ಮಡಿಕೇರಿ, ಸೆ. 9: ಕೊಡಗು ಜಿಲ್ಲೆಯ ನಗರ ಸ್ಥಳೀಯ ಸಂಸ್ಥೆಗಳ ಪ್ರಗತಿ ಪರಿಶೀಲನಾ ಸಭೆಯನ್ನು ನಡೆಸಿ, ಸ್ಥಳೀಯ ಸಂಸ್ಥೆಗೆ ಬರಬೇಕಾದ ವಿವಿಧ ತೆರಿಗೆಗಳಾದ ಆಸ್ತಿ ತೆರಿಗೆ, ನೀರಿನ ತೆರಿಗೆ, ಮಳಿಗೆಗಳ ಬಾಡಿಗೆ, ವ್ಯಾಪಾರ ಪರವಾನಿಗೆ ಹಾಗೂ ಜಾಹಿರಾತು ಫಲಕದ ಶುಲ್ಕ ವಸೂಲಾತಿಯಲ್ಲಿ ಪ್ರಗತಿ ಕುಂಠಿತಗೊಂಡಿರುವ ಹಿನ್ನೆಲೆಯಲ್ಲಿ ನಗರ ಸ್ಥಳೀಯ ಸಂಸ್ಥೆಯ ವ್ಯಾಪ್ತಿಯಲ್ಲಿ ಬರುವ ತೆರಿಗೆದಾರರಲ್ಲಿ ಅಕ್ಟೋಬರ್ ಅಂತ್ಯದವರೆಗೆ ದಂಡ ರಹಿತ ತೆರಿಗೆ ಪಾವತಿಸಲು ಅವಕಾಶವಿದೆ.
ನಂತರ ಪಾವತಿಸಿದಲ್ಲಿ ಮಾಹೆಯಾನ ದಂಡ ಅನ್ವಯವಾಗುತ್ತದೆ ಹಾಗೂ ಈ ಬಾಕಿ ತೆರಿಗೆಗಳನ್ನು ನಗರ ಸ್ಥಳೀಯ ಸಂಸ್ಥೆಗೆ ಪಾವತಿಸದೇ ಇದ್ದಲ್ಲಿ ಸಾರ್ವಜನಿಕರ ಕೆಲಸ ಕಾರ್ಯಗಳನ್ನು ನಿರ್ವಹಿಸಲು, ಹೊರ ಗುತ್ತಿಗೆ ನೌಕರರ ವೇತನವನ್ನು ಹಾಗೂ ನಗರದ ಅಭಿವೃದ್ಧಿಗೆ ಕಷ್ಟ ಸಾಧ್ಯವಾಗುವುದರಿಂದ ಬಾಕಿ ಇರುವ ತೆರಿಗೆ ಪಾವತಿಸಿ ಅಭಿವೃದ್ಧಿಗೆ ಸಹಕರಿಸುವಂತೆ ತೆರಿಗೆದಾರರಿಗೆ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ರಾಜು ಅವರು ಮನವಿ ಮಾಡಿದ್ದಾರೆ.