ರಾಜ್ಯದಲ್ಲಿ 10,145 ಮಂದಿಗೆ ಸೋಂಕು
ಬೆಂಗಳೂರು, ಅ. 4: ಇಂದು ರಾಜ್ಯದಲ್ಲಿ ಮತ್ತೆ ಕೊರೊನಾ ಪ್ರಕರಣಗಳ ಸಂಖ್ಯೆ 10 ಸಾವಿರದ ಗಡಿ ದಾಟಿದೆ. ರಾಜ್ಯದಲ್ಲಿ ಇವತ್ತು 10,145 ಮಂದಿಗೆ ಸೋಂಕು ತಗುಲಿದ್ದು, ಒಟ್ಟು ಪ್ರಕರಣಗಳ ಸಂಖ್ಯೆ 6,40,661ಕ್ಕೆ ಏರಿಕೆಯಾಗಿದೆ. ಇಂದು ಕೊರೊನಾಗೆ 67 ಸೋಂಕಿತರು ಬಲಿಯಾಗಿದ್ದು, 7,287 ಮಂದಿ ಡಿಸ್ಚಾರ್ಜ್ ಆಗಿದ್ದಾರೆ. ರಾಜ್ಯದಲ್ಲಿ ಸದ್ಯ 1,15,574 ಸೋಂಕಿತರು ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. 847 ಸೋಂಕಿತರು ಐಸಿಯುನಲ್ಲಿ ದಾಖಲಾಗಿದ್ದಾರೆ. ಕೊರೊನಾದಿಂದ ಸಾವನ್ನಪ್ಪಿದವರ ಸಂಖ್ಯೆ 9,286ಕ್ಕೆ ಏರಿಕೆ ಕಂಡಿದೆ.
ನಿವೃತ್ತ ನ್ಯಾಯಾಧೀಶರ ಮೂಲಕ ತನಿಖೆ
ಹತ್ರಾಸ್, ಅ. 4: ಸಾಮೂಹಿಕ ಅತ್ಯಾಚಾರದಿಂದ 19 ವರ್ಷದ ಯುವತಿ ಮೃತಪಟ್ಟಿರುವ ಪ್ರಕರಣವನ್ನು ಸುಪ್ರೀಂಕೋರ್ಟ್ನ ನಿವೃತ್ತ ನ್ಯಾಯಾಧೀಶರ ಮೂಲಕ ತನಿಖೆ ನಡೆಸಬೇಕು ಎಂದು ಸಂತ್ರಸ್ತೆಯ ಸಹೋದರ ಒತ್ತಾಯಿಸಿದ್ದಾರೆ. ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಜಿಲ್ಲಾ ಮ್ಯಾಜಿಸ್ಟ್ರೇಟ್ ಅವರನ್ನು ಸೇವೆಯಿಂದ ಅಮಾನತು ಮಾಡಬೇಕೆಂದು ಆಗ್ರಹಿಸಿದರು. ಸಂತ್ರಸ್ತೆಯ ತಂದೆಯ ಆರೋಗ್ಯ ಕ್ಷೀಣಿಸಿರುವ ಹಿನ್ನೆಲೆ ಎಸ್ಐಟಿಯ ಮನವಿ ಮೇರೆಗೆ ವೈದ್ಯಕೀಯ ತಂಡವೊಂದು ಇಂದು ಬೆಳಿಗ್ಗೆ ಸಂತ್ರಸ್ತೆಯ ನಿವಾಸಕ್ಕೆ ಭೇಟಿ ನೀಡಿತು. ಹತ್ಯೆ ಪ್ರಕರಣದ ಬಗ್ಗೆ ಎಸ್ಐಟಿ ತನಿಖೆ ನಡೆಸುತ್ತಿದ್ದು, ಸಂತ್ರಸ್ತೆಯ ಕುಟುಂಬ ಸದಸ್ಯರ ಹೇಳಿಕೆಯನ್ನು ದಾಖಲು ಮಾಡಿಕೊಂಡಿದೆ. ಸಾಮೂಹಿಕ ಅತ್ಯಾಚಾರ ಮತ್ತು ಹತ್ಯೆ ಪ್ರಕರಣದ ಬಗ್ಗೆ ಸಿಬಿಐ ತನಿಖೆಗೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಶಿಫಾರಸು ಮಾಡಿದ್ದು, ಎಸ್.ಪಿ. ವಿನೀತ್ ಜೈಸ್ವಾಲ್ ಕೂಡಾ ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದಾರೆ.
25 ಕೋಟಿ ಮಂದಿಗೆ ಕೊರೊನಾ ಲಸಿಕೆ
ನವದೆಹಲಿ, ಅ. 4: 2021 ರ ಜುಲೈ ವೇಳೆಗೆ ಭಾರತದ 25 ಕೋಟಿ ಮಂದಿಗೆ ಕೊರೊನಾ ಲಸಿಕೆ ಲಭ್ಯವಾಗಲಿದೆ ಎಂದು ಕೇಂದ್ರ ಆರೋಗ್ಯ ಸಚಿವ ಡಾ. ಹರ್ಷವರ್ಧನ್ ತಿಳಿಸಿದ್ದಾರೆ. ತಾ. 4 ರಂದು ಸಾಮಾಜಿಕ ಜಾಲತಾಣದ ಮೂಲಕ ಸಂಡೇ ಸಂವಾದ್ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿರುವ ಕೇಂದ್ರ ಸಚಿವರು, ಕೋವಿಡ್-19ಗೆ ಸಂಬಂಧಿಸಿದಂತೆ ಮುನ್ನೆಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಆರೋಗ್ಯ ಕಾರ್ಯಕರ್ತರು, ಸಿಬ್ಬಂದಿಗಳಿಗೆ ಪ್ರಥಮ ಆದ್ಯತೆಯಾಗಿ ಕೋವಿಡ್-19 ಲಸಿಕೆಗಳನ್ನು ನೀಡಲಾ ಗುತ್ತದೆ. ಈ ವಿಭಾಗದ ಆದ್ಯತೆಯ ನಾಗರಿಕರಿಗೆ ಕೋವಿಡ್-19 ಲಸಿಕೆ ಅಕ್ಟೋಬರ್ ಅಂತ್ಯದ ವೇಳೆಗೆ ಲಭ್ಯವಾಗಲಿದೆ ಎಂದು ಡಾ. ಹರ್ಷವರ್ಧನ್ ಮಾಹಿತಿ ನೀಡಿದ್ದಾರೆ. ಇನ್ನು ಸರ್ಕಾರ 2021 ರ ಜುಲೈ ವೇಳೆಗೆ 130 ಕೋಟಿ ಭಾರತೀಯರ ಪೈಕಿ 25 ಕೋಟಿ ಭಾರತೀಯರಿಗೆ ಕೋವಿಡ್-19 ಲಸಿಕೆಯನ್ನು ನೀಡುವ ಗುರಿ ಹೊಂದಿದೆ ಇದಕ್ಕಾಗಿ 400-500 ಡೋಸ್ ಲಸಿಕೆ ಸರ್ಕಾರ ಪಡೆದುಕೊಳ್ಳುತ್ತಿದೆ ಎಂದು ಹರ್ಷವರ್ಧನ್ ತಿಳಿಸಿದ್ದಾರೆ.
ತಾ. 12 ರಂದು ಭಾರತ-ಚೀನಾ ಮಾತುಕತೆ
ನವದೆಹಲಿ, ಅ. 4: ಪೂರ್ವ ಲಡಾಕ್ ಗಡಿಯಲ್ಲಿ ಮುಂದುವರಿದಿರುವ ಸೇನೆ ನಿಲುಗಡೆ, ಉದ್ವಿಗ್ನ ವಾತಾವರಣವನ್ನು ತಗ್ಗಿಸಲು 7ನೇ ಸುತ್ತಿನ ಭಾರತ-ಚೀನಾ ದೇಶಗಳ ಕಾಪ್ರ್ಸ್ ಕಮಾಂಡರ್ ಮಟ್ಟದ ಮಾತುಕತೆ ತಾ. 12 ರಂದು ಏರ್ಪಡಲಿದೆ. ಎರಡೂ ದೇಶಗಳ ಮಧ್ಯೆ ಮುಂದುವರಿದಿರುವ ಸೇನೆ ನಿಲುಗಡೆ ಪರಿಸ್ಥಿತಿ ಕುರಿತು ಚರ್ಚೆ ನಡೆಸಲು ಪೂರ್ವ ಲಡಾಕ್ ವಲಯದಲ್ಲಿ ಕಮಾಂಡರ್ ಮಟ್ಟದ ಮಾತುಕತೆ ತಾ. 12 ರಂದು ನಡೆಯಲಿದೆ. ಇದುವರೆಗೆ ಎರಡೂ ದೇಶಗಳು ಮಧ್ಯೆ 6 ಸುತ್ತಿನ ಕಾಪ್ರ್ಸ್ ಕಮಾಂಡರ್ ಮಟ್ಟದ ಮಾತುಕತೆ ನಡೆದಿದೆ ಎಂದು ಭಾರತೀಯ ಸೇನೆಯ ಮೂಲಗಳು ತಿಳಿಸಿವೆ. ಗಾಲ್ವಾನ್ ಕಣಿವೆ ತನಗೆ ಸೇರಿದ್ದು ಎಂಬುದು ಚೀನಾದ ಪ್ರತಿಪಾದನೆಯಾಗಿದೆ. ಆದರೆ ಭಾರತ ಅದನ್ನು ತಿರಸ್ಕರಿಸಿದೆ. ಗಾಲ್ವಾನ್ ಕಣಿವೆಯ ಮೇಲಿನ ಹಕ್ಕು ಈ ಹಿಂದೆ ತನ್ನದೇ ಆದ ಸ್ಥಾನಕ್ಕೆ ಅನುಗುಣವಾಗಿರಲಿಲ್ಲ ಎಂದು ಭಾರತ ಹೇಳುತ್ತದೆ, ಚೀನಾದ ಕಡೆಯಿಂದ ಉಲ್ಲಂಘನೆಯ ಪ್ರಯತ್ನಗಳು ಸತತವಾಗಿ ನಡೆಯುತ್ತಿದೆ ಅದಕ್ಕೆ ಇದುವರೆಗೆ ಭಾರತೀಯ ಸೇನೆ ತಕ್ಕ ಪ್ರತ್ಯುತ್ತರ ನೀಡುತ್ತಾ ಬಂದಿದೆ.
ಅಂಬಾರಿ ಆನೆಗಳಿಗೆ ಕ್ವಾರಂಟೈನ್
ಮೈಸೂರು, ಅ. 4: ಕೊರೊನಾ ಸೋಂಕು ತಗುಲುವ ಭೀತಿ ಹಿನ್ನೆಲೆ ಈ ಬಾರಿಯ ದಸರಾ ವೇಳೆ ಅಂಬಾರಿ ಹೊರುವ ಆನೆಗಳನ್ನು ಕ್ವಾರಂಟೈನ್ನಲ್ಲಿ ರಿಸಲಾಗಿದೆ. ಆನೆಗಳ ತೂಕಗಳಿಗೂ ಹೊರಗೆ ಕರೆದೊಯ್ಯಲಾಗುತ್ತಿಲ್ಲ. ಅರಣ್ಯ ಇಲಾಖೆ ಕೂಡ ಕೆಲ ಕಾರ್ಯವಿಧಾನಗಳನ್ನು ಕೈಬಿಟ್ಟಿದ್ದು, ಆನೆಗಳು, ಮಾವುತರು ಹಾಗೂ ಕಾವಾಡಿಗಳೂ ಕೂಡ ವಿಹಾರಗಳಿಗೆ ತೆರಳದಂತೆ ಕಟ್ಟುನಿಟ್ಟಿನ ನಿಯಗಳನ್ನು ಜಾರಿ ಮಾಡಿದ್ದಾರೆ. ಕೊರೊನಾ ಸೋಂಕು ಹೆಚ್ಚಾಗುತ್ತಿರುವ ಹಿನ್ನೆಲೆ ಅರಣ್ಯ ಉಪ ಸಂರಕ್ಷಣಾಧಿಕಾರಿ (ವನ್ಯಜೀವಿ) ಜೆ. ಅಲೆಕ್ಸಾಂಡರ್ ಅವರು ಈ ಬಾರಿ ಹೆಚ್ಚಿನ ಎಚ್ಚರಿಕೆ ವಹಿಸುತ್ತಿದ್ದಾರೆ. ಆನೆಗಳು ಹುಣಸೂರಿನ ವೀರನಹೊಸಹಳ್ಳಿಯಿಂದ ಹೊರಡುವಾಗ ಈಗಾಗಲೇ ತೂಗುತ್ತಿವೆ ಎಂದು ಹೇಳಿದ್ದಾರೆ.
ದಿ. ಡಿ.ಕೆ. ರವಿ ಪತ್ನಿ ಕಾಂಗ್ರೆಸ್ ಸೇರ್ಪಡೆ
ಬೆಂಗಳೂರು, ಅ. 4: ಮಹತ್ವದ ರಾಜಕೀಯ ಬೆಳವಣಿಗೆಯಲ್ಲಿ ಐಎಎಸ್ ಅಧಿಕಾರಿ ದಿ. ಡಿ.ಕೆ. ರವಿ ಅವರ ಪತ್ನಿ ಹೆಚ್. ಕುಸುಮಾ ಇಂದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ. ಕುಸುಮಾ ಅವರು ತಂದೆ ಹನುಮಂತರಾಯಪ್ಪ ಅವರೊಡನೆ ಕೆಪಿಸಿಸಿ ಕಚೇರಿಗೆ ಆಗಮಿಸಿದಾಗ ಕಾಂಗ್ರೆಸ್ ಕಾರ್ಯಕರ್ತರು ಅವರನ್ನು ಆದರದಿಂದ ಬರಮಾಡಿಕೊಂಡರು. ಬಳಿಕ ಕುಸುಮಾ ಅವರು ತಾವು ಪಕ್ಷಕ್ಕೆ ಸೇರ್ಪಡೆಯಾಗಿರುವ ಸಂಬಂಧ ಸದಸ್ಯತ್ವ ಅರ್ಜಿಯನ್ನು ಪಕ್ಷದ ರಾಜ್ಯಾಧ್ಯಕ್ಷ ಡಿ.ಕೆ. ಶಿವಕುಮಾರ್ ಅವರಿಗೆ ನೀಡಿದ್ದಾರೆ. ಮಾಜಿ ಸಿಎಂ ಸಿದ್ದರಾಮಯ್ಯ, ಮಾಜಿ ಡಿಸಿಎಂ ಜಿ. ಪರಮೇಶ್ವರ್ ಮೊದಲಾದ ನಾಯಕರು ಈ ಸಂದರ್ಭ ಹಾಜರಿದ್ದರು. ಸದ್ಯದಲ್ಲೇ ಬೆಂಗಳೂರು ರಾಜ ರಾಜೇಶ್ವರಿ ನಗರ ಹಾಗೂ ತುಮಕೂರಿನ ಶಿರಾ ಕ್ಷೇತ್ರಗಳಿಗೆ ಉಪ ಚುನಾವಣೆ ನಡೆಯಲಿರುವ ಹಿನ್ನೆಲೆ ಡಿ.ಕೆ. ರವಿ ಅವರ ಪತ್ನಿ ಕುಸುಮಾ ಅವರ ಕಾಂಗ್ರೆಸ್ ಸೇರ್ಪಡೆ ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದೆ.
ಹೃದ್ರೋಗ ತಜ್ಞ ಡಾ. ಆನಂದ್ ನಿಧನ
ಮಂಗಳೂರು, ಅ. 4: ಖ್ಯಾತ ಹೃದ್ರೋಗ ತಜ್ಞ ಡಾ. ಆನಂದ್ ವೀರಣ್ಣ ಶೆಟ್ಟಿ ಅವರು ತಮ್ಮ ನಿವಾಸದಲ್ಲಿ ನಿಧನ ಹೊಂದಿದ್ದಾರೆ ಎಂದು ಅವರ ಕುಟುಂಬ ಮೂಲಗಳು ತಿಳಿಸಿವೆ. ಅವರಿಗೆ 85 ವರ್ಷ ವಯಸ್ಸಾಗಿತ್ತು. ಮೃತರು ಪತ್ನಿ ಚಂದ್ರ ಮತ್ತು ಇಬ್ಬರು ಪುತ್ರಿಯರು, ಒಬ್ಬ ಪುತ್ರನನ್ನು ಅಗಲಿದ್ದಾರೆ. ಕುಂದಾಪುರ ಮೂಲದ ಡಾ. ಎ.ವಿ. ಶೆಟ್ಟಿ ದಕ್ಷಿಣ ಕನ್ನಡ ಜಿಲ್ಲೆಯ ಖ್ಯಾತ ವೈದ್ಯರಾಗಿ ಮತ್ತು ಜಿಲ್ಲೆಯ ಮೊದಲ ಹೃದ್ರೋಗ ತಜ್ಞರಾಗಿ ಗುರುತಿಸಿಕೊಂಡು ಹೆಸರುವಾಸಿಯಾಗಿದ್ದರು. ಮುಂಬೈ ವಿಶ್ವವಿದ್ಯಾಲಯದಿಂದ `ಪ್ರಿನ್ಸ್ ಆಫ್ ವೇಲ್ಸ್' ಚಿನ್ನದ ಪದಕ ಪಡೆದಿದ್ದರು. ಮಂಗಳೂರಿನ ಸರ್ಕಾರಿ ವೆನ್ಲಾಕ್ ಆಸ್ಪತ್ರೆಯಲ್ಲಿ ನಡೆದ ರಾಜ್ಯದ ಮೊದಲ ತೆರೆದ ಹೃದಯ ಶಸ್ತ್ರಚಿಕಿತ್ಸೆ ಶೆಟ್ಟಿ ಅವರ ನೇತೃತ್ವದಲ್ಲಿ ನಡೆದಿತ್ತು. 1962 ರಲ್ಲಿ ಎಡಿನ್ಬರ್ಗ್ನ ರಾಯಲ್ ಕಾಲೇಜ್ ಆಫ್ ಫಿಸಿಶಿಯನ್ಸ್ನಲ್ಲಿ ಅಧ್ಯಯನ ಮಾಡಿದ್ದ ಶೆಟ್ಟಿ 1963 ರಲ್ಲಿ ಎಂಆರ್ಸಿಪಿ ಪದವಿಯನ್ನು ಪೂರ್ಣಗೊಳಿಸಿದರು ಮತ್ತು 1974 ರಲ್ಲಿ ಎಫ್ಆರ್ಸಿಪಿ ಪದವಿಯನ್ನು ಪಡೆದರು. ಅವರು ಮಂಗಳೂರಿನ ಕಸ್ತೂರ್ಬಾ ವೈದ್ಯಕೀಯ ಕಾಲೇಜಿನಲ್ಲಿ ಹೃದ್ರೋಗ ವಿಭಾಗದ ಪ್ರಾಧ್ಯಾಪಕರಾಗಿ 25 ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತರಾದ ನಂತರ ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ಹೃದ್ರೋಗ ವಿಭಾಗದ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದರು. ಅಲ್ಲದೆ ಕಾರ್ ಸ್ಟ್ರೀಟ್ನ ಟೆಂಪಲ್ ಸ್ಕ್ವೇರ್ನಲ್ಲಿ ಕಾರ್ಯನಿರತ ಸಮಾಲೋಚಕರಾಗಿ ಸಹ ಅವರು ಕೆಲಸ ಮಾಡಿದ್ದರು.
ಕಾಲುವೆಗೆ ಬಿದ್ದು ಇಬ್ಬರ ಸಾವು
ಹೊಸಪೇಟೆ, ಅ. 4: ಬಾಟಲಿಗೆ ನೀರು ತುಂಬಿಸಿಕೊಳ್ಳಲು ಕಾಲುವೆಗೆ ಇಳಿದ ಇಬ್ಬರು ಯುವಕರು ನೀರು ಪಾಲಾಗಿರುವ ಘಟನೆ ಬಳ್ಳಾರಿ ಜಿಲ್ಲೆ ಹೊಸಪೇಟೆ ತಾಲೂಕಿನಲ್ಲಿ ನಡೆದಿದೆ. ಹೊಸಪೇಟೆಯ ತುಂಗಭದ್ರ ಆರ್.ಬಿ.ಹೆಚ್.ಎಲ್.ಸಿ. ಕಾಲುವೆಯಲ್ಲಿ ಬಿದ್ದ ಇಬ್ಬರು ಯುವಕರು ನೀರು ಪಾಲಾಗಿದ್ದಾರೆ. ಮೃತ ಯುವಕರನ್ನು ಸಂಡೂರಿನ ಕಿರಣ್ (23) ಮತ್ತು ಅಬ್ದುಲ್ಲಾ (23) ಎಂದು ಗುರುತಿಸಲಾಗಿದೆ. ಮೂಲಗಳ ಪ್ರಕಾರ ಹೊಸಪೇಟೆ ಯಿಂದ ಸಂಡೂರಿಗೆ ಹಿಂತಿರುಗುವಾಗ ಕಾಲುವೆಗೆ ಇಳಿದು ಬಾಟಲಿಗೆ ನೀರು ತುಂಬಿಕೊಳ್ಳಲು ಹೋದ ಕಿರಣ್, ಅಲ್ಲಿಯೇ ಕಾಲು ಜಾರಿ ನೀರಿಗೆ ಬಿದ್ದಿದ್ದಾನೆ. ಈ ವೇಳೆ ಸ್ನೇಹಿತನ ರಕ್ಷಣೆಗೆ ಮುಂದಾದ ಅಬ್ದುಲ್ಲಾ ಸಹ ನೀರಿನಲ್ಲಿ ಹೋಗಿದ್ದಾನೆ. ಈ ಸಂಬಂಧ ಯಾವುದೇ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿಲ್ಲ.