ಬೆಂಗಳೂರು, ಅ. 8: ರಾಜ್ಯದ ವಿವಿಧ ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ರಾಜ್ಯ ಸರಕಾರ ಕರ್ನಾಟಕ ವಿಶೇಷ ರಾಜ್ಯಪತ್ರದಲ್ಲಿ ಆದೇಶ ಬಿಡುಗಡೆಗೊಳಿಸಿದ್ದು, ಮಡಿಕೇರಿ ನಗರಸಭೆ ಅಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಹಾಗೂ ಉಪಾಧ್ಯಕ್ಷ ಸ್ಥಾನ ಬಿಸಿಎ ಮಹಿಳೆಗೆ ಮೀಸಲಾತಿ ನಿಗದಿಪಡಿಸಿ ಆದೇಶ ಹೊರಡಿಸಿದೆ.ಈ ಬಾರಿ ಎರಡೂ ಸ್ಥಾನಗಳು ಮಹಿಳಾ ಅಭ್ಯರ್ಥಿಗಳಿಗೆ ಮೀಸಲಾಗಿದೆ. ಆದರೆ, ನಗರಸಭೆ ವಾರ್ಡ್ ಮೀಸಲಾತಿ (ಮೊದಲ ಪುಟದಿಂದ) ಗೊಂದಲ ಇನ್ನು ಕೂಡ ನಿವಾರಣೆಯಾಗದೇ ಇದ್ದು, ಇನ್ನೂ ಕೂಡ ಸದಸ್ಯರುಗಳ ಚುನಾವಣೆ ಆಗಿಲ್ಲ. ಅದಕ್ಕೂ ಮುನ್ನ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಕ್ಕೆ ಅಭ್ಯರ್ಥಿಗಳ ಘೋಷಣೆಯಾಗಿದ್ದು, ಈ ಬಾರಿ ಮಹಿಳಾ ಅಭ್ಯರ್ಥಿ ಆಕಾಂಕ್ಷಿಗಳ ಸಂಖ್ಯೆ ಸಹಜವಾಗಿಯೇ ಹೆಚ್ಚಳವಾಗಲಿದೆ!
ಪಟ್ಟಣ ಪಂಚಾಯಿತಿಗಳಿಗೂ ಮೀಸಲಾತಿ ನಿಗದಿಯಾಗಿದ್ದು, ಸೋಮವಾರಪೇಟೆ ಪ.ಪಂ. ಅಧ್ಯಕ್ಷ ಸ್ಥಾನ ಪರಿಶಿಷ್ಟ ವರ್ಗ, ಉಪಾಧ್ಯಕ್ಷ ಸ್ಥಾನ ಬಿಸಿಎಗೆ ಮೀಸಲಾಗಿದೆ. ವೀರಾಜಪೇಟೆ ಪ.ಪಂ. ಅಧ್ಯಕ್ಷ ಸ್ಥಾನ ಪರಿಶಿಷ್ಟ ವರ್ಗ ಮಹಿಳೆ, ಉಪಾಧ್ಯಕ್ಷ ಸ್ಥಾನ ಸಾಮಾನ್ಯ ಅಭ್ಯರ್ಥಿಗೆ ಮೀಸಲಾಗಿದೆ. ಕುಶಾಲನಗರ ಪ.ಪಂ. ಅಧ್ಯಕ್ಷ ಸ್ಥಾನ ಪರಿಶಿಷ್ಟ ವರ್ಗಕ್ಕೆ, ಉಪಾಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳಿಗೆ ಮೀಸಲಾಗಿದೆ.