ಮಡಿಕೇರಿ, ಅ. 5: ಕೊಡಗಿನಲ್ಲಿ ವಿಪರೀತ ಗಾಳಿ ಮಳೆಯಿಂದ ಸಾರ್ವಜನಿಕ ಆಸ್ತಿ - ಪಾಸ್ತಿ ಸೇರಿದಂತೆ ಕೃಷಿ ಫಸಲು ನಷ್ಟ ಸಂಭವಿಸಿದ್ದರೂ, ಕಾಫಿ ಮಂಡಳಿ ಸೇರಿದಂತೆ ತೋಟಗಾರಿಕೆ ಹಾಗೂ ಕೃಷಿ ಇಲಾಖೆಯ ಅಧಿಕಾರಿಗಳು ಗ್ರಾಮಾಂತರ ಪ್ರದೇಶದ ಕುಗ್ರಾಮಗಳನ್ನು ನಿರ್ಲಕ್ಷ್ಯ ಮಾಡಲಾಗಿದೆ ಎಂಬ ಅಸಮಾಧಾನ ಕೇಳಿಬರತೊಡಗಿದೆ. ಈ ಬಗ್ಗೆ ಸ್ವತಃ ಮಡಿಕೇರಿ ತಾಲೂಕು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಅಧ್ಯಕ್ಷರು ಮತ್ತಿತರ ಗ್ರಾಮಸ್ಥರು ಇಂದು ಜಿಲ್ಲಾಧಿಕಾರಿ ಮತ್ತು ಕಾಫಿ ಮಂಡಳಿಗೆ ಲಿಖಿತ ದೂರು ಸಲ್ಲಿಸಿದ್ದಾರೆ.ಪ್ರತಿವರ್ಷವೂ ಕಾಫಿ ಮಂಡಳಿಯೊಂದಿಗೆ ಇತರ ಇಲಾಖೆಗಳ ಅಧಿಕಾರಿಗಳು ಕೇವಲ ಪ್ರಭಾವಿಗಳಿಗೆ ಮಣೆ ಹಾಕಿ ನಷ್ಟ ಪರಿಹಾರ ಕಲ್ಪಿಸುತ್ತಿದ್ದು, ಗ್ರಾಮೀಣ ಪ್ರದೇಶಗಳ ಸಣ್ಣ ಹಾಗೂ ಅತಿ ಸಣ್ಣ ರೈತರನ್ನು ಕಡೆಗಣಿಸುತ್ತಿದ್ದಾರೆ ಎಂದು ಅಸಮಾಧಾನ ತೋಡಿಕೊಂಡಿದ್ದಾರೆ. ಎಪಿಎಂಸಿ ಅಧ್ಯಕ್ಷ ಬೆಪ್ಪುರನ ಮೇದಪ್ಪ ಹಾಗೂ ಸದಸ್ಯ ಕೊಡಪಾಲ್ ಗಣಪತಿ ಮತ್ತು ತಾ.ಪಂ. ಮಾಜಿ ಸದಸ್ಯ ಟಿ.ಎ. ಕಿಶೋರ್ಕುಮಾರ್,
(ಮೊದಲ ಪುಟದಿಂದ) ಗಾಳಿಬೀಡು ಗ್ರಾ.ಪಂ. ಮಾಜಿ ಅಧ್ಯಕ್ಷ ಸುಭಾಷ್ ಸೋಮಯ್ಯ ನೇತೃತ್ವದಲ್ಲಿ ಇಂದು ಕೃಷಿಕರ ಸಮಸ್ಯೆ ಬಗ್ಗೆ ಜಿಲ್ಲಾಡಳಿತದೊಂದಿಗೆ ಕಾಫಿ ಮಂಡಳಿಯ ಗಮನ ಸೆಳೆಯಲಾಯಿತು.ಗ್ರಾಮಗಳೇ ನಾಪತ್ತೆ : ಅಧಿಕಾರಿಗಳನ್ನು ಮುಟ್ಲು ಹಾಗೂ ಹೆರವನಾಡು ಗ್ರಾಮಸ್ಥರೊಂದಿಗೆ ಭೇಟಿಯಾದ ಪ್ರಮುಖರು, ವಿಪರೀತ ಗಾಳಿ - ಮಳೆಯಾಗುವ ಗಾಳಿಬೀಡು ಪಂಚಾಯಿತಿ ವ್ಯಾಪ್ತಿಯ ಮುಟ್ಲು ಗ್ರಾಮದ ಕೃಷಿಕ ಕುಟುಂಬಗಳ ಬಗ್ಗೆ ಯಾರೊಬ್ಬರೂ ತಿರುಗಿಯೂ ನೋಡಿಲ್ಲವೆಂದು ಅಸಮಾಧಾನ ವ್ಯಕ್ತಪಡಿಸಿದರು.
ಅಲ್ಲದೆ ಬೆಟ್ಟಗೇರಿ ಗ್ರಾ.ಪಂ. ವ್ಯಾಪ್ತಿಯ ಹೆರವನಾಡು ಗ್ರಾಮವನ್ನು ಕೂಡ ಪರಿಗಣನೆ ಮಾಡದೆ, ಕೃಷಿ ನಷ್ಟದ ಸಮೀಕ್ಷೆ ಕೂಡ ಕೈಗೊಂಡಿಲ್ಲ ಎಂದು ಪ್ರಮುಖರು ಗ್ರಾಮಸ್ಥರೊಂದಿಗೆ ನಿಯೋಗ ತೆರಳಿ, ಕೂಡಲೇ ಗ್ರಾಮಗಳಿಗೆ ಭೇಟಿ ನೀಡಿ ರೈತರ ಕಾಫಿ, ಏಲಕ್ಕಿ, ಭತ್ತ, ಬಾಳೆ, ಮೆಣಸು ಮುಂತಾದ ಕೃಷಿ ಫಸಲು ಕೊಳೆರೋಗಕ್ಕೆ ಸಿಲುಕಿರುವ ಬಗ್ಗೆ ಪರಿಶೀಲಿಸಿ ಸಂಬಂಧಿಸಿದ ರೈತರಿಗೆ ಸೂಕ್ತ ಪರಿಹಾರ ಕಲ್ಪಿಸುವಂತೆ ಆಗ್ರಹಿಸಿದರು.
ಸಾಕಷ್ಟು ಸಮಸ್ಯೆ : ಜಿಲ್ಲೆಯ ಗಡಿಗ್ರಾಮಗಳಾದ ಸಂಪಾಜೆ ಹೋಬಳಿ, ಶಾಂತಳ್ಳಿ ಹೋಬಳಿ, ಸುಂಟಿಕೊಪ್ಪ ಹೋಬಳಿ, ಭಾಗಮಂಡಲ ಹೋಬಳಿ ಸೇರಿದಂತೆ ಮಡಿಕೇರಿ ತಾಲೂಕಿನಲ್ಲಿಯೇ ಸಾಕಷ್ಟು ಕುಗ್ರಾಮಗಳಿಗೆ ಕಂದಾಯ ಹಾಗೂ ಕಾಫಿ ಮಂಡಳಿ ಸಹಿತ ಇತರರು ಪರಿಶೀಲನೆ ಮಾಡಿಲ್ಲವೆಂದ ಪ್ರಮುಖರು, ಜಿಲ್ಲೆಯ ಬಹಳಷ್ಟು ಕುಗ್ರಾಮಗಳ ಸಣ್ಣ ಮತ್ತು ಅತಿ ಸಣ್ಣ ರೈತರ ಪರಿಸ್ಥಿತಿ ಇದೇ ಆಗಿದೆ ಎಂದು ವಿವರಿಸಿದರು.
‘ಶಕ್ತಿ’ಯೊಂದಿಗೆ ಹೇಳಿಕೆ : ಈ ವೇಳೆ ‘ಶಕ್ತಿ’ಯೊಂದಿಗೆ ಮಾತನಾಡಿದ ಬೆಪ್ಪುರನ ಮೇದಪ್ಪ ಹಾಗೂ ವಿವಿಧ ಗ್ರಾಮಸ್ಥರು, ಮಳೆ - ಗಾಳಿಯಿಂದ ಗ್ರಾಮೀಣ ರೈತರು ಕೃಷಿ ಭೂಮಿ ನಿರ್ವಹಣೆ ಮತ್ತು ದೈನಂದಿನ ಬದುಕಿನಿಂದ ನಲುಗುತ್ತಿದ್ದರೂ, ಸಂಬಂಧಿಸಿದ ಅಧಿಕಾರಿಗಳು ಕೇವಲ ಹೋಬಳಿ ಕೇಂದ್ರಗಳ ರಸ್ತೆ ಪಕ್ಕ ತೋಟಗಳನ್ನು ವೀಕ್ಷಿಸಿ ಪ್ರಾಕೃತಿಕ ವಿಕೋಪದಿಂದ ನಷ್ಟ ಸಂಭವಿಸಿಲ್ಲ ಎಂದು ವರದಿ ನಮೂದಿಸುತ್ತಿರುವದಾಗಿ ಆರೋಪಿಸಿದರು. ಅಲ್ಲದೆ, ಸಂಬಂಧಿಸಿದವರು ಇನ್ನಾದರೂ ಖುದ್ದಾಗಿ ಗ್ರಾಮೀಣ ರೈತರ ತೋಟ, ಗದ್ದೆಗಳನ್ನು ಸ್ಥಳ ಪರಿಶೀಲಿಸಿ ಸೂಕ್ತ ಪರಿಹಾರ ಕಲ್ಪಿಸಲು ಮುಂದಾಗಿ, ನೊಂದ ರೈತರಿಗೆ ನ್ಯಾಯ ಕೊಡಿಸಬೇಕೆಂದು ಒತ್ತಾಯಿಸಿದರು.