ಮಡಿಕೇರಿ, ಅ. 7: ದಕ್ಷಿಣ ಭಾರತದಲ್ಲಿ ಜಾಗತಿಕ ಭಯೋತ್ಪಾದಕರು ನುಸುಳುವದ ರೊಂದಿಗೆ, ಪಶ್ಚಿಮಘಟ್ಟದೊಳಗೆ ತಮ್ಮ ಅಡಗುದಾಣ ಮಾಡಿಕೊಂಡ ದುಷ್ಕøತ್ಯಗಳನ್ನು ಎಸಗಲು ಸಂಚು ರೂಪಿಸುತ್ತಿರುವ ಬಗ್ಗೆ ರಾಷ್ಟ್ರೀಯ ಭಯೋತ್ಪಾದಕ ನಿಗ್ರಹ ದಳ ಸುಳಿವು ನೀಡಿದೆ. ಈ ಸಂಬಂಧ ಕರ್ನಾಟಕದ ಮಲೆನಾಡು ಜಿಲ್ಲೆಗಳ ಸಹಿತ ಕೊಡಗಿನ ಜನತೆ ಜಾಗೃತರಾಗುವಂತೆ, ವೀರಾಜಪೇಟೆ ಕ್ಷೇತ್ರದ ಶಾಸಕ ಹಾಗೂ ಕರ್ನಾಟಕ ಅರಣ್ಯ ಸಂರಕ್ಷಣಾ ಸಮಿತಿ ಅಧ್ಯಕ್ಷರೂ ಆಗಿರುವ ಕೆ.ಜಿ. ಬೋಪಯ್ಯ ಕರೆ ನೀಡಿದ್ದಾರೆ. ರಾಷ್ಟ್ರೀಯ ಸುರಕ್ಷಾ ಹಾಗೂ ಭಯೋತ್ಪಾದಕ ನಿಗ್ರಹ ದಳ ವರದಿಯಲ್ಲಿ, ಕರ್ನಾಟಕ, ಕೇರಳ, ತಮಿಳುನಾಡು ರಾಜ್ಯಗಳನ್ನು ಒಳಗೊಂಡಂತೆ, ವಿವಿಧ ಜಿಲ್ಲೆಗಳ ಪೈಕಿ ಕೊಡಗಿನ ಉಲ್ಲೇಖ ಇರುವದಾಗಿ ಮಾಧ್ಯಮಗಳಲ್ಲಿ ವರದಿಯಾಗಿದೆ ಎಂದು ಪ್ರಸ್ತಾಪಿಸಿದ ಅವರು, ಈ ಹಿಂದೆಯೂ ಸೋಮವಾರಪೇಟೆ ಬಳಿಯ ಹೊಸತೋಟ ವ್ಯಾಪ್ತಿಯಲ್ಲಿ ಜಾಗತಿಕ ಭಯೋತ್ಪಾದನೆಯ ನಂಟು ಕಾಣಿಸಿಕೊಂಡಿದ್ದನ್ನು ನೆನಪಿಸಿದರು.ಈ ಬಗ್ಗೆ ‘ಶಕ್ತಿ’ಯೊಂದಿಗೆ ಪ್ರತಿಕ್ರಿಯಿಸಿದ ಬೋಪಯ್ಯ ಅವರು, ಕೇಂದ್ರ ಮತ್ತು ರಾಜ್ಯ ಸರಕಾರಗಳು ಗುಪ್ತಚರ ಸಂಸ್ಥೆಗಳ ಮಾಹಿತಿ ಆಧರಿಸಿ ಜಾಗೃತ ಕ್ರಮಗಳನ್ನು ತೆಗೆದುಕೊಳ್ಳಲಿದ್ದು, ಕೊಡಗಿನ ಜನತೆ ಮತ್ತು ಪೊಲೀಸ್ ಇಲಾಖೆ ಸದಾ ಎಚ್ಚರವಹಿಸಬೇಕೆಂದು ಅಭಿಪ್ರಾಯಪಟ್ಟರು.
ಕಾರ್ಮಿಕರ ಸೋಗು : ಕೊಡಗಿನಲ್ಲಿ ಕಾರ್ಮಿಕರ ಸೋಗಿನಲ್ಲಿ
ಅಸ್ಸಾಂ ಮೂಲದ ಹೆಸರಿನಲ್ಲಿ ಬಾಂಗ್ಲಾ ನುಸುಳುಕೋರರ ಬಗ್ಗೆ ಮೊದಲಿನಿಂದಲೂ ಅನುಮಾನವಿದ್ದು, ಈ ಬಗ್ಗೆ ವಿಶೇಷವಾಗಿ ಜಿಲ್ಲೆಯ ಬೆಳೆಗಾರರು ಹಾಗೂ ಉದ್ಯಮಗಳು ಎಚ್ಚರ ವಹಿಸುವ ಅನಿವಾರ್ಯತೆ ಇದೆ ಎಂದು ನುಡಿದರು.
(ಮೊದಲ ಪುಟದಿಂದ) ಬೆಳೆಗಾರರಿಗೆ ಕಿವಿಮಾತು : ಕೊಡಗಿನ ಬೆಳೆಗಾರರು ತಮ್ಮ ತಮ್ಮ ತೋಟಗಳಿಗೆ ಅಸ್ಸಾಂ ಕಾರ್ಮಿಕರ ಸೋಗಿನಲ್ಲಿ ಬರುವವರ ಬಗ್ಗೆ, ಸಂಪೂರ್ಣ ಮಾಹಿತಿ ಕಲೆಹಾಕಿ, ಅಂತಹವರ ಭಾವಚಿತ್ರ ಸಹಿತ ಪೊಲೀಸ್ ಠಾಣೆಗಳಿಗೆ ಸಲ್ಲಿಸಬೇಕು. ಭವಿಷ್ಯದಲ್ಲಿ ಈ ಮುಖಾಂತರ ಅಪಾಯವನ್ನು ತಪ್ಪಿಸಲು ಸಾಧ್ಯವಾಗಲಿದೆ ಎಂದು ಕಿವಿಮಾತು ಹೇಳಿದರು.
ಈ ದಿಸೆಯಲ್ಲಿ ದೇಶದ ಭದ್ರತೆಯೊಂದಿಗೆ ಕಾನೂನಿನ ಚೌಕಟ್ಟಿನಲ್ಲಿ ಪ್ರತಿಯೊಬ್ಬರು ಜಾಗೃತಿ ವಹಿಸಿದರೆ, ವಿದ್ರೋಹಿ ಚಟುವಟಿಕೆಗಳನ್ನು ಮೊಳಕೆಯಲ್ಲಿಯೇ ಹತ್ತಿಕ್ಕಲು ಸಾಧ್ಯವಾಗಲಿದೆ ಎಂದು ಅವರು ಅಭಿಪ್ರಾಯಪಟ್ಟರು. ಕೇಂದ್ರ ಗುಪ್ತಚರ ಸಂಸ್ಥೆ ಕೂಡ ಈ ನಿಟ್ಟಿನಲ್ಲಿ ಕಣ್ಗಾವಲು ಇರಿಸಿರುವ ಕುರಿತು ಮಾಹಿತಿ ಇದೆ ಎಂದು ಶಾಸಕರು ಸೂಚ್ಯವಾಗಿ ನುಡಿದರು.