ಸಿದ್ದಾಪುರ, ಅ. 7: ಅಮ್ಮತ್ತಿ ಹೋಬಳಿ ಚೆನ್ನಯ್ಯನಕೋಟೆ ಗ್ರಾಮದ ಸರ್ವೆ ಸಂಖ್ಯೆ 21ರ 2.36 ಎಕರೆ ಹಾಗೂ 150ರಲ್ಲಿ 0.53 ಎಕರೆ ಪೈಸಾರಿ ಕೆರೆ ಒತ್ತುವರಿ ಜಾಗವನ್ನು ಕಂದಾಯ ಇಲಾಖಾಧಿಕಾರಿಗಳು ತೆರವುಗೊಳಿಸಿದರು.
ವೀರಾಜಪೇಟೆ ತಾಲೂಕು ತಹಶೀಲ್ದಾರ್ ನಂದೀಶ್ ಕುಮಾರ್ ಆದೇಶದ ಮೇರೆಗೆ ಚೆನ್ನಯ್ಯನಕೋಟೆ ಗ್ರಾಮದಲ್ಲಿ ಪೈಸಾರಿ ಕೆರೆ ಒತ್ತುವರಿಯನ್ನು ಸರ್ವೆ ಮೂಲಕ ಸರ್ವೆ ಇಲಾಖಾಧಿಕಾರಿಗಳು ಹಾಗೂ ಕಂದಾಯ ಇಲಾಖಾಧಿಕಾರಿಗಳು ಸರ್ವೆ ನಡೆಸಿ ಒತ್ತುವರಿ ಜಾಗವನ್ನು ವಶಕ್ಕೆ ಪಡೆದುಕೊಂಡರು. ನಂತರ ತೆರವುಗೊಳಿಸಿದ ಜಾಗವನ್ನು ಚೆನ್ನಯ್ಯನಕೋಟೆ ಗ್ರಾ.ಪಂ ಅಭಿವೃದ್ಧಿ ಅಧಿಕಾರಿಗೆ ಹಸ್ತಾಂತರಿಸಲಾಯಿತು. ಈ ಸಂದರ್ಭ ಅಮ್ಮತ್ತಿ ಹೋಬಳಿ ಕಂದಾಯ ಪರಿವೀಕ್ಷಕ ಎಂ.ಎಲ್. ಹರೀಶ್, ಗ್ರಾಮ ಲೆಕ್ಕಿಗರಾದ ಮುತ್ತಪ್ಪ, ಗೌಡಜ ಹಾಗೂ ಸರ್ವೆ ಇಲಾಖೆಯ ಸಿಬ್ಬಂದಿಗಳು ಗ್ರಾಮ ಸಹಾಯಕ ಶರಣು ಹಾಜರಿದ್ದರು.