ಶನಿವಾರಸಂತೆ, ಅ. 9: ದುಂಡಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಪ್ಪಶೆಟ್ಟಳ್ಳಿ ಗ್ರಾಮದ ನಿವಾಸಿ ಎಚ್. ವೆಂಟಕೇಶ್ ಅವರಿಗೆ ಸೇರಿದ ಮನೆಯ ಹಿಂಬಾಗಿಲು ಒಡೆದು ತಾ. 9 ರಂದು ಯಾರೊ ಕಳ್ಳರು ಗಾಡ್ರೇಜ್‍ನಲ್ಲಿ ಇಟ್ಟಿದ್ದ ರೂ. 96 ಸಾವಿರ ಬೆಲೆಬಾಳುವ ಚಿನ್ನಾಭರಣ ಹಾಗೂ ನಗದು ರೂ. 2 ಸಾವಿರ ಕಳವು ಮಾಡಿದ್ದಾರೆ ಎಂದು ನೀಡಿದ ದೂರಿನ ಮೇರೆ ಶನಿವಾರಸಂತೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇಂದು ಬೆಳಿಗ್ಗೆ ವೆಂಕಟೇಶ್ ಹಾಗೂ ಪತ್ನಿ ಆಧಾರ್ ಕಾರ್ಡ್‍ಗೆ ಫೋನ್ ನಂಬರ್ ಲಿಂಕ್ ಮಾಡಿಸಲು ಶನಿವಾರಸಂತೆಯ ಪೋಸ್ಟ್ ಆಫೀಸ್‍ಗೆ ತೆರಳಿ ಕೆಲಸ ಮುಗಿಸಿ ವಾಪಾಸ್ಸು ಮನೆಗೆ ಬಂದು ನೋಡಲಾಗಿ ಮನೆಯ ಹಿಂಬಾಗಿಲನ್ನು ಒಡೆದು ಯಾರೋ ಕಳ್ಳರು ಮನೆಯೊಳಗೆ ನುಗ್ಗಿ ಹಾಸಿಗೆಯ ಕೆಳಗೆ ಇಟ್ಟಿದ ಕೀಯ ಸಹಾಯದಿಂದ ಗಾಡ್ರೇಜ್ ಬಾಗಿಲನ್ನು ತೆರೆದು ಗಾಡ್ರೇಜ್‍ನ ಸೇಪ್ಟಿ ಲಾಕರ್‍ನಲ್ಲಿ ಇಟ್ಟಿದ್ದ 16 ಗ್ರಾಂ. ತೂಕದ 1 ಚಿನ್ನದ ನೆಕ್ಲೇಸ್, 10 ಗ್ರಾಮ ತೂಕದ ಚಿನ್ನದ ಸರ, 2 ಜತೆ ಚಿನ್ನದ ಓಲೆ, 1 ಚಿನ್ನದ ಉಂಗುರ ಹಾಗೂ ಗಾಡ್ರೇಜ್‍ನಲ್ಲಿಟ್ಟಿದ್ದ ರೂ. 2 ಸಾವಿರ ನಗದು ಕಳವು ಮಾಡಿದ್ದಾರೆ.
(ಒಟ್ಟು ಅಂದಾಜು 30 ಗ್ರಾಂ. ಚಿನ್ನಾಭರಣ ಬೆಲೆ ರೂ. 96 ಸಾವಿರ) ಎಂದು ಶನಿವಾರಸಂತೆ ಪೊಲೀಸ್ ಠಾಣೆಗೆ ನೀಡಿದ ದೂರಿನ ಮೇರೆ ಠಾಣಾಧಿಕಾರಿ ಹೆಚ್.ಇ. ದೇವರಾಜ್ ವಿಧಿ 454, 389 ಐಪಿಸಿ ರೀತ್ಯಾ ಪ್ರಕರಣ ದಾಖಲಿಸಿದ್ದಾರೆ. ಸ್ಥಳಕ್ಕೆ ಡಿವೈಎಸ್‍ಪಿ ಪಿ. ಶೈಲೇಂದ್ರ, ವೃತ್ತ ನಿರೀಕ್ಷಕ ಮಹೇಶ್, ಠಾಣಾಧಿಕಾರಿ ದೇವರಾಜ್, ಸಹಾಯಕ ಠಾಣಾಧಿಕಾರಿ ಹೆಚ್.ಎಂ. ಗೋವಿಂದ್ ಹಾಗೂ ಸಿಬ್ಬಂದಿಗಳು ಭೇಟಿ ನೀಡಿದ್ದಾರೆ. ಮಡಿಕೇರಿಯ ಬೆರಳಚ್ಚು ತಜ್ಞರು ಹಾಗೂ ಶ್ವಾನದಳ ಆಗಮಿಸಿದ್ದು, ಪರಿಶೀಲನೆ ನಡೆಸಲಾಯಿತು.