ದಾಳಿ ಹಿಂದೆ ಲಷ್ಕರ್-ಎ-ತೊಯ್ಬಾ ಕೈವಾಡ

ಶ್ರೀನಗರ, ಅ. 6: ಸಿಆರ್‍ಪಿಎಫ್ ರಸ್ತೆ ಉದ್ಘಾಟನಾ ಕಾರ್ಯಕ್ರಮದ ಸಂದರ್ಭ ನಡೆದ ಮಾರಣಾಂತಿಕ ದಾಳಿಯ ಹಿಂದೆ ಪಾಕ್ ಮೂಲದ ಲಷ್ಕರ್-ಎ-ತೊಯ್ಬಾ ಉಗ್ರ ಸಂಘಟನೆಯ ಕೈವಾಡವಿದೆ ಎಂಬ ಶಂಕೆ ವ್ಯಕ್ತವಾಗಿದೆ. ನೌಗಾಮ್ ಪ್ರದೇಶದಲ್ಲಿ ಜಮ್ಮು-ಶ್ರೀನಗರ ರಾಷ್ಟ್ರೀಯ ಹೆದ್ದಾರಿ ಬಳಿ ಉಗ್ರರು ಸಿಆರ್‍ಪಿಎಫ್ ಯೋಧರ ಮೇಲೆ ದಾಳಿ ನಡೆಸಿದ್ದರು. ಈ ಘಟನೆಯಲ್ಲಿ ಇಬ್ಬರು ಸಿಬ್ಬಂದಿಗಳು ಹುತಾತ್ಮರಾಗಿದ್ದರು ಮೂವರು ತೀವ್ರವಾಗಿ ಗಾಯಗೊಂಡಿದ್ದರು. ಈ ದಾಳಿಯ ಹಿಂದೆ ಇರುವ ಉಗ್ರರನ್ನು ಗುರುತಿಸಿದ್ದೇವೆ. ಅವರು ಲಷ್ಕರ್ ಸಂಘಟನೆಗೆ ಸೇರಿದವರಾಗಿದ್ದು ಸೈಫುಲ್ಲಾ ಎಂಬ ಪಾಕಿ ಭಯೋತ್ಪಾದಕನ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿದ್ದಾರೆ. ಅವರನ್ನು ಶೀಘ್ರವೇ ಹೆಡೆಮುರಿಕಟ್ಟಲಾಗುವುದು ಎಂದು ಕಾಶ್ಮೀರ ಝೋನ್‍ನ ಐಜಿ ವಿಜಯ್‍ಕುಮಾರ್ ತಿಳಿಸಿದ್ದಾರೆ. ಇಬ್ಬರು ಉಗ್ರರು ದ್ವಿಚಕ್ರ ವಾಹನದಲ್ಲಿ ಬಂದು ಎ.ಕೆ. ರೈಫಲ್‍ನಿಂದ ಗುಂಡು ಹಾರಿಸಿದ್ದರು. ಇದೇ ಮಾದರಿಯಲ್ಲಿ ಲಷ್ಕರ್ ಉಗ್ರ ಸಂಘಟನೆ ಬದ್ಗೌಮ್‍ನ ಚಡೂರಾ ಪ್ರದೇಶದಲ್ಲಿ ದಾಳಿ ನಡೆಸಿ ಸಿಆರ್‍ಪಿಎಫ್‍ನ ಸಬ್ ಇನ್ಸ್‍ಪೆಕ್ಟರ್‍ನ್ನು ಹತ್ಯೆ ಮಾಡಿತ್ತು ಎಂದೂ ಐಜಿಪಿ ತಿಳಿಸಿದ್ದಾರೆ.

ಶಬರಿಮಲೆಗೆ ಪ್ರಮಾಣ ಪತ್ರ ಕಡ್ಡಾಯ

ತಿರುವನಂತಪುರಂ, ಅ. 6: ಶಬರಿಮಲೆ ಅಯ್ಯಪ್ಪ ಸ್ವಾಮಿ ದೇವಸ್ಥಾನ ಪ್ರವೇಶಿಸಲು ಭಕ್ತರಿಗೆ ಕೋವಿಡ್-19 ನೆಗೆಟಿವ್ ಪ್ರಮಾಣ ಪತ್ರ ಕಡ್ಡಾಯ ಮಾಡಬೇಕು ಎಂದು ತಜ್ಞರ ಸಮಿತಿ ಕೇರಳ ಸರ್ಕಾರಕ್ಕೆ ಶಿಫಾರಸು ಮಾಡಿದೆ. ಎರಡು ತಿಂಗಳ ವಾರ್ಷಿಕ ಮಂಡಲ ಪೂಜೆ ಮಹೋತ್ಸವ ಮತ್ತು ಮಕರವಿಳಕ್ಕು ಉತ್ಸವ ನ. 16 ರಿಂದ ಆರಂಭವಾಗಲಿದ್ದು, ದೇವಾಲಯ ತೆರೆದ ನಂತರ ಅನುಸರಿಸಬೇಕಾದ ಮಾರ್ಗಸೂಚಿಗಳ ಕುರಿತು ತಜ್ಞರ ಸಮಿತಿ ಸರ್ಕಾರಕ್ಕೆ ವರದಿ ನೀಡಿದ್ದು, ಅದರಲ್ಲಿ ಕೋವಿಡ್-19 ನೆಗೆಟಿವ್ ವರದಿ ಕಡ್ಡಾಯಗೊಳಿಸುವಂತೆಯೂ ಶಿಫಾರಸು ಮಾಡಲಾಗಿದೆ. ಸಮಿತಿಯ ಶಿಫಾರಸುಗಳನ್ನು ಸರ್ಕಾರ ವಿವರವಾಗಿ ಪರಿಶೀಲಿಸಲಿದೆ ಎಂದು ದೇವಸ್ವಂ ಸಚಿವ ಕಡಕಂಪಲ್ಲಿ ಸುರೇಂದ್ರನ್ ಅವರು ಹೇಳಿದ್ದಾರೆ. ಬುಧವಾರ ಸಚಿವ ಸಂಪುಟ ಸಭೆ ಇದ್ದು, ಸಭೆಯಲ್ಲಿ ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಸಚಿವರು ತಿಳಿಸಿದ್ದಾರೆ.

ಹತ್ರಾಸ್ ಪ್ರಕರಣ : ಸುಪ್ರೀಂಕೋರ್ಟ್ ನಿರ್ದೇಶನ

ನವದೆಹಲಿ, ಅ. 6: ಉತ್ತರ ಪ್ರದೇಶದ ಹತ್ರಾಸ್‍ನಲ್ಲಿ ನಡೆದಿರುವ ದಲಿತ ಯುವತಿ ಮೇಲಿನ ಸಾಮೂಹಿಕ ಅತ್ಯಾಚಾರ ಹಾಗೂ ಗಾಯಗಳಿಂದಾಗಿ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಕ್ಷಿಯನ್ನು ರಕ್ಷಿಸಲು ಕೈಗೊಂಡ ಕ್ರಮಗಳ ಕುರಿತು ಗುರುವಾರದೊಳಗೆ ತಿಳಿಸುವಂತೆ ಉತ್ತರ ಪ್ರದೇಶ ಸರ್ಕಾರಕ್ಕೆ ಸುಪ್ರೀಂಕೋರ್ಟ್ ನಿರ್ದೇಶಿಸಿದೆ. ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ಸಂದರ್ಭದಲ್ಲಿ, ರಾಜಕೀಯ ಉದ್ದೇಶಗಳೊಂದಿಗೆ ಈ ಪ್ರಕರಣದ ಬಗ್ಗೆ ಅಪ ಪ್ರಚಾರ ನಡೆಯುತ್ತಿದ್ದು, ಸಿಬಿಐ ತನಿಖೆಗೆ ಬಗ್ಗೆ ಉತ್ತರ ಪ್ರದೇಶ ಸರ್ಕಾರ ಒಲವು ವ್ಯಕ್ತಪಡಿಸಿದ ನಂತರ ಸುಪ್ರೀಂಕೋರ್ಟ್ ಈ ರೀತಿಯ ತೀರ್ಪು ಸೂಚನೆ ನೀಡಿದೆ. ಈ ಘಟನೆಯನ್ನು ಭಯಾನಕ ಮತ್ತು ಅಸಾಧಾರಣ ಎಂದು ಹೇಳಿದ ಮುಖ್ಯ ನ್ಯಾಯಮೂರ್ತಿ ಎಸ್.ಎ. ಬೊಬ್ಡೆ ನೇತೃತ್ವದ ನ್ಯಾಯ ಪೀಠ, ಪ್ರಕರಣದ ತನಿಖೆ ಸುಗಮವಾಗಿ ನಡೆಯಲಿದೆ ಎಂದು ಭರವಸೆ ನೀಡಿತು.

ನಾಲ್ವರು ಅತ್ಯಾಚಾರಿಗಳಿಗೆ ಜೀವಾವಧಿ ಶಿಕ್ಷೆ

ಜೈಪುರ್, ಅ. 6: ರಾಜಸ್ಥಾನದಲ್ಲಿ 2019 ರ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಭಾಗಿಯಾದ ನಾಲ್ವರಿಗೆ ಅಳ್ವಾರ್ ಸ್ಥಳೀಯ ನ್ಯಾಯಾಲಯವು ಜೀವಾವಧಿ ಶಿಕ್ಷೆ ವಿಧಿಸಿದೆ. ಇದೇ ಪ್ರಕರಣದಲ್ಲಿ ಘಟನೆಯ ವೀಡಿಯೋ ತುಣುಕನ್ನು ಚಿತ್ರೀಕರಿಸಿದ ಮತ್ತು ಪ್ರಸಾರ ಮಾಡಿದ್ದಕ್ಕಾಗಿ ಐಟಿ ಕಾಯ್ದೆಯಡಿ ಒಬ್ಬ ಅಪರಾಧಿಗೆ ನ್ಯಾಯಾಲಯ ಐದು ವರ್ಷಗಳ ಜೈಲು ಶಿಕ್ಷೆಯನ್ನು ನೀಡಿತು. ಕಳೆದ ವರ್ಷ ಏ. 26 ರಂದು ತಾನಗಾಜಿ ಅಳ್ವಾರ್ ಬೈಪಾಸ್‍ನ ಖಾಲಿ ನಿವೇಶನದಲ್ಲಿ ಮಹಿಳೆಯೊಬ್ಬಳನ್ನು ಆಕೆಯ ಪತಿಯ ಸಮ್ಮುಖದಲ್ಲೇ ನಾಲ್ವರು ಸೇರಿ ಸಾಮೂಹಿಕ ಅತ್ಯಾಚಾರ ಮಾಡಿದ್ದರು. ಹನ್ಸ್‍ರಾಜ್ ಗುರ್ಜರ್, ಅಶೋಕ್ ಗುಜರ್, ಛೋಟೇಲಾಲ್ ಗುರ್ಜರ್ ಮತ್ತು ಇಂದ್ರಜ್ ಗುರ್ಜರ್ ಅವರುಗಳಿಗೆ ನ್ಯಾಯಾಲಯ ಕಠಿಣ ಜೀವಾವಧಿ ಶಿಕ್ಷೆ ವಿಧಿಸಿದೆ.

ಸಿನಿಮಾ ಪ್ರದರ್ಶನಕ್ಕೆ ಮಾರ್ಗಸೂಚಿ

ನವದೆಹಲಿ, ಅ. 6: ಕೇಂದ್ರ ಸರ್ಕಾರದ ಆದೇಶದಂತೆ ತಾ. 15 ರಿಂದ ಸಿನಿಮಾ, ಥಿಯೇಟರ್, ಮಲ್ಟಿಪ್ಲೆಕ್ಸ್‍ಗಳು ಪುನರಾರಂಭಗೊಳ್ಳಲು ತುದಿಗಾಲಲ್ಲಿ ನಿಂತಿರುವ ನಡುವಲ್ಲೇ ಈ ಕುರಿತ ಮಾರ್ಗಸೂಚಿಯೊಂದನ್ನು ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವಾಲಯ ಪ್ರಕಟಿಸಿದೆ. ಮಾರ್ಗಸೂಚಿಯಲ್ಲಿ ಸಿನಿಮಾ ಮಂದಿರಗಳ ಒಟ್ಟು ಆಸನ ವ್ಯವಸ್ಥೆ ಶೇ. 50 ರಷ್ಟು ಜನರಿಗೆ ಮಾತ್ರ ಪ್ರವೇಶಾವಕಾಶವನ್ನು ನೀಡಲಾಗಿದೆ. ಚಿತ್ರಮಂದಿರಗಳಲ್ಲಿ ಸಚಿವಾಲಯ ಸೂಚಿಸಿರುವ ಕೋವಿಡ್ ಶಿಷ್ಟಾಚಾರವನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡಬೇಕೆಂದು ಸಚಿವ ಪ್ರಕಾಶ್ ಜಾವಡೇಕರ್ ಎಚ್ಚರಿಸಿದ್ದಾರೆ. ಚಿತ್ರಮಂದಿರಗಳಲ್ಲಿ ಸಿನಿಮಾ ಆರಂಭ ಮಾಡುವುದಕ್ಕೂ ಮುನ್ನಾ, ವಿರಾಮದ ವೇಳೆ ಹಾಗೂ ಸಿನಿಮಾ ಪೂರ್ಣಗೊಂಡ ನಂತರ ಕನಿಷ್ಟ ಒಂದು ನಿಮಿಷ-ಅದಕ್ಕಿಂತಲೂ ಹೆಚ್ಚು ಅವಧಿಯಿರುವ ಕೊರೊನಾ ವೈರಸ್ ಕುರಿತು ಜಾಗೃತಿ ಮೂಡಿಸುವ ಕಾರ್ಯಗಳನ್ನು ಮಾಡಬೇಕೆಂದು ತಿಳಿಸಿದ್ದಾರೆ.

ಮುತ್ತಪ್ಪ ರೈ ಮನೆ ಮೇಲೆ ಸಿಸಿಬಿ ದಾಳಿ: ಪುತ್ರ ರಿಕ್ಕಿ ರೈ ವಶಕ್ಕೆ

ಬೆಂಗಳೂರು, ಅ. 6: ಡ್ರಗ್ ಕೇಸ್‍ನಲ್ಲಿ ಈಗಾಗಲೇ ಸಿಸಿಬಿ ಅಧಿಕಾರಿಗಳು ಸಾಕಷ್ಟು ಜನರ ವಿಚಾರಣೆ ನಡೆಸಿದ್ದಾರೆ. ಇದರ ಬೆನ್ನಲ್ಲೇ ಇತ್ತೀಚೆಗೆ ನಿಧನರಾದ ಮುತ್ತಪ್ಪ ರೈ ಅವರ ಮನೆ ಮೇಲೆ ಇಂದು ಮುಂಜಾನೆ ಸಿಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಮುತ್ತಪ್ಪ ರೈ ಮಗ ರಿಕ್ಕಿ ರೈ ಹೆಸರು ಡ್ರಗ್ ಜಾಲದಲ್ಲಿ ಕೇಳಿಬಂದಿರುವ ಹಿನ್ನೆಲೆಯಲ್ಲಿ ಬಿಡದಿ ಹಾಗೂ ಸದಾಶಿವನಗರ ನಿವಾಸದ ಮೇಲೆ ಸಿಸಿಬಿ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಸದಾಶಿವನಗರದ ರಾಜಮಹಲ್ ಅಪಾರ್ಟ್‍ಮೆಂಟ್ ಪ್ಲಾಟ್ ಮೇಲೆ ಸಿಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ವಿಚಾರಣೆಗೆ ಸರಿಯಾಗಿ ಸ್ಪಂದಿಸದ ಮುತ್ತಪ್ಪ ರೈ ಅವರ ಮಗ ರಿಕ್ಕಿ ರೈಯನ್ನು ಸಿಸಿಬಿ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಆದಿತ್ಯ ಆಳ್ವ ಬಗ್ಗೆ ಪ್ರಶ್ನಿಸಿದರೆ ಗೊತ್ತಿಲ್ಲ ಎಂದು ಹಾರಿಕೆ ಉತ್ತರ ನೀಡಿದ ರಿಕ್ಕಿ ರೈನನ್ನು ಸಿಸಿಬಿ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಸ್ಯಾಂಡಲ್‍ವುಡ್ ಡ್ರಗ್ ದಂಧೆಯಲ್ಲಿ ಆರೋಪಿಯಾಗಿದ್ದು, ತಲೆ ಮರೆಸಿಕೊಂಡಿರುವ ಆದಿತ್ಯ ಆಳ್ವನ ಗೆಳೆಯನಾಗಿದ್ದ ರಿಕ್ಕಿ ರೈ ಆತನ ಜೊತೆ ಹೆಚ್ಚು ಒಡನಾಟ ಹೊಂದಿದ್ದರು ಎನ್ನಲಾಗಿದೆ. ಆದಿತ್ಯ ಆಳ್ವನ ರೆಸಾರ್ಟ್‍ನಲ್ಲಿ ಪಾರ್ಟಿಗಳಲ್ಲಿ ಭಾಗವಹಿಸುತ್ತಿದ್ದ ರಿಕ್ಕಿ ಬೆಂಗಳೂರಿನಿಂದ ಆದಿತ್ಯ ರೈ ಎಸ್ಕೇಪ್ ಆಗಿರುವಾಗ ಆತನಿಗೆ ಸಹಕರಿಸಿದ್ದರು ಎಂಬ ಆರೋಪ ಕೇಳಿಬಂದಿದೆ. ಅಷ್ಟೇ ಅಲ್ಲದೆ, ಕೆಲ ಡ್ರಗ್ ಪೆಡ್ಲರ್‍ಗಳ ಜೊತೆ ಸಂಪರ್ಕವಿರೋ ಹಿನ್ನೆಲೆ ಸಂಪೂರ್ಣ ಮಾಹಿತಿ ಕಲೆ ಹಾಕಿರುವ ಸಿಸಿಬಿ ಪೆÇಲೀಸರು, ನ್ಯಾಯಾಲಯದಿಂದ ಸರ್ಚ್ ವಾರಂಟ್ ಪಡೆದು ಇಂದು ಬೆಳಿಗ್ಗೆ 6:30 ಕ್ಕೆ ಮುತ್ತಪ್ಪ ರೈ ಅವರ ಎರಡೂ ಮನೆಗಳಿಗೆ ದಾಳಿ ಮಾಡಲಾಗಿದೆ. ಎಸಿಬಿ ವೇಣುಗೋಪಾಲ್ ನೇತೃತ್ವದಲ್ಲಿ ಶೋಧ ಕಾರ್ಯ ನಡೆಯುತ್ತಿದೆ.

ಐಪಿಎಲ್ ಬೆಟ್ಟಿಂಗ್ : ನಾಲ್ವರ ಬಂಧನ

ಬೆಂಗಳೂರು, ಅ. 6: ಐಪಿಎಲ್ ಬೆಟ್ಟಿಂಗ್ ದಂಧೆ ನಡೆಸುತ್ತಿದ್ದ ನಾಲ್ವರನ್ನು ಕೇಂದ್ರ ಅಪರಾಧ ವಿಭಾಗದ ಪೆÇಲೀಸರು ಬಂಧನಕ್ಕೊಳಪಡಿಸಿದ್ದಾರೆ. ಬೆಟ್ಟಿಂಗ್ ಆ್ಯಂಪ್‍ಗಳನ್ನು ಬಳಸಿಕೊಂಡೇ ಸಿಸಿಬಿ ಪೆÇಲೀಸರು ನಗರದ ಪುಟ್ಟೇನಹಳ್ಳಿ, ಕೋಣನಕುಂಟೆ ಮತ್ತು ಬ್ಯಾಟರಾಯನಪುರ ಮೂರು ಪ್ರದೇಶಗಳ ಮೇಲೆ ದಾಳಿ ನಡೆಸಿದ್ದು ನಾಲ್ವರು ಆರೋಪಿಗಳನ್ನು ಬಂಧನಕ್ಕೊಳಪಡಿಸಿದ್ದಾರೆಂದು ಅಪರಾಧ ವಿಭಾಗದ ಜಂಟಿ ಪೆÇಲೀಸ್ ಆಯುಕ್ತ ಸಂದೀಪ್ ಪಾಟೀಲ್ ಅವರು ಹೇಳಿದ್ದಾರೆ. ಬಂಧಿತ ಆರೋಪಿಗಳಿಂದ ರೂ. 4,91,510 ನಗದು, 6 ಮೊಬೈಲ್ ಫೆÇೀನ್‍ಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಸೆಪ್ಟೆಂಬರ್ 19 ರಿಂದ ಐಪಿಎಲ್ 2020 ಆರಂಭವಾಗಿದ್ದು, ನವೆಂಬರ್ 10 ರವರೆಗೂ ನಡೆಯಲಿದೆ. ಯುಎಇ - ಅಬುಧಾಬಿ, ಶಾರ್ಜಾ ಮತ್ತು ದುಬೈನಲ್ಲಿ ಪಂದ್ಯಗಳು ನಡೆಯುತ್ತಿವೆ.