(ವಿಶೇಷ ವರದಿ: ಹೆಚ್.ಕೆ. ಜಗದೀಶ್)

ಗೋಣಿಕೊಪ್ಪಲು, ಸೆ. 8: ಕೊರೊನಾ ಸಂದರ್ಭವನ್ನೇ ಗುರಿಯಾಗಿಸಿಕೊಂಡಿರುವ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಮಡಿಕೇರಿ,ಹುಣಸೂರು ಹಾಗೂ ಪಿರಿಯಾಪಟ್ಟಣ ಬಸ್ ಡಿಪೋ ವ್ಯವಸ್ಥಾಪಕರು ತಮಗೆ ಮನಬಂದಂತೆ ದಿನನಿತ್ಯ ಓಡಾಟ ನಡೆಸುವ ಬಸ್‍ನ ಮಾರ್ಗಗಳನ್ನು ಬದಲಾಯಿಸುತ್ತಾ, ತಮಗೆ ಬೇಕಾದ ಮಾರ್ಗಗಳಲ್ಲಿ ಬಸ್‍ಗಳನ್ನು ಬಿಡುತ್ತಿರುವ ಬಗ್ಗೆ ನಾಗರಿಕರಿಂದ ವ್ಯಾಪಕ ವಿರೋಧ ವ್ಯಕ್ತವಾಗಿದೆ.

ಬಸ್‍ನ ನಿಗಧಿತ ಸಮಯದಲ್ಲಿ ಕಾಯುವ ರೈತರು, ಪ್ರಯಾಣಿಕರು, ಕಚೇರಿಯ ಸಿಬ್ಬಂದಿಗಳು ಇದರಿಂದ ಸಂಕಷ್ಟಕ್ಕೀಡಾಗಿದ್ದು ತಮ್ಮ ಅಸಮಧಾನ ತೋಡಿಕೊಂಡಿದ್ದಾರೆ. ಕೋವಿಡ್-19 ಕಾರಣವೊಡ್ಡಿ ಅಧಿಕಾರಿಗಳು ನಿಗದಿತ ಸಮಯ, ಮಾರ್ಗದಲ್ಲಿ ಕಳುಹಿಸಬೇಕಾದ ಕೆಎಸ್‍ಆರ್‍ಟಿಸಿ ಬಸ್‍ಗಳನ್ನು ತಮಗೆ ಇಷ್ಟ ಬಂದಂತೆ ಮಾರ್ಗ ಬದಲಾಯಿಸಿದ್ದಾರೆ. ಬಸ್‍ಗಾಗಿ ಕಾಯುವ ಪ್ರಯಾಣಿಕರು ಇದರಿಂದ ಸೌಕರ್ಯವಿಲ್ಲದೆ ಸಿಕ್ಕಿದ ವಾಹನಗಳಲ್ಲಿ ತೆರಳುತ್ತಿದ್ದಾರೆ. ಸಮಯವಲ್ಲದ ಸಮಯದಲ್ಲಿ ಬಸ್‍ಗಳು ಆಗಮಿಸುತ್ತಿರುವುದರಿಂದ ಯಾವುದೇ ಪ್ರಯಾಣಿಕರು ಬಸ್‍ನಲ್ಲಿ ಪ್ರಯಾಣಿಸುತ್ತಿಲ್ಲ. ಇದರಿಂದ ಆ ಮಾರ್ಗದಲ್ಲಿ ಪ್ರಯಾಣಿಕರು ಲಭ್ಯವಿಲ್ಲವೆಂದು ಅಧಿಕಾರಿಗಳು ಮಾರ್ಗವನ್ನು ನಿಲ್ಲಿಸುತ್ತಿದ್ದಾರೆ. ಅಲ್ಲದೆ ಬಸ್ ಅನ್ನು ತಮಗಿಷ್ಟ ಬಂದ ಬೇರೆ ಮಾರ್ಗಗಳಲ್ಲಿ ಸಂಚರಿಸಲು ಅವಕಾಶ ಕಲ್ಪಿಸಿದ್ದಾರೆ. ನಿಗದಿತ ಮಾರ್ಗ ಹಾಗೂ ಸಮಯದಲ್ಲಿ ಬಸ್‍ನ ನಿರ್ವಹಕರು ಹಾಗೂ ಚಾಲಕರು ಡಿಪೋಗಳಿಗೆ ತೆರಳಿ ಬಸ್ ಕೇಳಿದರೂ ಅಧಿಕಾರಿಗಳು ಬಸ್‍ಗಳನ್ನು ನೀಡುವ ಬಗ್ಗೆ ಯಾವುದೇ ಕ್ರಮ ವಹಿಸುತ್ತಿಲ್ಲ. ಇದರಿಂದಾಗಿ ಡಿಪೋಗಳಲ್ಲಿ ಚಾಲಕರು ಹಾಗೂ ಕಂಡಕ್ಟರ್ ಸಮಯ ಕಳೆಯುತ್ತಿದ್ದಾರೆ.

ಪಿರಿಯಾಪಟ್ಟಣ ಭಾಗದ ಬಹುತೇಕ ರೈತರು ವಾಣಿಜ್ಯ ನಗರ ಗೋಣಿಕೊಪ್ಪಲುವಿಗೆ ಪ್ರತಿ ನಿತ್ಯ ಮುಂಜಾನೆ 6ಗಂಟೆ ಸುಮಾರಿಗೆ ನಗರಕ್ಕೆ ಆಗಮಿಸಿ ಪಿರಿಯಾಪಟ್ಟಣ ಭಾಗದಿಂದ ತಾವು ಬೆಳೆದ ಸೊಪ್ಪು, ಹೂ, ತರಕಾರಿಗಳನ್ನು ತಂದು ಮಾರಾಟ ಮಾಡುತ್ತಿದ್ದಾರೆ. ಆದರೆ ಇಷ್ಟು ಸಾಮಾಗ್ರಿಗಳು ಕೂಡ ಮುಂಜಾನೆ 5 ಗಂಟೆಗೆ ಹುಣಸೂರಿನಿಂದ ಹೊರಡುವ ಮಾರ್ಗ ಸಂಖ್ಯೆ 49ರ ಕೆ.ಎಸ್.ಆರ್.ಟಿ.ಸಿ. ಪಿರಿಯಾಪಟ್ಟಣ ಮಾರ್ಗವಾಗಿ ಗೋಣಿಕೊಪ್ಪಲುವಿಗೆ ಮುಂಜಾನೆ 6 ಗಂಟೆಗೆ ತಲುಪಲಿದೆ.

ಈ ಮಾರ್ಗದ ಬಸ್ ಅನ್ನೇ ನಂಬಿರುವ ರೈತರು ತಾವು ಬೆಳೆದಿರುವ ಸೊಪ್ಪು,ಹೂ, ತರಕಾರಿಗಳನ್ನು ರಸ್ತೆ ಬದಿಗೆ ತಂದು ಕಾಯುತ್ತಿರುತ್ತಾರೆ. ನಿಗದಿತ ಸಮಯದಲ್ಲಿ ಬಸ್‍ಗಳು ಆಗಮಿಸದೆ ಇರುವುದರಿಂದ ರೈತರು ಸಮಯಕ್ಕೆ ಸರಿಯಾಗಿ ಗೋಣಿಕೊಪ್ಪ ನಗರಕ್ಕೆ ಆಗಮಿಸಲು ಸಾಧ್ಯವಾಗುತ್ತಿಲ್ಲ. ಇದರಿಂದಾಗಿ ರೈತರು ಬೆಳೆದು ತಂದ ವಸ್ತುಗಳು ಮಾರಾಟವಾಗದೆ ಬಿಸಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.

ಪಿರಿಯಾಪಟ್ಟಣ ಮಾರ್ಗದಿಂದ ಆಗಮಿಸುವ ಮತ್ತೊಂದು ಕೆ.ಎಸ್.ಆರ್.ಟಿ.ಸಿ ಬಸ್ 7.15ಕ್ಕೆ ತಲುಪಿ ನಂತರ ಗೋಣಿಕೊಪ್ಪ ನಗರದಿಂದ 7.30ಕ್ಕೆ ಸಿದ್ದಾಪುರ ಮಾರ್ಗವಾಗಿ ವೀರಾಜಪೇಟೆಗೆ ತೆರಳಿ ಅಮ್ಮತ್ತಿ ಮಾರ್ಗವಾಗಿ ಗೋಣಿಕೊಪ್ಪಕ್ಕೆ ಆಗಮಿಸಿ 11 ಗಂಟೆಗೆ ಗ್ರಾಮೀಣ ಪ್ರದೇಶವಾದ ಕಾನೂರು, ಕುಟ್ಟಕ್ಕೆ ತೆರಳುತ್ತಿತ್ತು. ಈಗ ಮಾರ್ಗವನ್ನು ದಿಢೀರನೆ ರದ್ದುಗೊಳಿಸಿದ್ದಾರೆ. ಮಡಿಕೇರಿ ಡಿಪೋದಿಂದ ಹೊರಡುವ ಬಸ್ಸ್ ಗಡಿಭಾಗ ಕುಟ್ಟದಿಂದ ಮುಂಜಾನೆ 5.30ಕ್ಕೆ ಬಿಟ್ಟು ಗೋಣಿಕೊಪ್ಪ ನಗರದಿಂದ 7.10ಕ್ಕೆ ಮಡಿಕೇರಿಗೆ ಹೊರಡಬೇಕಾಗಿತ್ತು. ಈ ಬಸ್ ಇದೀಗ ಕುಟ್ಟ ಮಾರ್ಗದಲ್ಲಿ ಸಂಚರಿಸುವುದನ್ನು ತಡೆಹಿಡಿಯಲಾಗಿದೆ. ಗೋಣಿಕೊಪ್ಪ ನಗರದಿಂದ ಮಂಗಳೂರಿಗೆ ಮುಂಜಾನೆ 7.10ಕ್ಕೆ ಹೊರಡುತ್ತಿದೆ. ಇದರಿಂದಾಗಿ ಕುಟ್ಟ, ಶ್ರೀಮಂಗಲ, ಹುದಿಕೇರಿ, ಟಿ.ಶೆಟ್ಟಿಗೇರಿ, ಪೊನ್ನಂಪೇಟೆಯಿಂದ ಮಡಿಕೇರಿ ಹಾಗೂ ಮಂಗಳೂರಿಗೆ ತೆರಳಬೇಕಾದ ಪ್ರಯಾಣಿಕರಿಗೆ ತೊಂದರೆಯಾಗಿದೆ.

ಹುಣಸೂರು ಡಿಪೋದಿಂದ ಪಿರಿಯಾಪಟ್ಟಣ ಮಾರ್ಗವಾಗಿ ಆಗಮಿಸಿ ಪಾಲಿಬೆಟ್ಟದಲ್ಲಿ ನಿಲುಗಡೆಯಾಗುತ್ತಿದ್ದ ಕೆ.ಎಸ್.ಆರ್.ಟಿ.ಸಿ. ಬಸ್ ಬೆಳಿಗ್ಗೆ 6.45ಕ್ಕೆ ಪಾಲಿಬೆಟ್ಟ ಬಿಟ್ಟು ಗೋಣಿಕೊಪ್ಪ ನಗರಕ್ಕೆ 7.15ಕ್ಕೆ ತಲುಪಿ ನಂತರ 7.30ಕ್ಕೆ ಗ್ರಾಮೀಣ ಭಾಗವಾದ ಬಿ.ಶೆಟ್ಟಿಗೇರಿಗೆ ತೆರಳಿ ನಂತರ ವಾಪಾಸ್ಸು ಗೋಣಿಕೊಪ್ಪಕ್ಕೆ ಆಗಮಿಸಿ 9 ಗಂಟೆಗೆ ಕಚೇರಿಯ ಸಿಬ್ಬಂದಿಗಳು ತಿತಿಮತಿ ಮಾರ್ಗವಾಗಿ ಪಿರಿಯಾಪಟ್ಟಣಕ್ಕೆ ತೆರಳುತ್ತಿದ್ದು, ಇದೀಗ ರದ್ದಾಗಿದೆ. ಇದರಿಂದ ಕಚೇರಿಯ ಸಿಬ್ಬಂದಿಗಳಿಗೆ ಸಂಕಷ್ಟ ಎದುರಾಗಿದೆ.

ನಗರಕ್ಕೆ ಆಗಮಿಸಿದ ರೈತರನ್ನು ಸಂಜೆಯ 6.30ರ ವೇಳೆಯಲ್ಲಿ ವಾಪಾಸ್ಸು ಪಿರಿಯಾಪಟ್ಟಣಕ್ಕೆ ಕರೆದೊಯ್ಯಬೇಕಾದ ಕೆ.ಎಸ್.ಆರ್.ಟಿಸಿ. ಬಸ್ ಇದೀಗ ತನ್ನ ಮಾರ್ಗವನ್ನು ನಿಲ್ಲಿಸಿರುವುದರಿಂದ ರೈತರು ವಿಧಿ ಇಲ್ಲದೆ ಲಾರಿಗಳನ್ನು ಹತ್ತಿ ತಮ್ಮ ಊರಿಗೆ ತೆರಳಬೇಕಾದ ಪರಿಸ್ಥಿತಿ ಎದುರಾಗಿದೆ. ಒಟ್ಟಿನಲ್ಲಿ ಕೊರೊನಾವನ್ನೇ ಮುಂದಿಟ್ಟುಕೊಂಡ ಕೆಲವು ಅಧಿಕಾರಿಗಳು ರೈತರಿಗೆ, ಪ್ರಯಾಣಿಕರಿಗೆ ಅನುಕೂಲ ಕಲ್ಪಿಸುವ ಬದಲು ಅನಾನುಕೂಲಕ್ಕೆ ಕಾರಣವಾಗಿದೆ. ಕೂಡಲೇ ಅಧಿಕಾರಿಗಳು ಕ್ರಮ ವಹಿಸದಿದ್ದಲ್ಲಿ ಪ್ರಯಾಣಿಕರ, ರೈತರ ಪ್ರತಿಭಟನೆ ಎದುರಿಸಬೇಕಾದೀತು ಎಂದು ನಾಗರಿಕರು ಎಚ್ಚರಿಸಿದ್ದಾರೆ.