ಪೆರಾಜೆ, ಅ. 5: ಮಾನವನಿಗೆ ಆಲೋಚನೆ, ಆಸಕ್ತಿಗಳನ್ನು ಅಭಿವ್ಯಕ್ತ ಪಡಿಸಲು ಭಾಷೆಯು ಪ್ರಮುಖ ಪಾತ್ರವನ್ನು ವಹಿಸುತ್ತದೆ, ಭಾಷೆಯ ಮೇಲಿನ ಪ್ರೀತಿ ಇದ್ದಾಗ ಮಾತ್ರ ಒಂದು ಭಾಷೆ ಉಳಿಯಲು ಸಾಧ್ಯ ವಾಗುತ್ತದೆ. ಶಬ್ದಕೋಶಗಳು ಇದ್ದಾಗ ಮಾತ್ರ ಭಾಷೆಯು ಅಸ್ತಿತ್ವದಲ್ಲಿರುತ್ತದೆ, ನಿಘಂಟು, ವಿಶ್ವಕೋಶಗಳೇ ಇಲ್ಲದ ಸಂದರ್ಭದಲ್ಲಿ ಒಂದು ಭಾಷೆ ಅವನತಿಯ ಹಾದಿಯನ್ನು ಹಿಡಿಯುತ್ತದೆ ಎಂದು ಕನ್ನಡ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಡಾ| ಬಿ.ವಿ.ವಸಂತ ಕುಮಾರ್ ಅಭಿಪ್ರಾಯಪಟ್ಟರು. ಕರ್ನಾಟಕದ ಅರೆಭಾಷೆ ಸಾಹಿತ್ಯ ಮತ್ತು ಸಂಸ್ಕøತಿ ಅಕಾಡೆಮಿಯ ವತಿಯಿಂದ ಸಂಪಾಜೆಯ ಪಯಸ್ವಿನಿ ಕೃ.ಪ.ಸ. ಸಂಘದ "ಸಹಕಾರ ಭವನ"ದಲ್ಲಿ ನಡೆದ ಅರೆಭಾಷಾ ವಿಚಾರ ಸಂಕಿರಣ ಕಾರ್ಯಕ್ರಮದಲ್ಲಿ ‘ಭಾಷಾ ಅಕಾಡೆಮಿಯ ಚಟುವಟಿಕೆ, ಸ್ವರೂಪ ಮತ್ತು ಸಾಧ್ಯತೆಗಳು’ ಎಂಬ ವಿಷಯದಲ್ಲಿ ಮಾತನಾಡುತ್ತಾ ಅವರು, ಭಾಷೆಯು ಸಂಸ್ಕøತಿ, ಪ್ರಕೃತಿಯನ್ನೊಳ ಗೊಂಡು ಸಮರ್ಥ ದಾಖಲೀಕರಣ ವಾದರೆ ಮಾತ್ರ ಒಂದು ಜನಾಂಗ, ಪ್ರಾದೇಶಿಕತೆ, ಬಹುತ್ವ ಉಳಿಯುತ್ತದೆ. ವ್ಯಕ್ತಿಗಳ ನಿರ್ಮಾಣ(ಮೊದಲ ಪುಟದಿಂದ) ಮಾಡುವ, ಮನುಷ್ಯನಲ್ಲಿರುವ ಅಸಮಾನತೆ, ಬಡತನ, ಕಣ್ಣೀರನ್ನು ಒರೆಸುವ ಕೆಲಸ ಅಕಾಡೆಮಿ ಮಾಡಬೇಕಾಗುತ್ತದೆ ಎಂದರು.
‘ಭಾಷೆ ಮತ್ತು ಸಂಸ್ಕøತಿ ಉಳಿಸುವಲ್ಲಿ ಸಮುದಾಯದ ಪಾತ್ರ’ ಎಂಬ ವಿಷಯದ ಬಗ್ಗೆ ಮಾತನಾಡಿದ ಪೆರಾಜೆ ಪ್ರಾ.ಕೃ.ಪ.ಸ.ಸಂಘದ ಅಧ್ಯಕ್ಷ ಹಾಗೂ ಮಡಿಕೇರಿ ತಾ.ಪಂ.ಸದಸ್ಯ ನಾಗೇಶ್ ಕುಂದಲ್ಪಾಡಿ ಇಂದು ಭತ್ತದ ಬೇಸಾಯ ಪದ್ದತಿಗಳು ನಶಿಸಿ ಹೋದಂತೆ ನಮ್ಮ ಅನೇಕ ಆರಾಧನೆ, ಆಚರಣೆಗಳು ಅದರೊಂದಿಗೆ ನಶಿಸಿ ಹೋಗಿವೆ. ಅಕಾಡೆಮಿಯು ಕಮ್ಮಟಗಳನ್ನು ನಡೆಸಿ ಯುವಜನರನ್ನು ಭಾಷಿಕ ಸಾಂಸ್ಕøತಿಕ ಹಾಗೂ ಬೌದ್ಧಿಕ ನೆಲೆಯಲ್ಲಿ ಬೆಳೆಸುವ ಕೆಲಸವಾಗಬೇಕಿದೆ. ಇಂದು ಉತ್ತಮ ಗುಣಮಟ್ಟದ ಬರವಣಿಗೆಗೆ, ಸಂಶೋಧನಾ ಲೇಖನಗಳ ಬಗ್ಗೆ ವಿದ್ವಾಂಸರಿಂದ ತರಬೇತಿಯ ಅಗತ್ಯವಿದೆ, ನಮ್ಮ ಸಂಸ್ಕøತಿಯ ಸಿದ್ದ ವೇಷ, ಶೋಭಾನೆ ಹಾಡು, ಹಸೆಬರೆಯುವುದು, ಕೊಳಲು ವಾದನದ ಹೊಸ ಪ್ರಯೋಗ, ಶಿರಾಡಿಭೂತ ಅರೆಭಾಷೆ ಸಂಸ್ಕøತಿಯನ್ನು ಒಳಗೊಂಡಿರುವ ನಾಟಕಗಳಿಗೆ ಆಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು ಉಳಿಸುವ ಮತ್ತು ದಾಖಲಿಸುವ ಪ್ರಯತ್ನವಾಗಬೇಕಿದೆ ಎಂದರು.
ಅಕಾಡೆಮಿಯ ಮಾಜಿ ಅಧ್ಯಕ್ಷ ಯನ್.ಎಸ್. ದೇವಿ ಪ್ರಸಾದ್ ದೀಪ ಬೆಳಗಿಸುದರ ಮೂಲಕ ಚಾಲನೆ ನೀಡಿದ ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಕಾಡೆಮಿಯ ಅಧ್ಯಕ್ಷ ಲಕ್ಷೀನಾರಾಯಣ ಕಜೆಗದ್ದೆಯವರು ವಹಿಸಿದ್ದರು. ಅರೆಭಾಷೆಯ ಸಂಸ್ಕøತಿ, ಆಚಾರ ವಿಚಾರಗಳ ಬಗ್ಗೆ ಕೆಲಕಾಲ ಸಂವಾದ ಕಾರ್ಯಕ್ರಮವು ಏರ್ಪಟ್ಟಿತು.
ಮುಖ್ಯ ಅತಿಥಿಯಾಗಿ ಪಯಸ್ವಿನಿ.ಪ್ರಾ.ಕೃ.ಪ.ಸ.ಸಂಘ ಸಂಪಾಜೆ ಇದರ ಅಧ್ಯಕ್ಷ ಯನ್.ಸಿ ಅನಂತ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಅಕಾಡೆಮಿಯ ಸದಸ್ಯೆ ಬೈತಡ್ಕ ಜಾನಕಿ ಬೆಳ್ಯಪ್ಪ ಪ್ರಾರ್ಥಿಸಿದರು, ಸದಸ್ಯ ಧನಂಜಯ ಅಗೋಳಿಕಜೆ ಸ್ವಾಗತಿಸಿ ಸದಸ್ಯ ಸಂಚಾಲಕ ಪುರುಷೋತ್ತಮ ಕಿರ್ಲಾಯ ವಂದಿಸಿದರು. ಸದಸ್ಯ ಸಂಚಾಲಕ ಕುಸುಮಾಧರ ಎ.ಟಿ. ಕಾರ್ಯಕ್ರಮವನ್ನು ನಿರೂಪಿಸಿದರು. ಅರೆಭಾಷಾಭಿಮಾನಿಗಳು, ಭಾಷಾ ವಿದ್ವಾಂಸರು ಆಯೋಜಕರು, ಅಕಾಡೆಮಿಯ ಸದಸ್ಯರುಗಳು ಈ ಸಂದರ್ಭ ಉಪಸ್ಥಿತರಿದ್ದರು.