ವೀರಾಜಪೇಟೆ, ಅ.5 : ಕೊರೊನಾ ನಿರ್ಬಂಧದೊಂದಿಗೆ ಸೀಮಿತ ಸಂಖ್ಯೆಯ ವಕೀಲರು, ಪ್ರಕರಣಕ್ಕೆ ಸಂಬಂಧಿಸಿದ ವಾದಿ ಪ್ರತಿವಾದಿಗಳಿಗೆ ಮಾತ್ರ ಸಮುಚ್ಚಯ ನ್ಯಾಯಾಲಯ ಪ್ರವೇಶದ ಅವಕಾಶ ದೊಂದಿಗೆ ಇಂದು ವೀರಾಜಪೇಟೆ ಸಮುಚ್ಚಯ ನ್ಯಾಯಾಲಯದಲ್ಲಿ ಮೂರು ನ್ಯಾಯಾಲಯಗಳು ಆರಂಭಗೊಂಡವು.
ಕೊರೊನಾ ವೈರಸ್ನ ಹಿನ್ನೆಲೆಯಲ್ಲಿ ಕಳೆದ ಮಾರ್ಚ್ನಿಂದ ನ್ಯಾಯಾಲಯಗಳಲ್ಲಿ ಕಾರ್ಯ ಕಲಾಪಗಳಿಲ್ಲದೆ ಸ್ಥಗಿತಗೊಂಡ ನಂತರ ಆಯ್ದ ಕ್ರಿಮಿನಲ್ ಪ್ರಕರಣಗಳಿಗೆ ಮಾತ್ರ ಆನ್ಲೈನ್ವೀಡೀಯೋ ಕಾನ್ಪರೆನ್ಸ್ ಮೂಲಕ ಜಾಮೀನು ಅರ್ಜಿಗೆ ವಿಚಾರಣೆ ನಡೆಯುತ್ತಿತ್ತು.
ಈಗ ಇಂದಿನಿಂದ ಪ್ರಕರಣಗಳಿಗೆ ಸಂಬಂಧಿಸಿದ ವಾದಿಗಳು, ಪ್ರತಿವಾದಿ ಗಳು, ಸಾಕ್ಷಿದಾರರು ಪೊಲೀಸರು, ಆರೋಪಿಗಳು 48 ಗಂಟೆಗಳ ಅವಧಿಯಲ್ಲಿ ಪಡೆದ ಕೊರೊನಾ ವೈರಸ್ನ ನೆಗೆಟಿವ್ ದೃಢೀಕರಣಪತ್ರ ಹಾಜರುಪಡಿಸಿ ನ್ಯಾಯಾಲಯದಲ್ಲಿ ಸ್ಯಾನಿಟೈಸರ್ ಬಳಕೆ, ಥರ್ಮಲ್ ಸ್ಕ್ರೀನ್ ಪರೀಕ್ಷೆಯೊಂದಿಗೆ ನ್ಯಾಯಾಲಯಗಳಿಗೆ ಪ್ರವೇಶಿಸಲು ಅವಕಾಶ ಮಾಡಿಕೊಡ ಲಾಗಿದೆ. ನ್ಯಾಯಾಲಯಗಳ ಕಲಾಪಗಳಲ್ಲಿಯೂ ವಕೀಲರು, ವಾದಿಗಳು,ಪ್ರತಿವಾದಿಗಳು ಪೊಲೀಸರು ಅವರ ಜೊತೆಯಲ್ಲಿಯೇ ಬರುವ ಆರೋಪಿಗಳು ಕಡ್ಡಾಯವಾಗಿ ಸಾಮಾಜಿಕ ಅಂತರವನ್ನು ಕಾಯ್ದು ಕೊಂಡು ಕಲಾಪಗಳಲ್ಲಿ ಭಾಗವಹಿಸಲು ಅವಕಾಶ ಮಾಡಿಕೊಡಲಾಗಿತ್ತು.
ಸಮುಚ್ಚಯ ನ್ಯಾಯಾಲಯದಲ್ಲಿ ಪ್ರಿನ್ಸಿಫಲ್ಮುನ್ಸಿಫ್, ಅಡಿಷನಲ್ ಕೋರ್ಟು, ಸಿವಿಲ್ಜಡ್ಜ್ ಕೋರ್ಟ್ ಓಪನ್ ಆಗಿದ್ದರೂ ಸೀಮಿತ ಸಂಖ್ಯೆ ಯಲ್ಲಿ ವಕೀಲರುಗಳು ಹಾಜರಾಗಿ ದ್ದರು. ಒಂದು ದಿನಕ್ಕೆ 30 ಪ್ರಕರಣಗಳಿಗೆ ಅವಕಾಶವಿದ್ದು ಮುಂಚಿ ತವಾಗಿಯೇ ನ್ಯಾಯಾಲಯಗಳ ಸಿಬ್ಬಂದಿಗಳು ಇದನ್ನು ಪಟ್ಟಿ ಮಾಡಿರು ತ್ತಾರೆ. ಆ ಪಟ್ಟಿಯಂತೆ ಮಾರನೇ ದಿನ ವಕೀಲರ ಸೀಮಿತ ಸಂಖ್ಯೆಯ ಹಾಜರಾತಿಯಲ್ಲಿ ನ್ಯಾಯಾಲಯಗಳ ಕಲಾಪಗಳು ನಡೆಯಲಿವೆ.
ಸಮುಚ್ಚಯ ನ್ಯಾಯಾಲಯ ದಲ್ಲಿರುವ ಎರಡನೇ ಅಧಿಕ ಸೆಷನ್ಸ್ ನ್ಯಾಯಾಲಯದಲ್ಲಿ ನ್ಯಾಯಾಧೀಶರು ಈ ಹಿಂದೆಯೇ ವರ್ಗಾವಣೆ ಗೊಂಡಿದ್ದರಿಂದ ನ್ಯಾಯಾಲಯ ಇಂದು ಆರಂಭಗೊಳ್ಳಲಿಲ್ಲ. ರಾಜ್ಯದ ಉಚ್ಚ ನ್ಯಾಯಾಲಯದ ಕೊರೊನಾ ನಿರ್ಬಂಧದ ಮಾರ್ಗಸೂಚಿಯನ್ನು ಅನುಸರಿಸಿ ನ್ಯಾಯಾಲಯ ಇಂದಿ ನಿಂದ ಕಾರ್ಯಾರಂಭ ಮಾಡಿದೆ.