ಭಾಗಮಂಡಲ, ಅ. 4: ತುಲಾ ಸಂಕ್ರಮಣ ಕಾವೇರಿ ಜಾತ್ರೆಯ ಕಟ್ಟುಪಾಡುಗಳೊಂದಿಗೆ ಇಂದು ಆಜ್ಞಾ ಮುಹೂರ್ತ ಜಾರಿಗೊಂಡಿತು. ಇಲ್ಲಿನ ಶ್ರೀ ಭಗಂಡೇಶ್ವರ ಸನ್ನಿಧಿಯಲ್ಲಿ ವಿಶೇಷ ಪ್ರಾರ್ಥನೆ ಬಳಿಕ ತಕ್ಕ ಕುಟುಂಬದ ಬಳ್ಳಡ್ಕ ಅಪ್ಪಾಜಿ ಅವರು ಕಟ್ಟುಪಾಡುಗಳನ್ನು ವಿವರಿಸಿದರು.ಕಾವೇರಿ ತೀಥೋಧ್ಭವಕ್ಕೆ ಕೆಲವೇ ದಿನಗಳು ಬಾಕಿ ಉಳಿದಿರುವಂತೆ ತುಲಾಸಂಕ್ರಮಣದ ಕಟ್ಟು ವಿಧಿಸುವ ಕಾರ್ಯ ಜರುಗಿತು. ತಕ್ಕ ಮುಖ್ಯಸ್ಥರು, ಅರ್ಚಕರು (ಮೊದಲ ಪುಟದಿಂದ) ಹಾಗೂ ತಲಕಾವೇರಿ ಭಗಂಡೇಶ್ವರ ದೇವಾಲಯದ ಸಮಿತಿ ಸದಸ್ಯರು ಸೇರಿ ಸ್ಥಳೀಯ ತೋಟಕ್ಕೆ ತೆರಳಿ ಬಾಳೆಗೊನೆ ಕಡಿದು ನಾದ ಸ್ವರದೊಂದಿಗೆ ಮೆರವಣಿಗೆ ಮೂಲಕ ಭಗಂಡೇಶ್ವರ ದೇವಾಲಯದ ಸನ್ನಿಧಿಗೆ ಬಂದು ಧಾರ್ಮಿಕ ವಿಧಿವಿಧಾನಗಳೊಂದಿಗೆ ತಪ್ಪಡ್ಕ (ಕಟ್ಟುಬೀಳುವುದು) ವಿಧಿಸಲಾಯಿತು. ಇಂದಿನಿಂದ ಜಾತ್ರೆ ಮುಗಿಯು ವವರೆಗೆ ನಾಡಿನಲ್ಲಿ ಮದುಮಾಂಸ ಸೇವನೆ, ಮರ ಕಡಿಯುವುದು, ಬಲಿ, ಹಿಂಸಾಕೃತ್ಯಗಳನ್ನು ನಡೆಸುವುದು ಮುಂತಾದ ಕುರಿತು ನಿರ್ಬಂಧ ಹೇರಲಾಗಿದೆ. ಬೆಳಿಗ್ಗೆ 10.33ಕ್ಕೆ ವೃಶ್ಚಿಕ ಲಗ್ನದಲ್ಲಿ ಆಜ್ಞಾಮುಹೂರ್ತ ನೆರವೇರಿಸಲಾಯಿತು. ಇದೇ ತಾ. 14 ರಂದು ಧನುರ್ ಲಗ್ನದಲ್ಲಿ ಅಕ್ಷಯಪಾತ್ರೆಗೆ ಅಕ್ಕಿ ಹಾಕುವ ಕಾರ್ಯ ನೆರವೇರಲಿದೆ.

ಇಂದು ತಕ್ಕರಾದ ಬಳ್ಳಡ್ಕ ಅಪ್ಪಾಜಿ, ಕೋಡಿ ಮೋಟಯ್ಯ, ಭಾಗಮಂಡಲ ತಲಕಾವೇರಿ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಬಿದ್ದಾಟಂಡ ತಮ್ಮಯ್ಯ, ಸದಸ್ಯರಾದ ಮೀನಾಕ್ಷಿ, ಪ್ರಮುಖರಾದ ಹೊಸೂರು ಸತೀಶ್ ಕುಮಾರ್, ದೇವಂಗೋಡಿ ಹರ್ಷ, ಭಾಸ್ಕರ, ಪಾರುಪತ್ತೆಗಾರ ಪೊನ್ನಣ್ಣ ಹಾಗೂ ಸ್ಥಳೀಯರು ಪಾಲ್ಗೊಂಡಿದ್ದರು.