ಮಡಿಕೇರಿ, ಅ. 6: ರಾಜ್ಯ ಸರಕಾರವು ಕೋವಿಡ್ -19 ಅನ್ನು ಸಾಂಕ್ರಾಮಿಕ ರೋಗವೆಂದು ಪರಿಗಣಿಸಿ ಇದರ ನಿವಾರಣೆಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲು ಒತ್ತು ನೀಡಿದೆ. ಅಲ್ಲದೆ ಈ ಬಗ್ಗೆ ಸುಗ್ರೀವಾಜ್ಞೆಯನ್ನೂ ಹೊರಡಿಸಿ ಎಲ್ಲಾ ಸಾರ್ವಜನಿಕ ವಲಯದ ಅಧಿಕಾರಿಗಳು, ಸಿಬ್ಬಂದಿಗಳು ಹಾಗೂ ಆರೋಗ್ಯ ಇಲಾಖೆಯ ಸಿಬ್ಬಂದಿ, ಖಾಯಂ, ಗುತ್ತಿಗೆ - ಹೊರಗುತ್ತಿಗೆ ಆಧಾರದ ಸಿಬ್ಬಂದಿ ಸೇರಿದಂತೆ ಆರೋಗ್ಯ ಕಾರ್ಯಕರ್ತರಿಗೆ ಸೋಂಕು ತಡೆಗಟ್ಟುವ ಪ್ರಾಥಮಿಕ ಗುರಿ ಸಾಧಿಸುವ ಜವಾಬ್ದಾರಿ ನೀಡಿದ್ದು, ಈ ಸೇವೆ - ಕರ್ತವ್ಯಕ್ಕೆ ಧಕ್ಕೆ ತಾರದಿರುವಂತೆ ಸೂಚನೆ ನೀಡಿದೆ.
ಈ ಬಗ್ಗೆ ಸರಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯಭಾಸ್ಕರ್ ಅವರು, ಮತ್ತೊಮ್ಮೆ ನಿರ್ದೇಶನ ನೀಡಿದ್ದಾರೆ. ಇಂತಹ ಸಿಬ್ಬಂದಿಗಳು, ಆರೋಗ್ಯದ ಹಿತದೃಷ್ಟಿಯಿಂದ ಮುಷ್ಕರಗಳು, ಅಸಹಕಾರ, ಅವಿದೇಯತೆ ಅಥವಾ ಆರೋಗ್ಯ ಸೇವೆಗೆ ಸಂಬಂಧಿಸಿದ ಕೆಲಸ ನಿರ್ವಹಿಸಲು ನಿರಾಕರಿಸುವದು, ವರದಿಗಳನ್ನು ಸಲ್ಲಿಸದಿರುವದು, ಆದೇಶ ಪಾಲನೆ ಮಾಡದಿರುವದನ್ನು ನಿಷೇಧಿಸಲಾಗಿದೆ ಎಂದು ಎಚ್ಚರಿಸಿ ಆದೇಶ ಹೊರಡಿಸಿದ್ದಾರೆ.