ಮಡಿಕೇರಿ, ಅ. 7: ಕೊಡಗು ಜಿಲ್ಲೆ ಪ್ರಾಕೃತಿಕ ಸಿರಿ ಸಂಪನ್ನತೆಯೊಂದಿಗೆ, ಇಲ್ಲಿನ ಆಚಾರ - ವಿಚಾರ, ಪದ್ಧತಿ, ಪರಂಪರೆಯ ಇತಿಹಾಸದಿಂದ ಜಗತ್ತಿನಲ್ಲಿ ಅತ್ಯಂತ ಸೊಬಗಿನ ಪ್ರವಾಸಿ ತಾಣವೆಂಬ ಹೆಗ್ಗಳಿಕೆ ಯನ್ನು ಹೊಂದಿದೆ. ಸಹಜವಾಗಿಯೇ ಈ ಜಿಲ್ಲಾ ಕೇಂದ್ರ ಸ್ವಚ್ಛತೆಯ ತಾಣವಾಗಿ ಮಡಿವಂತರ ಕೇರಿ ಅಥವಾ ಮಡಿಕೇರಿ ಎಂದು ಕರೆಸಿಕೊಂಡಿವೆ. ಕೊಡಗು ಎಂದರೆ ಪರಿಸರ ರಕ್ಷಣೆಯ ತಾಣವೆಂದೂ; ಅತ್ಯಂತ ಶುಭ್ರತೆಯ ಕಾಳಜಿಯುಳ್ಳ ಜನತೆಯ ಬದುಕಿನ ನೆಲೆಯೆಂದು ಹೊರಗಿನವರ ಆಶಯವಾಗಿದೆ.

ಇನ್ನೊಂದೆಡೆ ಸೈನಿಕ ಪರಂಪರೆಯ ಕೊಡಗು ಜೀವನದಿ ಕಾವೇರಿಯ ತವರು ಜಿಲ್ಲೆಯಾಗಿದ್ದು, ಇಲ್ಲಿನ ಜನತೆ ಶಿಸ್ತು, ಸಂಯಮ, ಸ್ವಾಭಿಮಾನದ ಕಲಿಗಳು ಎಂದು ಬಣ್ಣಿಸುವವರಿದ್ದಾರೆ. ಅನ್ಯಾಯವನ್ನು ಸಹಿಸದೆ ಸದಾ ಜಾಗೃತರಾಗಿಯೂ, ವಿದ್ಯಾ ಜ್ಞಾನವಂತರೂ ಇಲ್ಲಿನವರೆಂದು ಬಿಂಬಿಸಲಾಗುತ್ತಿದೆ. ಇಂತಹ ಕೊಡಗನ್ನು ಇಂದು ಸೂಕ್ಷ್ಮವಾಗಿ ಗಮನಿಸಿದರೆ, ಜಿಲ್ಲಾ ಕೇಂದ್ರ ಮಡಿಕೇರಿ ಸಹಿತ ಕುಟ್ಟಗಡಿಯಿಂದ ಕೊಡ್ಲಿಪೇಟೆ ಹಾಗೂ ಕುಶಾಲನಗರದಿಂದ ಸಂಪಾಜೆಯ ತನಕ ಒಮ್ಮೆ ಉಸಿರು ಕಟ್ಟಿದಂತೆ ಬಾಸವಾಗಲಿದೆ. ಎಲ್ಲಿ ನೋಡಿದರೂ ಕಸದ ಕೊಂಪೆ, ಪ್ಲಾಸ್ಟಿಕ್, ಬಾಟಲಿಗಳು, ಕೊಳೆತ ಪದಾರ್ಥಗಳು ಮಾರ್ಗ ಬದಿಯೆಲ್ಲ ಗೋಚರಿಸುತ್ತಾ ದುರ್ನಾತ ಬೀರಲಿವೆ.

ಸ್ಥಳೀಯರೆಡೆಗೆ ಬೆರಳು : ಬಹುತೇಕ ಈ ಪರಿಸ್ಥಿತಿಗೆ ಸ್ಥಳೀಯರು ಕಾರಣರೆಂದು ಹಲವರು ಬೆರಳು ತೋರುತ್ತಿದ್ದರೆ; ನಿಯಮಬಾಹಿರ ಹೋಂಸ್ಟೇ, ಪ್ರವಾಸಿ ತಾಣಗಳ ವಿಹಾರ ನೆಪದಲ್ಲಿ, ಕೊಡಗಿನತ್ತ ಬರುವವರಿಗೆ ಆಸರೆ ನೀಡಿ ಬದುಕು ಕಂಡುಕೊಳ್ಳುವವರು, ಸ್ವಚ್ಛತೆ ಕಡೆಗಣಿಸಿ ಎಲ್ಲೆಂದರಲ್ಲಿ ಉಪ ಯೋಗಿಸಿದ ನಿರುಪಯುಕ್ತ ವಸ್ತುಗಳನ್ನು ಎಸೆಯುತ್ತಿದ್ದಾರೆ ಎಂದು ಕೆಲವರು ಜರೆಯುತ್ತಾರೆ.

ಅದೇ ರೀತಿ ಸ್ಥಳೀಯರು ಪ್ರವಾಸಿಗರಿಂದ ಕೊಡಗು ಹಾಳಾಗುತ್ತಿದೆ ಎಂದು ಟೀಕಿಸು ತ್ತಿದ್ದಾರೆ. ಇಂತಹ ದೋಷಾ ರೋಪಗಳ ನಡುವೆ ಮಡಿಕೇರಿ ಸಹಿತ ಜಿಲ್ಲೆಯ ಯಾವದೇ ಪಟ್ಟಣ ಅಥವಾ ಗ್ರಾ.ಪಂ. ವ್ಯಾಪ್ತಿಯಲ್ಲಿ ಕಸ ನಿರ್ವಹಣಾ ವ್ಯವಸ್ಥೆ ಇಲ್ಲದಾಗಿದೆ. ಬದಲಾಗಿ ಯಾವದೇ ಹೆದ್ದಾರಿ ಬದಿ, ಅರಣ್ಯದ ಅಂಚಿನಲ್ಲಿ ಅಥವಾ ಗುಡ್ಡ, ಬೆಟ್ಟ, ನದಿ, ತೊರೆಗಳ ಸಂಧಿ ಗೊಂದಿನಲ್ಲಿ ಎಲ್ಲವನ್ನು ಎಸೆದು ಜಾಣ ಕುರುಡುತನ ಎಸಗತೊಡಗಿದ್ದಾರೆ. ಹೀಗಾಗಿ ಪುಟ್ಟ ಕೊಡಗು ಇಂದು ಜೀವಜಲ ದೊಂದಿಗೆ ಪ್ರಕೃತಿಯೊಡಲು, ಸಹಿತ ಮಾನವನ ಬದುಕಿಗೂ ಪರೋಕ್ಷ ವಾಗಿ ಸಂಚಾಕಾರ ತಂದೊಡ್ಡು ವಂತಾಗಿದೆ. ಜಿಲ್ಲಾ ಕೇಂದ್ರ ಮಡಿಕೇರಿಯ ಪ್ರಮುಖ ರಸ್ತೆಗಳ ಸಹಿತ ಯಾವದೆ ಗಲ್ಲಿಗಳಲ್ಲಿ ಹೆಜ್ಜೆ ಇರಿಸಿದರೂ ಇದೇ ಅನುಭವ ವಾಗಲಿದೆ. ಕೊರೊನಾ ನಡುವೆ ಮುಖ ಮುಚ್ಚಿಕೊಂಡರೂ ಗಬ್ಬು ನಾರುವ ವೇಳೆ, ಈ ಮುಖವಾಡ ಕಳಚಿ ಮನುಷ್ಯ ಉಗಿದೊಡೆ; ಅದು ನಮಗೆ ನಾವೇ ಉಗಿದುಕೊಂಡಂತೆ ಭಾಸವಾಗುತ್ತಿದೆ! -ಶ್ರೀಸುತ