಂದಿ ಮಹಿಳೆಯರೇ ಜನಪ್ರತಿನಿಧಿಗಳಾಗಿದ್ದಾರೆ.

ಆಡಳಿತ ಮಂಡಳಿಯಲ್ಲಿ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಯಾವುದೇ ಪಕ್ಷದಲ್ಲಿ ಬಹುಮತ ಸಾಬೀತುಪಡಿಸುವ ಬಲದ ಕೊರತೆ ಕೂಡ ಕಂಡುಬಂದಿದ್ದು ಪರಸ್ಪರ ಹೊಂದಾಣಿಕೆ ಮೂಲಕ ಅಧ್ಯಕ್ಷ, ಉಪಾಧ್ಯಕ್ಷ ಪದವಿಯನ್ನು ಹಂಚಿಕೊಳ್ಳುವ ಪರಿಸ್ಥಿತಿ ಸೃಷ್ಠಿಯಾಗಿತ್ತು. ಆದರೆ ಇದೀಗ ಅಧ್ಯಕ್ಷ ಸ್ಥಾನಕ್ಕೆ ಪರಿಶಿಷ್ಟ ಜಾತಿ ಮೀಸಲಾತಿ ದೊರೆತ ಹಿನ್ನೆಲೆ ಬಿಜೆಪಿಯ 5ನೇ ವಾರ್ಡ್‍ನ ಜನಪ್ರತಿನಿಧಿ ಜಯವರ್ಧನ್ (ಕೇಶವ್) ಹಾಗೂ 2ನೇ ವಾರ್ಡ್‍ನಲ್ಲಿ ಗೆಲುವು ಸಾಧಿಸಿರುವ ಕಾಂಗ್ರೆಸ್‍ನ ಪುಟ್ಟಲಕ್ಷ್ಮಿ ಅವರುಗಳಿಗೆ ಅಧ್ಯಕ್ಷ ಸ್ಥಾನದ ಅಭ್ಯರ್ಥಿಯಾಗುವ ಅರ್ಹತೆ ದೊರಕಿದ್ದು ಇದೀಗ 6 ಸ್ಥಾನ ಗಳಿಸಿರುವ ಬಿಜೆಪಿಗೆ ಓರ್ವ ಶಾಸಕ ಮತ್ತು ಎಂಪಿ ಮತಗಳೊಂದಿಗೆ 8 ಹಾಗೂ ಇತ್ತ ಕಾಂಗ್ರೆಸ್ ಮತ್ತು ಜೆಡಿಎಸ್ ಹೊಂದಾಣಿಕೆಯಾದಲ್ಲಿ ಒಟ್ಟು 10 ಮತಗಳು ಲಭ್ಯವಾಗಲಿವೆ.

ಉಪಾಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಾಗಿದ್ದು 7 ಮಂದಿ ಮಹಿಳೆಯರು ಈ ಗಾದಿಗೆ ಅರ್ಹತೆ ಪಡೆದಿದ್ದಾರೆ. ಹಿಂದೆ ಈ ಸ್ಥಾನ ಬಿಸಿಎಂ ವರ್ಗಕ್ಕೆ ಮೀಸಲಾಗಿತ್ತು. ಪಕ್ಷವಾರು ಮತಗಳ ಮೂಲಕ ಉಪಾಧ್ಯಕ್ಷ ಗಾದಿ ಏರುವ ಮಹಿಳೆ ಯಾರೂ ಎನ್ನುವುದೇ ಯಕ್ಷ ಪ್ರಶ್ನೆಯಾಗಿದೆ. ಈ ನಿಟ್ಟಿನಲ್ಲಿ ಬಿಜೆಪಿ ಸೇರಿದಂತೆ ಇತರ ಪಕ್ಷಗಳ ವೇದಿಕೆಯಲ್ಲಿ ಬಿರುಸಿನ ಚರ್ಚೆ ಪ್ರಾರಂಭಗೊಂಡಿವೆ.

ಬಿಜೆಪಿ 6 ಸ್ಥಾನ ಹೊಂದಿದ್ದು ಓರ್ವ ಶಾಸಕರು ಹಾಗೂ ಎಂಪಿ ಸೇರಿದಂತೆ 8 ಸಂಖ್ಯಾ ಬಲಕ್ಕೆ ಏರಿದರೂ ಬಹುಮತ ಗಳಿಸಲು ಇನ್ನೂ ಒಂದು ಮತದ ಅವಶ್ಯಕತೆ ಇದ್ದು ಸಮಾನ ಮನಸ್ಕ ಅಭ್ಯರ್ಥಿಗಳಿರುವ ಪಕ್ಷದೊಂದಿಗೆ ಹೊಂದಾಣಿಕೆ ನಡೆಸುವ ಯತ್ನವೂ ನಡೆಯುತ್ತಿರುವುದು ಗುಟ್ಟಾಗಿ ಉಳಿದಿಲ್ಲ. ಕುಶಾಲನಗರ ಪ.ಪಂ.ಯ ಅಧ್ಯಕ್ಷಗಾದಿಗೆ ಏರುವ ನಿಟ್ಟಿನಲ್ಲಿ ಮೂರು ಪಕ್ಷಗಳ ಪ್ರಮುಖರ ಹೊಂದಾಣಿಕೆ ಚಟುವಟಿಕೆ ಬಿರುಸಾಗಿ ನಡೆಯುತ್ತಿದೆ.

- ಎಂ.ಎನ್. ಚಂದ್ರಮೋಹನ್

ವೀರಾಜಪೇಟೆ

ವೀರಾಜಪೇಟೆ, ಅ. 10: ರಾಜ್ಯ ಸರಕಾರದಿಂದ ಪಟ್ಟಣ ಪಂಚಾಯಿತಿ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಗಳ ಪದವಿಗಳ ಮೀಸಲಾತಿ ನಿಗದಿ ಯಿಂದ ಪಟ್ಟಣ ಪಂಚಾಯಿತಿಯಲ್ಲಿ ಬಿ.ಜೆ.ಪಿ.ಗೆ ಅನಾಯಾಸವಾಗಿ ಅಧ್ಯಕ್ಷ ಸ್ಥಾನ ಲಭಿಸಿದೆ. ವೀರಾಜಪೇಟೆ ಪಟ್ಟಣ ಪಂಚಾಯಿತಿಯ ಅಧ್ಯಕ್ಷ ಸ್ಥಾನ ಪರಿಶಿಷ್ಟ ಜಾತಿಯ ಮಹಿಳೆಗೆ ಮೀಸಲಾಗಿರುವುದರಿಂದ ಬಿಜೆಪಿ ಪಕ್ಷದಿಂದ ಸ್ಪರ್ಧಿಸಿ ಗೆಲುವು ಸಾಧಿಸಿರುವ ಅಭ್ಯರ್ಥಿಯ ಪಾಲಾಗಲಿದೆ.

ಪಟ್ಟಣ ಪಂಚಾಯಿತಿಗೆ 2018ರ ಅಕ್ಟೋಬರ್‍ನಲ್ಲಿ ನಡೆದ ಚುನಾವಣೆಯಲ್ಲಿ 18 ಸ್ಥಾನಗಳ ಪೈಕಿ 8 ಸ್ಥಾನಗಳನ್ನು ಬಿಜೆಪಿ, 6 ಸ್ಥಾನಗಳನ್ನು ಕಾಂಗ್ರೆಸ್, ಒಂದು ಸ್ಥಾನ ಜೆಡಿಎಸ್ ಹಾಗೂ ಮೂರು ಸ್ಥಾನಗಳನ್ನು ಪಕ್ಷೇತರ ಅಭ್ಯರ್ಥಿಗಳು ಪಡೆದುಕೊಂಡಿದ್ದರು. ಯಾವ ಪಕ್ಷಕ್ಕೂ ಬಹುಮತವಿಲ್ಲದರಿಂದ ಅಧ್ಯಕ್ಷ ಸ್ಥಾನಕ್ಕಾಗಿ ಎರಡು ಪಕ್ಷಗಳು ಸ್ವತಂತ್ರ ಅಭ್ಯರ್ಥಿಗಳನ್ನು ಅವಲಂಭಿಸಬೇಕಾಗಿತ್ತು. ಎರಡು ಪಕ್ಷಗಳಿಗೂ ಅಧ್ಯಕ್ಷ ಸ್ಥಾನ ಪಡೆಯಲು ಅವಕಾಶವಿತ್ತು. ಈಗಿನ ಮೀಸಲಾತಿಯಿಂದಾಗಿ ಅಧ್ಯಕ್ಷ ಪದವಿ ಸ್ಥಾನ ನಿರಾಯಾಸವಾಗಿ ಬಿ.ಜೆ.ಪಿ.ಗೆ ದೊರೆತಿದೆ. ಈಗ ಕಾಂಗ್ರೆಸ್ ಪಕ್ಷ 6 ಸ್ಥಾನಗಳನ್ನು ಹೊಂದಿದ್ದು ಜೆಡಿಎಸ್ ಇತರ ಮೂರು ಮಂದಿ ಪಕ್ಷೇತರ ಅಭ್ಯರ್ಥಿಗಳು ಬೆಂಬಲ ಸೂಚಿಸಿ ಹತ್ತು ಸ್ಥಾನಗಳಾದರೂ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧೆ ಇಲ್ಲದ್ದರಿಂದ ಉಪಾಧ್ಯಕ್ಷ ಸ್ಥಾನಕ್ಕೆ ಹಾಗೂ ಕಾಂಗ್ರೆಸ್ ನಡುವೆ ಸ್ಪರ್ಧೆಗೆ ಅವಕಾಶವಾಗಿದೆ.

ಈಗಿನ ಸರಕಾರದ ಮೀಸಲಾತಿಯ ಪಟ್ಟಿಯಂತೆ ಹದಿನೇಳನೆಯ ವಾರ್ಡ್ ಸದಸ್ಯೆ ಶಿವಕೇರಿಯ ಹೆಚ್.ಎಂ. ಪೂರ್ಣಿಮಾ ಹಾಗೂ ನಾಲ್ಕನೇ ವಾರ್ಡ್‍ನ ಟಿ.ಆರ್. ಸುಶ್ಮಿತಾ ಇವರಿಬ್ಬರಲ್ಲಿ ಸ್ಪರ್ಧೆಗೆ ಅವಕಾಶವಿದೆ.

ಹೆಚ್.ಎಂ ಪೂರ್ಣಿಮ ಅವರನ್ನು “ಶಕ್ತಿ” ಸಂಪರ್ಕಿಸಿದಾಗ ಸರಕಾರದ ಮೀಸಲಾತಿಯ ಪ್ರಕಾರ ಅಭ್ಯರ್ಥಿಗಳನ್ನು ಆಯ್ಕೆ ಮಾಡುವುದು ಬಿಜೆಪಿ ವರಿಷ್ಠರ ಕೆಲಸವಾಗಿದೆ. ಪಕ್ಷ ತನ್ನನ್ನು ಆಯ್ಕೆ ಮಾಡಿದರೆ ನಿಸ್ವಾರ್ಥ ಸೇವೆ ಸಲ್ಲಿಸುವೆ ಎಂದು ತಿಳಿಸಿದರು. ಇದೇ ಅಧ್ಯಕ್ಷ ಸ್ಥಾನಕ್ಕೆ ಅರ್ಹತೆಯನ್ನು ಪಡೆದಿರುವ ಪಟ್ಟಣ ಪಂಚಾಯಿತಿಯ ನಾಲ್ಕನೇ ಬ್ಲಾಕ್‍ನಿಂದ ಸ್ಪರ್ಧಿಸಿ ಗೆಲುವು ಸಾಧಿಸಿರುವ ಟಿ.ಆರ್. ಸುಶ್ಮಿತಾಳನ್ನು ಸಂಪರ್ಕಿಸಿದಾಗ ಅಧ್ಯಕ್ಷ ಸ್ಥಾನ ಲಭಿಸಿದರೆ ನಿಸ್ವಾರ್ಥವಾಗಿ ಸೇವೆ ಸಲ್ಲಿಸುವುದಾಗಿ ತಿಳಿಸಿದರು. ಮುಂದಿನ 7 ದಿನಗಳ ಅವಧಿಯಲ್ಲಿ ಚುನಾವಣೆ ನಡೆಯಲಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. - ಡಿ.ಎಂ. ರಾಜ್‍ಕುಮಾರ್.