ಸೋಮವಾರಪೇಟೆ,ಅ.9: ಅವಧಿ ಮೀರಿದ ಪಾನೀಯಗಳನ್ನು ರಸ್ತೆ ಬದಿಯಲ್ಲಿ ಎಸೆದು ಇತರರ ಆರೋಗ್ಯಕ್ಕೆ ಸಂಚಕಾರ ತರುವಂತೆ ವರ್ತಿಸಿರುವ ಘಟನೆ ಸಮೀಪದ ಕುಸುಬೂರು ಕೆರೆಯ ಬಳಿ ನಡೆದಿದೆ.

ಕುಸುಬೂರು ಕೆರೆಯಿಂದ ಬಜೆಗುಂಡಿ ಗ್ರಾಮಕ್ಕೆ ತೆರಳುವ ರಾಜ್ಯ ಹೆದ್ದಾರಿಯ ಬದಿಯಲ್ಲಿ ಬಿಂದು ಕಂಪೆನಿಯ ಜೀರಾ ಜ್ಯೂಸ್, ಕೂರ್ಗ್ ಹೆಸರಿನ ವಾಟರ್ ಬಾಟಲ್, ಸೀಬೆ ಹಣ್ಣಿನ ಜ್ಯೂಸ್ ಸೇರಿದಂತೆ ಇತರ ಪಾನೀಯಗಳ ಬಾಟಲ್‍ಗಳನ್ನು ಚೀಲಗಳಲ್ಲಿ ತುಂಬಿಸಿ ರಸ್ತೆಯ ಬದಿಯಲ್ಲಿ ಎಸೆಯಲಾಗಿದೆ.

ರಸ್ತೆ ಬದಿಯಲ್ಲಿ ಬಿದ್ದಿದ್ದ ಬಾಟಲ್ ಪಾನೀಯವನ್ನು ಮಕ್ಕಳು ಕುಡಿಯಲು ಮುಂದಾಗುತ್ತಿದ್ದುದನ್ನು ಕಂಡ ಪ್ರಯಾಣಿಕರು ಸಂಶಯ ವ್ಯಕ್ತಪಡಿಸಿ ಸ್ಥಳೀಯರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ತೆರಳಿದ ಬಜೆಗುಂಡಿ ಗ್ರಾಮದ ಬಿಜೆಪಿ ಕಾರ್ಯಕರ್ತ ಬಿ.ಎಂ. ಪ್ರಶಾಂತ್ ಅವರು ಬಾಟಲ್‍ಗಳನ್ನು ಪರಿಶೀಲಿಸಿದ್ದು, ಇದರಲ್ಲಿ ತಯಾರಿಸಿದ ದಿನಾಂಕ ಇಲ್ಲದಿರುವದು ಪತ್ತೆಯಾಗಿದೆ.

ನಂತರ ಪ್ರಶಾಂತ್ ಸೇರಿದಂತೆ ರೂಪೇಶ್, ಹೇಮಂತ್ ಪೂಜಾರಿ, ಹೇಮಂತ್ ರಾಜಣ್ಣ, ಆಟೋ ಮಣಿ ಅವರುಗಳು ಬಾಟಲ್‍ಗಳಲ್ಲಿದ್ದ ಪಾನೀಯವನ್ನು ಹೊರಗೆ ಚೆಲ್ಲಿ, ಪ್ಲಾಸ್ಟಿಕ್ ಬಾಟಲ್‍ಗಳಿಗೆ ಬೆಂಕಿ ಹಾಕಿ ಮುಂದಾಗಬಹುದಾಗಿದ್ದ ಅಪಾಯವನ್ನು ತಪ್ಪಿಸಿದ್ದಾರೆ.

ಲಾಕ್‍ಡೌನ್ ಅವಧಿಯಲ್ಲಿ ಹಲವಷ್ಟು ಪಾನೀಯಗಳು ವ್ಯಾಪಾರವಾಗದೇ ಹಾಗೆಯೇ ಉಳಿದಿದ್ದು, ಅವುಗಳನ್ನು ಅಂಗಡಿಯ ಮಾಲೀಕರು ಹೀಗೆ ರಸ್ತೆ ಬದಿ ಎಸೆದು ಬೇಜವಾಬ್ದಾರಿ ಮೆರೆದಿದ್ದಾರೆ. ಸದ್ಯ ಮಕ್ಕಳು ಪಾನೀಯ ಸೇವಿಸಲು ಮುಂದಾಗುತ್ತಿದ್ದ ಸಂದರ್ಭ ಸ್ಥಳೀಯರು ಎಚ್ಚರಿಸಿದ್ದರಿಂದ ಅನಾಹುತ ತಪ್ಪಿದೆ. ನಮ್ಮ ಬಳಿಯಿದ್ದ ಅವಧಿ ಮೀರಿದ ಪಾನೀಯವನ್ನು ಈ ಹಿಂದೆಯೇ ನಾಶಪಡಿಸಿದ್ದೇವೆ. ಅಂಗಡಿಯಲ್ಲಿ ಇಟ್ಟುಕೊಂಡಿದ್ದವರು ಮಾರಾಟವಾಗದ ಹಿನ್ನೆಲೆ ಹೀಗೆ ರಸ್ತೆ ಬದಿಯಲ್ಲಿ ಎಸೆದಿರಬಹುದು ಎಂದು ಏಜೆನ್ಸಿಯ ಗುತ್ತಿಗೆದಾರರು ತಿಳಿಸಿದ್ದಾರೆ.