ಸಿದ್ದಾಪುರ, ಅ. 8: ಕಾಫಿ ತೋಟದ ಒಳಗಿದ್ದ ಬೀಟೆ ಮರವನ್ನು ಕಡಿದು ಕಳ್ಳತನ ಮಾಡಿರುವ ಘಟನೆ ಚೆಟ್ಟಳ್ಳಿ ಸಮೀಪದ ಕೂಡ್ಲೂರು ಚೆಟ್ಟಳ್ಳಿ ಗ್ರಾಮದಲ್ಲಿ ನಡೆದಿದೆ.
ವಾಲ್ನೂರು ಸಮೀಪದ ಕೂಡ್ಲೂರು ಚೆಟ್ಟಳ್ಳಿ ಗ್ರಾಮದ ಬಳ್ಳಿಕಲ್ಟಿ ಕಾಫಿ ತೋಟದ ಒಳಗಿದ್ದ ಬೀಟೆ ಮರವೊಂದನ್ನು ಅಕ್ರಮವಾಗಿ ಕಡಿದು ನಾಟಗಳನ್ನಾಗಿ ಪರಿವರ್ತಿಸಿ ಕಳ್ಳತನ ಮಾಡಿ ಸಾಗಾಟ ಮಾಡಲಾಗಿದೆ. ಈ ಬಗ್ಗೆ ತೋಟದ ಮಾಲೀಕರು ಕುಶಾಲನಗರ ವಲಯ ಅರಣ್ಯಾಧಿಕಾರಿಗಳಿಗೆ ದೂರು ನೀಡಿದ ಮೇರೆಗೆ ಕುಶಾಲನಗರ ಉಪವಲಯಾರಣ್ಯಾಧಿಕಾರಿ ಕೂಡಕಂಡಿ ಸುಬ್ರಾಯ ಸ್ಥಳ ಪರಿಶೀಲನೆ ನಡೆಸಿದರು. ಕಳ್ಳತನ ಆಗಿರುವ ಬೀಟೆ ಮರ 48 ಘನ ಅಡಿಗಳಷ್ಟಿದ್ದು, ಕಳ್ಳರು 10 ನಾಟಗಳನ್ನಾಗಿ ಪರಿವರ್ತಿಸಿದ್ದಾರೆ. ಕಳ್ಳತನ ಮಾಡಲು ಸಾಗಾಟಕ್ಕೆ ಇಟ್ಟಿದ್ದ ಮರಗಳ ನಾಟಗಳನ್ನು ಅರಣ್ಯ ಇಲಾಖಾ ಅಧಿಕಾರಿಗಳು ವಶಕ್ಕೆ ಪಡೆದುಕೊಂಡು ಕುಶಾಲನಗರ ಮರ ಸಂಗ್ರಹಾಲಯಕ್ಕೆ ಸ್ಥಳಾಂತರಗೊಳಿಸಿ ದ್ದಾರೆ. ಈ ಬಗ್ಗೆ ಅರಣ್ಯ ಇಲಾಖಾ ಅಧಿಕಾರಿಗಳು ಪ್ರಕರಣ ದಾಖಲಿಸಿ ಕೊಂಡು ಪರಾರಿಯಾಗಿರುವ ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.