ಮಡಿಕೇರಿ, ಅ. 4: ಕೊಡಗಿನಲ್ಲಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಯೋಜನೆಯ ಬಗ್ಗೆ ತಮಗೇನು ತಿಳಿದಿಲ್ಲವೆಂದು ಆರೋಗ್ಯ ಸಚಿವ ಶ್ರೀರಾಮುಲು ಅವರು ನೀಡಿದ ಹೇಳಿಕೆಗೆ ಕೆಪಿಸಿಸಿ ವಕ್ತಾರ ಎ.ಎಸ್. ಪೊನ್ನಣ್ಣ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸಚಿವ ಶ್ರೀರಾಮುಲು ಅವರು ಕೊಡವ ಭಾಷೆಯಲ್ಲೇ ಮಲ್ಟಿ ಸ್ಪೆÉಷಾಲಿಟಿ ಆಸ್ಪತ್ರೆಯ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಭರವಸೆ ನೀಡಿದ್ದರು. ಅಲ್ಲದೆ, ಸಂಸದ ಪ್ರತಾಪಸಿಂಹ ಅವರು ಕೂಡ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಬಗ್ಗೆ ವಿವರಿಸಿದ್ದಾರೆ ಎಂದು ಸುದ್ದಿಗೋಷ್ಠಿಯಲ್ಲಿ ಅವರು ನೆನಪಿಸಿದರು.
ರಾಜ್ಯದಲ್ಲಿ ಕುರುಡು ಸರ್ಕಾರ ಮತ್ತು ಕುರುಡು ಆರೋಗ್ಯ ಸಚಿವರಿದ್ದಾರೆ ಎಂದು ಆರೋಪಿಸಿದ ಪೊನ್ನಣ್ಣ, ಸರ್ಕಾರ ತಕ್ಷಣ ಈ ಹಿಂದೆ ನೀಡಿದ ಭರವಸೆಯಂತೆ ಕೊಡಗು ಜಿಲ್ಲೆಗೆ ಆಗತ್ಯವಾಗಿ ಬೇಕಾಗಿರುವ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ಯೋಜನೆಯನ್ನು ಅನುಷ್ಟಾನಗೊಳಿಸಬೇಕೆಂದು ಒತ್ತಾಯಿಸಿದರು.
ಶಾಸಕರೊಬ್ಬರು ಜಿಲ್ಲೆಯ ರಸ್ತೆಗಳು ಮೇಲ್ದರ್ಜೆಗೇರುತ್ತದೆ ಎಂದು ಹೇಳಿಕೆ ನೀಡಿದ್ದಾರೆ. ಆದರೆ, ಜಿಲ್ಲೆಯಲ್ಲಿ ಮೂಲಭೂತವಾಗಿ ಬೇಕಾಗಿರುವ ರಸ್ತೆ ಮತ್ತು ಆಸ್ಪತ್ರೆಯ ವ್ಯವಸ್ಥೆಯೆ ಇಲ್ಲದಾಗಿದೆ ಎಂದು ಟೀಕಿಸಿದರು.
ತಮ್ಮ ಬಗ್ಗೆ ಜಿಲ್ಲಾ ಬಿಜೆಪಿ ಮಾಡಿರುವ ಟೀಕೆಗೆ ಸ್ಪಷ್ಟೀಕರಣ ನೀಡಿದ ಪೊನ್ನಣ್ಣ, ಕೆಪಿಸಿಸಿ ರಾಜ್ಯಾಧ್ಯಕ್ಷ ಡಿ.ಕೆ.ಶಿವಕುಮಾರ್ ಹಾಗೂ ಬಿಜೆಪಿಯ ಸಿ.ಪಿ.ಯೋಗೇಶ್ವರ್ ಅವರ ಪ್ರಕರಣದಲ್ಲಿ ಸಾಕಷ್ಟು ವ್ಯತ್ಯಾಸಗಳಿದೆ. ಶಿವಕುಮಾರ್ ಜನರಿಂದ ಆಯ್ಕೆಯಾಗಿ ಬಂದಿರುವ ಪ್ರತಿನಿಧಿಯಾಗಿದ್ದು, ಯೋಗೇಶ್ವರ್ ಅವರನ್ನು ಮೇಲ್ಮನೆಗೆ ನೇಮಕ ಮಾಡಲಾಗಿದೆ. ಕಾನೂನಿನ ಅರಿವಿಲ್ಲದೆ ಬಿಜೆಪಿ ಮಂದಿ ಹೇಳಿಕೆ ನೀಡುವುದು ಸರಿಯಲ್ಲವೆಂದು ಹೇಳಿದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ.ಕೆ.ಮಂಜುನಾಥ್ ಕುಮಾರ್ ಮಾತನಾಡಿ, ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರ ಮಾಧ್ಯಮಗಳನ್ನು ತನ್ನ ಕಪಿ ಮುಷ್ಠಿಯಲ್ಲಿಡಬೇಕೆನ್ನುವ ಹಠಕ್ಕೆ ಜೋತು ಬಿದ್ದಿದೆಯೆಂದು ಆರೋಪಿಸಿದರು. ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಜಿಲ್ಲಾ ವಕ್ತಾರರುಗಳಾದ ಟಾಟು ಮೊಣ್ಣಪ್ಪ, ಮುನೀರ್ ಅಹಮ್ಮದ್, ಟಿ.ಈ.ಸುರೇಶ್ ಹಾಗೂ ಕಾಂಗ್ರೆಸ್ ಕಿಸಾನ್ ಘಟಕದ ಜಿಲ್ಲಾಧ್ಯಕ್ಷ ನೆರವಂಡ ಉಮೇಶ್ ಉಪಸ್ಥಿತರಿದ್ದರು.