ಮಡಿಕೇರಿ, ಅ. 6: ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ (ನಬಾರ್ಡ್), ರಾಷ್ಟ್ರದ ಉನ್ನತ ಅಭಿವೃದ್ಧಿ ಹಣಕಾಸು ಸಂಸ್ಥೆ (ಡಿಎಫ್‍ಐ), ದೇಶಾದ್ಯಂತ ಒಂದು ಲಕ್ಷ ಗ್ರಾಮೀಣ ಜನಸಂಖ್ಯೆಯನ್ನು ಒಳಗೊಂಡ 2,000 ಗ್ರಾಮಗಳಲ್ಲಿ ನೈರ್ಮಲ್ಯ ಸಾಕ್ಷರತಾ ಅಭಿಯಾನವನ್ನು ಉತ್ತೇಜಿಸಲು ಡಬ್ಲ್ಯುಎಎಸ್‍ಎಚ್-ನೀರು, ನೈರ್ಮಲ್ಯ ಮತ್ತು ಆರೋಗ್ಯ ಕಾರ್ಯಕ್ರಮವನ್ನು ಪ್ರಾರಂಭಿಸುತ್ತಿದೆ. ಈ ಮಿಷನ್ ರಾಜ್ಯದ ಎಲ್ಲ ಹಳ್ಳಿಗಳಲ್ಲಿ ಉತ್ತಮ ಆರೋಗ್ಯಕರ ಮತ್ತು ನೈರ್ಮಲ್ಯ ಪದ್ಧತಿಗಳ ಬಗ್ಗೆ ಜನಜಾಗೃತಿ ಮೂಡಿಸಲು ನೈರ್ಮಲ್ಯ ಸಾಕ್ಷರತಾ ಅಭಿಯಾನ ನಡೆಸಲು ನಿರ್ಧರಿಸಿದೆ. ಈ ಕಾರ್ಯಕ್ರಮವನ್ನು 2 ಅಕ್ಟೋಬರ್ 2020 ರಿಂದ 26 ಜನವರಿ 2021 ರ ವರೆಗೆ ನಡೆಸಲು ಉದ್ದೇಶಿಸಲಾಗಿದೆ.

‘ಸ್ವಚ್ಛ ಭಾರತ ಮಿಷನ್ (ಎಸ್‍ಬಿಎಂ)’ ಅಡಿಯಲ್ಲಿ ನಬಾರ್ಡ್ ದಿಂದ ಭಾರತ ಸರ್ಕಾರಕ್ಕೆ 3.29 ಕೋಟಿ ಮನೆಯಲ್ಲಿ ಶೌಚಾಲಯಗಳ ನಿರ್ಮಾಣಕ್ಕಾಗಿ ಬೆಂಬಲಿಸಿದೆ. ಇದರಡಿಯಲ್ಲಿ ರೂ.15,000 ಕೋಟಿ ಮಂಜೂರು ಮಾಡಿ, ಇಲ್ಲಿಯವರೆಗೆ ರೂ.12,298 ಕೋಟಿ ಬಿಡುಗಡೆ ಮಾಡಿದೆ.

ಪ್ರಸ್ತುತ ಕೋವಿಡ್-19 ಜಾಗತಿಕ ಸಾಂಕ್ರಾಮಿಕ ಹಿನ್ನೆಲೆಯಲ್ಲಿ ಉತ್ತಮ ನೈರ್ಮಲ್ಯವನ್ನು ಕಾಪಾಡಿಕೊಳ್ಳುವುದು ಅತಿ ಅಗತ್ಯವಾಗಿದೆ. ಕೇಂದ್ರ ಸರ್ಕಾರ, ರಾಜ್ಯ ಸರ್ಕಾರಗಳು ಮತ್ತು ಅಭಿವೃದ್ಧಿ ಹಣಕಾಸು ಸಂಸ್ಥೆಗಳಾದ ನಬಾರ್ಡ್ ಇವುಗಳೆಲ್ಲದರ ಪರಿಶ್ರಮದ ಪರಿಣಾಮವಾಗಿ ಭಾರತವನ್ನು ಬಯಲು ಶೌಚ ಮುಕ್ತ (ಒಡಿಎಫ್) ದೇಶ ಎಂದು ಘೋಷಿಸಲಾಗಿದೆ ಎಂದು ನಬಾರ್ಡ್ ಉಪಮಹಾ ಪ್ರಬಂಧಕ ಶ್ರೀನಿವಾಸ ತಿಳಿಸಿದ್ದಾರೆ.