ಇಡೀ ದೇಶಮಾತ್ರವಲ್ಲ ಜಾಗತಿಕ ಮಟ್ಟದಲ್ಲಿ ಅಲ್ಲೋಲ-ಕಲ್ಲೋಲವನ್ನು ಸೃಷ್ಟಿಸುವದರೊಂದಿಗೆ ಕೊರೊನಾ ಎಂಬ ಮಹಾಮಾರಿಯ ಅಟ್ಟಹಾಸ ಇನ್ನೂ ನಿಯಂತ್ರಣಕ್ಕೆ ಬಂದಿಲ್ಲ. ಇದು ಪ್ರಸ್ತುತದ ದಿನಗಳಲ್ಲಿ ದಿನೇ ದಿನೇ ತನ್ನ ಕದಂಬಬಾಹುವನ್ನು ಚಾಚುತ್ತಲೇ ಮುಂದುವರಿಯುತ್ತಿದೆ. ಕರ್ನಾಟಕ ರಾಜ್ಯವೂ ಕೊರೊನಾ ಪೀಡಿತರ ರೋಗಿಗಳ ಸಂಖ್ಯೆ ಹೆಚ್ಚುತ್ತಿರುವ ರಾಜ್ಯಗಳಲ್ಲಿ ಒಂದಾಗಿದೆ. ಇದರೊಂದಿಗೆ ನಮ್ಮ ಕೊಡಗು ಜಿಲ್ಲೆಯೂ ಹೊರತಾಗಿಲ್ಲ. ಇಲ್ಲಿಯೂ ದಿನಂಪ್ರತಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಲೇ ಇರುವದು ಗಂಭೀರವಾದ ಅಂಶವಾಗಿದೆ. ಆದರೆ ಹತ್ತು-ಹಲವು ಗೊಂದಲಭರಿತವಾದ ಅನುಭವಗಳು, ಜನತೆಯಲ್ಲಿ ಕೇಳಿ ಬರುತ್ತಿರುವ ಹೊಸ-ಹೊಸ ಚರ್ಚೆ ವಿಶ್ಲೇಷಣೆಗಳಿಂದಾಗಿ ಕೊರೊನಾ ಬಗ್ಗೆ ಆರಂಭಿಕ ದಿನಗಳಲ್ಲಿ ಇದ್ದಂತಹ ಭಯ-ಭೀತಿಯ ಸನ್ನಿವೇಶ ಈಗ ಇದ್ದಂತಿಲ್ಲ. ಮಾರ್ಚ್ ತಿಂಗಳಿನಿಂದ ಜಿಲ್ಲೆಯಲ್ಲಿ ಕೊರೊನಾ ವಕ್ಕರಿಸಿತ್ತು, ಆ ಸಂದರ್ಭದಲ್ಲಿ ಲಾಕ್‍ಡೌನ್... ನಿರ್ಬಂಧಕಾಜ್ಞೆ, ಅಂತರ-ರಾಜ್ಯ ಸಂಪರ್ಕ ಕಡಿತ, ಅಂತರ್ ಜಿಲ್ಲಾ ಸಂಪರ್ಕದಲ್ಲೂ ಕಡಿವಾಣ, ಎಲ್ಲಾ ಕಾರ್ಯಕ್ರಮಗಳ ರದ್ಧತಿ ಮತ್ತಿತರ ವಿಚಾರಗಳಿಂದ ಜನತೆ ತೀರಾಭೀತಿ ಎದುರಿಸಿದ್ದು, ಇಡೀ ಜಿಲ್ಲೆ ಸ್ತಬ್ಧಗೊಂಡಿತ್ತು. ಒಂದೆರೆಡು ತಿಂಗಳ ಬಳಿಕ ಬಹುತೇಕ ಎಲ್ಲಾ ನಿರ್ಬಂಧಗಳು ಸರಕಾರದ ಮೂಲಕ ಹಿಂಪಡೆಯಲ್ಪಟ್ಟಿದೆ. ಇದರೊಂದಿಗೆ ಎಲ್ಲಾ ಚಟುವಟಿಕೆಗಳೂ ಇದೀಗ ಸಹಜತೆಗೆ ಬಂದಿದ್ದು ಜನತೆ ಒಂದಷ್ಟು ಮಾತಿನಲ್ಲಿ ಕೊರೊನಾ ಕುರಿತಾಗಿ ಚರ್ಚಿಸುತ್ತಿದ್ದಾರೆಯೇ ಹೊರತು ಆರಂಭಿಕ ಭೀತಿಯಿಂದ ಮುಕ್ತರಾಗಿದ್ದಾರೆ.
ಇದೀಗ ಎಚ್ಚರಿಕೆ ಅನಿವಾರ್ಯ
ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಒಂದೆಡೆ ಅಂಕಿ ಅಂಶಗಳ ಪ್ರಕಾರ ಹೆಚ್ಚಾಗುತ್ತಲೇ ಇದೆ. ಇದರೊಂದಿಗೆ ಗುಣಮುಖರಾಗಿ ಮರಳುತ್ತಿರುವವರ ಸಂಖ್ಯೆಯೂ ಹೆಚ್ಚಿದ್ದು, ಇದು ಒಂದು ರೀತಿಯ ಆಶಾಭಾವನೆಯಾದÀರೂ ಜಿಲ್ಲೆಯಲ್ಲಿ ಜಿಲ್ಲಾಡಳಿತದ ಮಾಹಿತಿಯ ಪ್ರಕಾರ ಸಾವಿನ ಸಂಖ್ಯೆಯೂ ಹೆಚ್ಚುತ್ತಿರುವದು ಆತಂಕಕಾರಿಯಾಗಿದೆ. ಈ ತನಕ ಜಿಲ್ಲೆಯಲ್ಲಿ 50 ಸಾವುಗಳು ಸಂಭವಿಸಿರುವುದನ್ನು ಜಿಲ್ಲಾಡಳಿತ ಅಧಿಕೃತವಾಗಿ ಪ್ರಕಟಿಸಿದೆ. ಇದರೊಂದಿಗೆ ಜಿಲ್ಲೆಯಲ್ಲಿ ಇಲ್ಲಿಯವರೆಗೆ ಕೊರೊನಾ ಸೋಂಕು ಪ್ರಕರಣ 3458, ಆಗಿದ್ದರೆ ಗುಣಮುಖರಾಗಿರುವದು 2775 ಹಾಗೂ ಸಕ್ರಿಯ 633 ರಷಿದೆ.
ದಿನಂಪ್ರತಿ ಸೋಂಕು ಕಾಣಿಸಿಕೊಳ್ಳುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಲೇ ಇರುವದು ಗಂಭೀüರವಾದ ವಿಚಾರವಾಗಿದೆ. ಇದೀಗ ಮತ್ತೊಮ್ಮೆ ಮಾಸ್ಕ್ ಧರಿಸುವುದು ಕಡ್ಡಾಯದೊಂದಿಗೆ ಹೆಚ್ಚು ದಂಡ ವಿಧಿಸುತ್ತಿರುವುದು, ಪ್ರವಾಸಿಗರು, ಹೋಂಸ್ಟೇಗಳ ಬಗ್ಗೆ ನಿಗಾವಹಿಸಲು ಸೂಚನೆ, ಕೆಲವಾರು ಮಂದಿಯಿಂದ ಸೆಕ್ಷನ್ 144ರಂತೆ ನಿರ್ಬಂಧಕಾಜ್ಞೆ ಜಾರಿಗೆ ಕೇಳಿ ಬರುತ್ತಿರುವ ಆಗ್ರಹದಂತಹ ವಿಚಾರಗಳು ಮತ್ತೊಮ್ಮೆ ಜನತೆಯನ್ನು ಆತಂಕದ ಸ್ಥಿತಿಯತ್ತ ಮುಖಮಾಡುವಂತೆ ಮಾಡುತ್ತಿದೆ. ಏನೇ ಇದ್ದರೂ ಪ್ರಸ್ತುತ ಜನತೆ ಸ್ವಯಂ ಜಾಗೃತಿ ವಹಿಸುವದರೊಂದಿಗೆ ತಮ್ಮ-ತಮ್ಮ ದೈನಂದಿನ ಚಟುವಟಿಕೆಗಳನ್ನು ಕಾಳಜಿವಹಿಸಿ ಮಾಡುವ ಮೂಲಕ ಜಾಗೃತಗೊಳ್ಳಬೇಕಿದೆ ಎಂಬ ಅಭಿಪ್ರಾಯ ಹಲವರದ್ದಾಗಿದೆ.
-ಶಶಿ ಸೋಮಯ್ಯ