ಕಣಿವೆ, ಅ. 7: ಗುಡ್ಡೆಹೊಸೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಾಳುಗೋಡು ಬಳಿ ಕಾಡಾನೆಗಳು ಧಾಳಿ ಮಾಡಿ ಗ್ರಾಮದ ರೈತ ಸುಕುಮಾರ್ ಎಂಬವರು ಬೆಳೆದಿದ್ದ ಜೋಳದ ಫಸಲನ್ನು ತಿಂದು ಮತ್ತು ತುಳಿದು ಹಾನಿ ಮಾಡಿವೆ. ಅಲ್ಲದೇ ಪಕ್ಕದಲ್ಲೇ ಇದ್ದ ಶುಂಠಿ ಹೊಲದೊಳಗೆ ತಿರುಗಾಡಿದ್ದರಿಂದ ಕಾಡಾನೆಗಳ ಪಾದದ ಹೆಜ್ಜೆಗೆ ಶುಂಠಿಯ ಸಾಲುಗಳು ನೆಲಸಮವಾಗಿವೆ. ಇದರಿಂದಾಗಿ ಸುಕುಮಾರ್ ಎಂಬ ರೈತರಿಗೆ ಅಪಾರ ಪ್ರಮಾಣದ ಬೆಳೆ ನಷ್ಟವಾಗಿದೆ.
ಪ್ರತಿ ದಿನ ಮಧ್ಯ ರಾತ್ರಿಯ ಸಮಯದಲ್ಲಿ ಕಾಡಿನೊಳಗಿಂದ ನಮ್ಮ ಹೊಲ ಗದ್ದೆಗಳಿಗೆ ಧಾವಿಸುವ ಕಾಡಾನೆಗಳ ಸದ್ದು ಹಾಗೂ ವಾಸನೆ ಗ್ರಹಿಸಿ ನಾವು ಸಾಕಿರುವ ಶ್ವಾನಗಳು ಬೊಬ್ಬಿಡುವಾಗ ನಾನು ನಿದ್ರೆಯಿಂದೆದ್ದು ಟಾರ್ಚ್ ಹಾಕಿ ಹೊಲಕ್ಕೆ ಹೋಗಿ ಕಾಡಾನೆಗಳನ್ನು ಓಡಿಸಬೇಕು. ಇಲ್ಲವಾದಲ್ಲಿ ಬೆಳೆದ ಬೆಳೆಗಳ ಕುರುಹುಗಳಿಲ್ಲದ ಹಾಗೆ ಎಲ್ಲವನ್ನು ಕಾಡಾನೆಗಳು ಧ್ವಂಸ ಮಾಡುತ್ತವೆ. ಏನು ಮಾಡೋದು ಹೇಳಿ, ನಮ್ ಕರ್ಮ ಕಾಡಂಚಿನಲ್ಲಿ ಇರೋದು.
ನಮ್ಮ ಜೀವದ ಹಂಗು ತೊರೆದು ನಾವು ಕಾಡಾನೆಗಳನ್ನು ರಾತ್ರಿ ಕಾವಲು ಕಾದು ಬೆಳೆ ಉಳಿಸಿಕೊಳ್ಳಬೇಕು. ಕಾಡಾನೆಗಳಿಂದಾಗುವ ಬೆಳೆ ಹಾನಿಗೆ ಅರಣ್ಯ ಇಲಾಖೆ ಕೊಡುವ ಪರಿಹಾರ ನಾವು ಅರಣ್ಯ ಕಚೇರಿಗೆ ಅಲೆದಾಡುವ ಖರ್ಚಿಗೆ ಸಾಲುವುದಿಲ್ಲ ಅಂತಾರೆ ಸುಕುಮಾರ್. ಇನ್ನಾದರೂ ಅರಣ್ಯ ಇಲಾಖೆ ಕಾಡಂಚಿನಲ್ಲಿನ ರೈತರಿಗೆ ನೆಮ್ಮದಿ ಕೊಡುವ ನಿಟ್ಟಿನಲ್ಲಿ ಶಾಶ್ವತ ಸೋಲಾರ್ ಬೇಲಿ ಅಥವಾ ಕಂದಕಗಳನ್ನು ತೆರೆಯಲಿ ಎನ್ನುತ್ತಾರೆ ಸುಕುಮಾರ್.