ಬೆಂಗಳೂರು, ಅ. 5: ಕೇಂದ್ರ ತನಿಖಾ ದಳ (ಸಿಬಿಐ) ಸೋಮವಾರ ಬೆಳ್ಳಂಬೆಳಗ್ಗೆ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಮತ್ತು ಅವರ ಸಹೋದರ ಸಂಸದ ಡಿ.ಕೆ. ಸುರೇಶ್ ಅವರಿಗೆ ಸೇರಿದ 14 ಸ್ಥಳಗಳ ಮೇಲೆ ಏಕಾಏಕಿ ದಾಳಿ ನಡೆಸಿ ಶೋಧ ನಡೆಸಿ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ.ಸಿಬಿಐ ಅಧಿಕಾರಿಗಳು ರಾಮನಗರ, ಬೆಂಗಳೂರು, ಮುಂಬೈ, ದೆಹಲಿ ಸೇರಿದಂತೆ 14 ಕಡೆಗಳಲ್ಲಿ ದಾಳಿ ನಡೆಸಿ ತೀವ್ರ ತನಿಖೆ ನಡೆಸಿದರು. ಈ ಹಿಂದೆ ಜಾರಿ ನಿರ್ದೇಶನಾಲಯ ಅಧಿಕಾರಿಗಳು ಡಿ.ಕೆ.ಶಿವಕುಮಾರ್ ಮನೆ ಮೇಲೆ ದಾಳಿ ನಡೆಸಿ ನಂತರ ಅವರನ್ನು ಬಂಧಿಸಿ ಜೈಲಿಗೆ ಕಳುಹಿಸಿತ್ತು. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕೆಪಿಸಿಸಿ ವಕ್ತಾರ ಸೂರಜ್ ಅರಸ್, ಮುಂಬರುವ ಶಿರಾ ಮತ್ತು ಆರ್ ಆರ್ ನಗರ ಕ್ಷೇತ್ರಗಳ ಉಪ ಚುನಾವಣೆ ಸಂಬಂಧ ಬೆಂಗಳೂರಿನ ಸದಾಶಿವನಗರದಲ್ಲಿರುವ ಶಿವಕುಮಾರ್ ಮನೆಯಲ್ಲಿ ಚುನಾವಣೆ ಸಿದ್ಧತೆ ಸಂಬಂಧ ಇಂದು ಸಭೆ ನಡೆಸುವ ತಯಾರಿಯಲ್ಲಿದ್ದರು.ಆ ಸಂದರ್ಭದಲ್ಲಿ ಸಿಬಿಐ ಅಧಿಕಾರಿಗಳು ದಾಳಿ ನಡೆಸಿದ್ದಾರೆ ಎಂದರು. ಏಕಾಏಕಿ 60ಕ್ಕೂ ಹೆಚ್ಚು ಅಧಿಕಾರಿಗಳು 14 ಕಡೆ ಸರ್ಚ್ ವಾರಂಟ್ ಪಡೆದು ದಾಳಿ ನಡೆಸಿದ್ದಾರೆ ಎಂದು ಹೇಳಿದರು. ಉಪ ಚುನಾವಣೆ ಹೊಸ್ತಿನಲ್ಲಿ ಕಾಂಗ್ರೆಸ್ ಅಧ್ಯಕ್ಷರ ಮನೆ ಮೇಲೆ ದಾಳಿ ನಡೆದಿರುವುದನ್ನು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಸೇರಿದಂತೆ ಹಲವು ಕಾಂಗ್ರೆಸ್ ನಾಯಕರು ಖಂಡಿಸಿದ್ದಾರೆ. ರಂದೀಪ್ ಸಿಂಗ್ ಸುರ್ಜೆವಾಲಾ ಟ್ವೀಟ್ ಮಾಡಿ, ಸಿಬಿಐ, ಇಡಿ ಮತ್ತು

(ಮೊದಲ ಪುಟದಿಂದ) ಆದಾಯ ತೆರಿಗೆ ಇಲಾಖೆಗಳು ಬಿಜೆಪಿ ಸರ್ಕಾರದ ತಾಳಕ್ಕೆ ತಕ್ಕಂತೆ ಕುಣಿಯುತ್ತಿವೆ. ಪ್ರಧಾನಿ ಮೋದಿ ಮತ್ತು ಬಿ ಎಸ್ ಯಡಿಯೂರಪ್ಪನವರು ಸಿಬಿಐ ಅಧಿಕಾರಿಗಳನ್ನು ತಮ್ಮ ಕೈಗೊಂಬೆಗಳಂತೆ ಕುಣಿಸುತ್ತಿದ್ದಾರೆ. ಡಿಕೆ ಶಿವಕುಮಾರ್ ಮನೆ ಮೇಲೆ ದಾಳಿ ನಡೆಸುವ ಮೂಲಕ ಅವರ ಉದ್ದೇಶವೆಲ್ಲವೂ ಈಡೇರುತ್ತದೆ ಎಂದು ಅಂದುಕೊಂಡಿದ್ದರೆ ಅದು ಭ್ರಮೆಯಷ್ಟೆ ಎಂದಿದ್ದಾರೆ.

ಡಿಕೆಶಿ ಅಸಮಾಧಾನ

ಬಿಜೆಪಿ ಸರ್ಕಾರ ಹೇಳಿದಂತೆ ಸಿಬಿಐ ಕೇಳುತ್ತಿದೆ, ಚುನಾವಣೆ ಮುಗಿಯುವವರೆಗೂ ಈ ದಾಳಿ ನಡೆಸುತ್ತಾರೆ ಎಂದು ಸಿಬಿಐ ದಾಳಿಯ ಬಳಿಕ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಹೇಳಿದ್ದಾರೆ. ಬೆಂಗಳೂರಿನ ಸದಾಶಿವನಗರದ ನಿವಾಸದ ಮೇಲೆ ಸಿಬಿಐ ದಾಳಿ ಅಂತ್ಯಗೊಂಡ ಬಳಿಕ ಸಂಜೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ನಾನು ಯಾವ ತಪ್ಪು ಮಾಡಿಲ್ಲ. ನಿಮಗೆ ಕಳಂಕ ತರುವ ಕೆಲಸ ಎಂದೂ ಮಾಡಿಲ್ಲ. ನಿಮ್ಮ ಅಭಿಮಾನಕ್ಕೆ ಋಣಿಯಾಗಿದ್ದೇನೆ, ನಿಮ್ಮ ಅಭಿಮಾನಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ’ ಎಂದು ಕಾರ್ಯಕರ್ತರಿಗೆ ಅಭಯ ನೀಡಿದರು.

2017ರಲ್ಲಿ ಗುಜರಾತ್ ಚುನಾವಣೆ ಸಂದರ್ಭದಲ್ಲಿ ಐಟಿ ದಾಳಿ ನಡೆದಿತ್ತು. 2018ರಲ್ಲಿ ಇಡಿ ಕೇಸ್ ಹಾಕಿ ಬಂಧನ ಮಾಡಿದರು. ಈಗ ಸಿಬಿಐ ತನಿಖೆಗೆ ಅಡ್ವೋಕೇಟ್ ಜನರಲ್ ಬೇಡ ಎಂದರೂ ರಾಜ್ಯ ಸರ್ಕಾರ ಅನುಮತಿ ನೀಡಿದೆ. ಈ ಹಿನ್ನೆಲೆಯಲ್ಲಿ ದಾಳಿ ನಡೆದಿದೆ. ಚುನಾವಣೆ ಮುಗಿಯುವವರೆಗೂ ಈ ದಾಳಿ ನಡೆಯುತ್ತೆ ಎಂದರು. 50 ಲಕ್ಷ ಸಿಕ್ಕಿದೆ ಎಂದು ವರದಿ ಬರುತ್ತಿದೆ. ನಾನು ತಲೆ ಕೆಡಿಸಿಕೊಳ್ಳಲು ಹೋಗಲ್ಲ. ದಾಳಿ ನಡೆಸಿದ ಅಧಿಕಾರಿಗಳು ಎಲ್ಲಾ ಲೆಕ್ಕ ಹಾಕಿಕೊಂಡು ಹೋಗಿದ್ದಾರೆ. ಪ್ಯಾಂಟ್, ಪಂಚೆ, ಸೀರೆ ಲೆಕ್ಕ ಹಾಕಿದ್ದಾರೆ. ನಾನು ತಪ್ಪು ಮಾಡಿಲ್ಲ, ರಾಜಕಾರಣದ ಕುತಂತ್ರಕ್ಕೆ ಬಗ್ಗಲ್ಲ, ಕುತಂತ್ರಕ್ಕೆ ಹೆದರುವ ಮಗ ನಾನಲ್ಲ ಎಂದು ಡಿಕೆಶಿ ಗುಡುಗಿದರು.