ಗೋಣಿಕೊಪ್ಪಲು, ಅ. 9: ರಾಜ್ಯ ಹಾಗೂ ರಾಷ್ಟ್ರದಲ್ಲಿ ಬಿಜೆಪಿ ಪಕ್ಷ ಅಧಿಕಾರಕ್ಕೆ ಬರಲು ಪಕ್ಷದಲ್ಲಿರುವ ಸಕ್ರೀಯ ಕಾರ್ಯಕರ್ತರ ಶ್ರಮದ ಫಲವೆ ಕಾರಣವೆಂದು ಬಿಜೆಪಿ ವಿಭಾಗೀಯ ಮಟ್ಟದ ಪ್ರಬಾರಿ ಉದಯ ಕುಮಾರ್ ಶೆಟ್ಟಿ ಪಕ್ಷದ ಮುಖಂಡರುಗಳಿಗೆ ಕಿವಿ ಮಾತು ಹೇಳಿದರು.
ಅಮ್ಮತ್ತಿ ಕೊಡವ ಸಮಾಜದಲ್ಲಿ ಏರ್ಪಡಿಸಿದ್ದ ಬಿಜೆಪಿ ವೀರಾಜಪೇಟೆ ಮಂಡಲದ ಕಾರ್ಯಕಾರಿಣಿ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಕೇಂದ್ರ ಸರ್ಕಾರದ ಕಾರ್ಯಕ್ರಮಗಳನ್ನು ಜನರ ಮನೆಯ ಬಾಗಿಲಿಗೆ ತಲುಪಿಸುವ ಜವಾಬ್ದಾರಿ ಪಕ್ಷದ ಕಾರ್ಯಕರ್ತನ ಮೇಲಿದೆ. ಕೇಂದ್ರ ಹಾಗೂ ರಾಜ್ಯದಲ್ಲಿ ಸರ್ಕಾರ ಇರುವುದರಿಂದ ಜನರ ನಿರೀಕ್ಷೆ ಸಹಜವಾಗಿ ಅಧಿಕವಿದೆ. ಜನರ ನಿರೀಕ್ಷೆಯನ್ನು ಹುಸಿಗೊಳಿಸದೆ ಇವರ ಕಷ್ಟಗಳಲ್ಲಿ ಭಾಗಿಗಳಾಗಬೇಕು. ಪ್ರಸ್ತುತ ಕೊರೊನಾ ಮಹಾಮಾರಿಯು ಇಡೀ ದೇಶವನ್ನು ತಲ್ಲಣಗೊಳಿಸಿದೆ ಜಿಲ್ಲೆಯಲ್ಲಿಯೂ ಇತ್ತೀಚೆನ ದಿನಗಳಲ್ಲಿ ಹೆಚ್ಚಾಗಿ ಪ್ರಕರಣಗಳು ದಾಖಲಾಗುತ್ತಿರುವುದರಿಂದ ಜನತೆ ತಾವಾಗಿಯೇ ಜಾಗೃತಿ ಗೊಳ್ಳುವ ಮೂಲಕ ಈ ಮಹಾಮಾರಿಯನ್ನು ದೂರ ಮಾಡುವ ಪ್ರಯತ್ನ ಮಾಡಬೇಕು ಎಂದು ವೀರಾಜಪೇಟೆ ಶಾಸಕ ಕೆ.ಜಿ. ಬೋಪಯ್ಯ ಅಭಿಪ್ರಾಯಪಟ್ಟರು.
ವೀರಾಜಪೇಟೆ ಮಂಡಲ ಅಧ್ಯಕ್ಷ ನೆಲ್ಲೀರ ಚಲನ್ ಕುಮಾರ್ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಪ್ರಾಸ್ತಾವಿಕವಾಗಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕುಂಞಂಗಡ ಅರುಣ್ ಭೀಮಯ್ಯ ಮಾತನಾಡಿದರು. ಬಿಜೆಪಿ ಜಿಲ್ಲಾಧ್ಯಕ್ಷ ಪಳೆಯಂಡ ರಾಬಿನ್ ದೇವಯ್ಯ, ಮಾಜಿ ಜಿಲ್ಲಾಧ್ಯಕ್ಷ ಮಂಡೇಪಂಡ ಸುಜಾ ಕುಶಾಲಪ್ಪ, ವಿಭಾಗೀಯ ಮಟ್ಟದ ಪ್ರಬಾರಿ ಗೋಪಾಲ್ ಕೃಷ್ಣ ಹೇರಳೆ, ಹಾಸನ ಜವಾಬ್ದಾರಿ ವಹಿಸಿರುವ ರೀಣಾ ಪ್ರಕಾಶ್, ಸೇರಿದಂತೆ ಇನ್ನಿತರ ಜಿಲ್ಲಾ ಮುಖಂಡರು ಸಭೆಯನ್ನು ಉದ್ದೇಶಿಸಿ ಮಾತನಾಡಿದರು.