ಕೂಡಿಗೆ, ಅ. 8: ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸೀಗೆ ಹೊಸೂರು ಗ್ರಾಮದ ಒಂದೇ ಮನೆಯ ಗಂಡ ಮತ್ತು ಹೆಂಡತಿಗೆ ಗ್ರಾಮ ಪಂಚಾಯಿತಿ ಮನೆ ಕಂದಾಯ ವಿಧಿಸಿರುವ ಪ್ರಸಂಗ ಕೂಡಿಗೆ ಗ್ರಾಮ ಪಂಚಾಯಿತಿಯಲ್ಲಿ ನಡೆದಿದೆ.

ಸೀಗೆ ಹೊಸೂರು ಗ್ರಾಮದಲ್ಲಿ ವಾಸಿಸುತ್ತಿರುವ ಅಣ್ಣಯ್ಯ ಶೆಟ್ಟಿ ಮತ್ತು ಅವರ ಪತ್ನಿ ಮಹಾದೇವಿ ಎಂಬವರಿಗೆ ಗ್ರಾಮ ಪಂಚಾಯಿತಿ ಬೇರೆ ಬೇರೆ ರಶೀತಿ ಪುಸ್ತಕದಲ್ಲಿ ಮನೆಯ ಕಂದಾಯ ಹಾಕಿರುತ್ತಾರೆ. ಸೀಗೆಹೊಸೂರು ಗ್ರಾಮದ ಅಣ್ಣಯ್ಯ ಶೆಟ್ಟಿ ಅವರ ಮನೆ ಕಳೆದ ನಾಲ್ಕು ವರ್ಷಗಳ ಹಿಂದೆ ಮಳೆಯಿಂದಾಗಿ ಬಿದ್ದುಹೋಗಿತ್ತು. ಕೂಲಿ ಕಾರ್ಮಿಕರಾಗಿರುವ ಇವರಿಗೆ ಗ್ರಾಮ ಪಂಚಾಯಿತಿ ವತಿಯಿಂದ 2017ರಲ್ಲಿ ಆಶ್ರಯ ಯೋಜನೆ ಅಡಿಯಲ್ಲಿ ಮನೆಯನ್ನು ಸರಕಾರದ ವತಿಯಿಂದ ನಿರ್ಮಿಸಲಾಗಿತ್ತು.

ಗ್ರಾಮ ಪಂಚಾಯಿತಿ ಕಂದಾಯ ಪುಸ್ತಕದಲ್ಲಿ ಸೀಗೆಹೊಸೂರು ಗ್ರಾಮದಲ್ಲಿ ವಾಸವಿದ್ದ ಅಣ್ಣಯ್ಯ ಶೆಟ್ಟಿಯ ಹಳೆಯ ಗುಡಿಸಲು ಮನೆ ನೋಂದಣಿಯಾಗಿತ್ತು. ಕಳೆದ ನಾಲ್ಕು ವರ್ಷಗಳ ಹಿಂದೆ ಗ್ರಾಮ ಪಂಚಾಯಿತಿ ವತಿಯಿಂದ ಅವರ ಹೆಂಡತಿ ಹೆಸರಿನಲ್ಲಿ ನಿವೇಶನ ಮಂಜೂರು ಆಗಿ ಮನೆ ಸರಕಾರದ ನಿಯಮಾನುಸಾರ ಕಟ್ಟಲಾಗಿದೆ. ಆದರೆ ಗ್ರಾಮ ಪಂಚಾಯಿತಿ ಕಂದಾಯದ ನೋಂದಣಿ ಪುಸ್ತಕದಲ್ಲಿ ಒಂದೇ ಮನೆಯಲ್ಲಿರುವ ಗಂಡ-ಹೆಂಡತಿಯ ಹೆಸರಿನಲ್ಲಿ ಬೇರೆ ಬೇರೆ ಮನೆ ಇದೆ ಎಂದು ನೋಂದಣಿ ಆಗಿ ಕಂದಾಯ ನಿಗದಿ ಮಾಡಲಾಗಿದೆ!

ಕೂಲಿ ಕಾರ್ಮಿಕರಾಗಿರುವ ಇವರು ಸರಕಾರದ ಬೇರೆ ಸೌಲಭ್ಯಗಳನ್ನು ಪಡೆಯಲು ಗ್ರಾಮ ಪಂಚಾಯಿತಿ ಕಂದಾಯ ಕಟ್ಟಲು ಬಂದಾಗ ಅಶ್ಚರ್ಯ ಕಾದಿತ್ತು...! ಕಂದಾಯ ರಶೀತಿ ಬೇಕು ಎನ್ನುವ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿಯವರು 2018-19 ಸಾಲಿನ ಗಂಡನ ಹೆಸರಿನಲ್ಲಿ 843 ರೂ. ಮತ್ತು ಹೆಂಡತಿಯ ಹೆಸರಿನಲ್ಲಿ 735 ರೂ. ಹಣವನ್ನೂ ಕಟ್ಟಿಸಿಕೊಂಡಿದ್ದಾರೆ. ಸರಕಾರ ನೀಡಿರುವ ಮನೆಗೆ ಗಂಡ ಮತ್ತು ಹೆಂಡತಿಯ ಹೆಸರಿನಲ್ಲಿ ಹಣ ವಸೂಲಾತಿ ಮಾಡುತ್ತಿರುವುದು ಯಾವ ನ್ಯಾಯ ಎಂಬದು ಗ್ರಾಮಸ್ಥರ ಪ್ರಶ್ನೆಯಾಗಿದೆ? ಇಂದು ಹಣ ಸಂದಾಯ ಮಾಡಿದವರು ಗ್ರಾಮಸ್ಥರೊಬ್ಬರಿಗೆ ತಿಳಿಸಿದಾಗ ಈ ವಿಷಯ ಹೊರಬಿದ್ದಿದೆ...! -ಕೆ.ಕೆ. ನಾಗರಾಜಶೆಟ್ಟಿ