ಮಡಿಕೇರಿ, ಅ. 9: ಕೊಡಗು ಜಿಲ್ಲೆಯಲ್ಲಿ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಲ್ಲಿ ಅಲ್ಪಸಂಖ್ಯಾತರಿಗೆ ಯಾವುದೇ ಸೌಲಭ್ಯವಿಲ್ಲ. ಶಾದಿಭಾಗ್ಯ ಯೋಜನೆಗೆ ರೂ. 50 ಸಾವಿರ ಕೊಡುತ್ತಿದ್ದು, ಅದನ್ನು 25 ಸಾವಿರ ರೂ.ಗೆ ಇಳಿಸಿ ಹೊಸ ಅರ್ಜಿಯನ್ನು ಸ್ಥಗಿತಗೊಳಿಸಿರುತ್ತಾರೆ. ವಕ್ಫ್ ಬೋರ್ಡ್‍ನಿಂದ ಮಸೀದಿಯ ಧರ್ಮಗುರುಗಳಿಗೆ ಸುಮಾರು 6 ತಿಂಗಳಿನಿಂದ ಸಂಭಾವನೆ ಕೊಟ್ಟಿರುವುದಿಲ್ಲ. ಈಗಾಗಲೇ ಪ್ರಕೃತಿ ವಿಕೋಪ ಸ್ಥಳಗಳಲ್ಲಿ ಅಲ್ಪಸಂಖ್ಯಾತರೆ ಹೆಚ್ಚಿರುವ ಕೊಂಡಂಗೇರಿ, ಚೆರಿಯಪರಂಬು, ನೆಲ್ಲಿಹುದಿಕೇರಿ, ಕರಡಿಗೋಡು ಮತ್ತು ಇತರ ಸ್ಥಳಗಳಲ್ಲಿ ಇಲ್ಲಿಯವರೆಗೆ ಯಾವದೇ ಮನೆಗಳಾಗಲಿ, ಬಾಡಿಗೆಯಾಗಲಿ ಇತರ ಸೌಲಭ್ಯಗಳಾಗಲಿ ಒದಗಿಸಿರುವುದಿಲ್ಲ ಎಂದು ಜಿಲ್ಲಾ ಜೆಡಿಎಸ್ ಅಲ್ಪಸಂಖ್ಯಾತರ ಘಟಕ ಅಧ್ಯಕ್ಷ ಇಸಾಕ್ ಖಾನ್ ಆರೋಪಿಸಿದ್ದಾರೆ.

ಸರ್ಕಾರ ಭೂ ಪರಿವರ್ತನೆ ಹಾಗೂ ಮೂಲಭೂತ ಸೌಕರ್ಯಗಳನ್ನು ಒದಗಿಸುವಲ್ಲಿ ವಿಫಲವಾಗಿದೆ. ಶಾಲಾ ಮಕ್ಕಳಿಗೆ ವಿದ್ಯಾರ್ಥಿ ವೇತನ ಸಿಗುತ್ತಿಲ್ಲ. ಅಲ್ಪಸಂಖ್ಯಾತ ವಿಶೇಷಚೇತನರಿಗೆ ಮಾಸಾಶನ ಕೊಟ್ಟಿರುವುದಿಲ್ಲ. ಅಲ್ಪಸಂಖ್ಯಾತರನ್ನು ಸರ್ಕಾರ ಕಡೆಗಣಿಸಿರುವುದನ್ನು ಖಂಡಿಸುತ್ತೇವೆ. ಅಲ್ಪಸಂಖ್ಯಾತರಿಗಾಗುತ್ತಿರುವ ಅನ್ಯಾಯವನ್ನು ಒಂದು ತಿಂಗಳ ಒಳಗೆ ಸರಿಪಡಿಸಬೇಕೆಂದು ಅವರು ಪತ್ರಿಕಾ ಹೇಳಿಕೆಯಲ್ಲಿ ಒತ್ತಾಯಿಸಿದ್ದಾರೆ.