ಕೂಡಿಗೆ, ಅ. 6: ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯ ಅಡಿಯಲ್ಲಿ ವಿವಿಧ ಯೋಜನೆಗಳ ಸೌಲಭ್ಯಗಳನ್ನು ರೇಷ್ಮೆ ಬೆಳೆಗಾರರು ಸದುಪಯೋಗ ಪಡಿಸಿಕೊಳ್ಳಲು ಜಿಲ್ಲಾ ರೇಷ್ಮೆ ಇಲಾಖೆಯ ಅಧೀಕ್ಷಕ ಜಿ. ಮಹೇಶ್ ಕರೆ ನೀಡಿದ್ದಾರೆ.
ಜಿಲ್ಲೆಯಲ್ಲಿ ರೇಷ್ಮೆ ಬೆಳೆಯಲ್ಲಿ ನಷ್ಟ ಉಂಟಾಗುತ್ತದೆ ಎಂದು ಕೆಲವು ರೈತರು ತಮ್ಮ ಜಮೀನಿನಲ್ಲಿ ನಾಟಿ ಮಾಡಿದ ಹಿಪ್ಪನೆರಳೆ ಗಿಡಗಳನ್ನು ಕಿತ್ತುಹಾಕಿದ್ದಾರೆ.
ಆದರೆ ಇದೀಗ ರೇಷ್ಮೆ ಬೆಳೆಗೆ ಉತ್ತಮವಾದ ಬೆಲೆ ಇರುವುದರಿಂದ ಕುಶಾಲನಗರ ಹೋಬಳಿಯ ಕೆಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ರೈತರು ರೇಷ್ಮೆ ಬೇಸಾಯ ಮಾಡಲು ಮುಂದಾಗುತ್ತಿದ್ದಾರೆ. ಇವರುಗಳಿಗೆ ಸರಕಾರದ ರೇಷ್ಮೆ ಇಲಾಖೆಯ ವತಿಯಿಂದ ವಿವಿಧ ಯೋಜನೆಯ ಮೂಲಕ ಸಹಾಯ ಮಾಡಲಾಗುತ್ತದೆ.
ರೈತರು ರೇಷ್ಮೆ ಹುಳು ಸಾಕಾಣಿಕೆಯ ಮನೆ ನಿರ್ಮಾಣಕ್ಕೆ ರೂ. 2 ಲಕ್ಷ ನೀಡಲಾಗುತ್ತದೆ. ಅಲ್ಲದೆ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯ ಅಡಿಯಲ್ಲಿ ರೇಷ್ಮೆ ಹುಳು ಸಾಕಾಣಿಕೆಯ ಜೊತೆಗೆ ಹಿಪ್ಪನೆರಳೆ ಗಿಡಗಳನ್ನು ನೆಡಲು ಸಹಾಯಧನ ಮತ್ತು ಹುಳು ಸಾಕಾಣಿಕೆಗೆ ಬೇಕಾಗುವ ಸಲಕರಣೆಗಳನ್ನು ಖರೀದಿಸಿ ಕೊಡಲಾಗುತ್ತಿದೆ ಎಂದು ಜಿಲ್ಲಾ ರೇಷ್ಮೆ ಇಲಾಖೆಯ ಅಧಿಕ್ಷಕ ಜಿ. ಮಹೇಶ್ ತಿಳಿಸಿದ್ದಾರೆ. ಕುಶಾಲನಗರ ಹೋಬಳಿ ವ್ಯಾಪ್ತಿಯ ಗುಡ್ಡೆಹೊಸೂರು, ಸೀಗೆಹೊಸೂರು, ಹೆಬ್ಬಾಲೆ, ಶಿರಂಗಾಲ, ಅಳುವಾರ, ಸಿದ್ದಲಿಂಗಪುರ, ಬಾಣವಾರ, ತೊರೆನೂರು ಗ್ರಾಮ ಪಂಚಾಯಿತಿ ಗ್ರಾಮಗಳಲ್ಲಿ ಅನೇಕ ರೈತರು ಈ ಬಾರಿ ರೇಷ್ಮೆ ಬೆಳೆಯನ್ನು ಬೆಳೆಯಲು ಸಿದ್ದರಾಗಿ ತಮ್ಮ ಜಮೀನಿನಲ್ಲಿ ಸ್ವಲ್ಪ ಭಾಗಕ್ಕೆ ಹಿಪ್ಪನೆರಳೆ ಗಿಡದ ಕಡ್ಡಿಗಳನ್ನು ನೆಡೆಲು ಪ್ರಾರಂಭ ಮಾಡಿದ್ದಾರೆ.
ಜಿಲ್ಲೆಯಲ್ಲಿ ರೇಷ್ಮೆ ಇಲಾಖೆಯಲ್ಲಿ ಸಿಬ್ಬಂದಿಯ ಕೊರತೆ ನಡುವೆಯು ಉಳಿದ ಸಿಬ್ಬಂದಿ ಜಿಲ್ಲಾ ವ್ಯಾಪ್ತಿಯಲ್ಲಿ ರೇಷ್ಮೆ ಬೆಳೆಯನ್ನು ಬೆಳೆಯುವ ರೈತರ ಜಮೀನಿಗೆ ತೆರಳಿ ಇಲಾಖೆಯ ಸೌಲಭ್ಯಗಳ ಮಾಹಿತಿ ಮತ್ತು ಯೋಜನೆಯನ್ನು ಸದುಪಯೋಗ ಪಡೆದುಕೊಂಡು ರೇಷ್ಮೆ ಬೆಳೆಯನ್ನು ಬೆಳೆಯುವಂತೆ ರೈತರಿಗೆ ತಿಳುವಳಿಕೆ ನೀಡುತ್ತಿದ್ದಾರೆ. ಈಗಾಗಲೇ ಕುಶಾಲನಗರ ಹೋಬಳಿ ವ್ಯಾಪ್ತಿಯ ಶಿರಂಗಾಲ ಮತ್ತು ತೊರೆನೂರು, ಸೀಗೆಹೊಸೂರು ಗ್ರಾಮಗಳಲ್ಲಿ ಹತ್ತು ಎಕರೆಗಳಷ್ಟು ಪ್ರದೇಶದಲ್ಲಿ ರೇಷ್ಮೆ ಹಿಪ್ಪನೆರಳೆ ಗಿಡಗಳ ನಾಟಿ ಮಾಡಲಾಗಿದೆ. ಈ ಸಾಲಿನಲ್ಲಿ ರೈತರಿಗೆ ಉತ್ತಮ ರೇಷ್ಮೆ ಮೊಟ್ಟೆಗಳನ್ನು ಹಾಸನ ಅಥವಾ ರಾಮನಗರದಿಂದ ತರಿಸಿಕೊಡಲಾಗುತ್ತಿದೆ. ಇನ್ನೂ ಹೆಚ್ಚಿನ ರೇಷ್ಮೆ ಬೆಳೆಯನ್ನು ಅಭಿವೃದ್ಧಿಪಡಿಸಲು ಹೆಚ್ಚು ಚಿಂತನೆ ಮಾಡಲಾಗಿದೆ ಎಂದು ಅಧೀಕ್ಷಕ ಮಹೇಶ್ ತಿಳಿಸಿದ್ದಾರೆ.
- ಕೆ.ಕೆ. ನಾಗರಾಜಶೆಟ್ಟಿ