ಕಣಿವೆ, ಅ. 4: ರಂಗಸಮುದ್ರ ಬಳಿಯ ದಾಸವಾಳ ಪೈಸಾರಿಯ ವ್ಯಕ್ತಿಯೊಬ್ಬ ಅಪ್ರಾಪ್ತೆಯೊಂದಿಗೆ ಲೈಂಗಿಕ ಸಂಬಂಧ ಹೊಂದುವ ಮೂಲಕ ಆ ಬಾಲೆಗೆ ಗರ್ಭಧಾರಣೆ ಕರುಣಿಸಿದ್ದು, ಕುಶಾಲನಗರ ಪೆÇಲೀಸರು ಬಂಧಿಸಿ ನ್ಯಾಯಾಂಗ ವಶಕ್ಕೊಪ್ಪಿಸಿದ್ದಾರೆ. ದಾಸವಾಳ ಪೈಸಾರಿಯ ನಿವಾಸಿ ವಸಂತ (26) ಎಂಬಾತ ಬಂಧಿತ. 12ರ ಪ್ರಾಯದ ಅಪ್ರಾಪ್ತ ಬಾಲಕಿ ಸೇರಿದಂತೆ ಆಕೆಯ ತಾಯಿಯ ಜೊತೆಯಲ್ಲೂ ಸಂಬಂಧವನ್ನು ಹೊಂದುವ ಮೂಲಕ ಅಪ್ರಾಪ್ತೆ ಗರ್ಭವತಿಯಾಗುವಂತೆ ಮಾಡಿದ್ದಾನೆ. ಕುಶಾಲನಗರ ಪೆÇಲೀಸರು ದೂರು ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ. ಇದೀಗ ಅಪ್ರಾಪ್ತೆಯನ್ನು ಮಹಿಳಾ ಸಾಂತ್ವನ ಕೇಂದ್ರದಲ್ಲಿ ಆರೈಕೆ ಮಾಡಲಾಗುತ್ತಿದೆ.
ಜಿಲ್ಲೆಯ ಇನ್ನು ಕೆಲವು ಗಿರಿಜನ ಹಾಡಿಗಳಲ್ಲಿ ಇಂತಹುದೇ ಅಮಾನವೀಯ ಘಟನೆಗಳು ಆಗಿಂದಾಗ್ಗೆ ಜರುಗುತ್ತಿದ್ದರೂ ಕೂಡ ಸಂಬಂಧಿಸಿದ ಗಿರಿಜನ ಅಭಿವೃದ್ಧಿ ಇಲಾಖೆಯಾಗಲೀ, ಸಮಾಜ ಕಲ್ಯಾಣ ಇಲಾಖೆಯಾಗಲೀ, ಸಂಚಾರಿ ಗಿರಿಜನ ಆರೋಗ್ಯ ಘಟಕವಾಗಲೀ ಏಕೆ ಎಚ್ಚೆತ್ತು ಅವರಿಗೆ ಸೂಕ್ತ ಮಾರ್ಗದರ್ಶನ ನೀಡುತ್ತಿಲ್ಲ ಎಂಬದು ಪ್ರಶ್ನೆಯಾಗಿಯೇ ಉಳಿದಿದೆ.
ಹದಿಹರೆಯದ ಹೆಣ್ಣುಮಕ್ಕಳಿಗೆ ಆರೋಗ್ಯ, ಶಿಕ್ಷಣ, ವೈಯಕ್ತಿಕ ಸ್ವಚ್ಛತೆ ಹಾಗೂ ಆರೋಗ್ಯ ಜಾಗೃತಿ ಎಂಬದು ಕೇವಲ ಘೋಷಣೆಗಳಲ್ಲಿಯೇ ಉಳಿದಿದೆಯಾ? ಇನ್ನಾದರೂ ಗಿರಿಜನ ಹಾಡಿಗಳಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ಜಾಗೃತಿ ಮೂಡಿಸುವ ಕೆಲಸ ಅತೀ ತುರ್ತಾಗಿ ಆಗಬೇಕಿದೆ. ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಗಿರಿಜನರ ಸಮಗ್ರ ಆರೋಗ್ಯ ಹಾಗೂ ಅಭಿವೃದ್ಧಿಗೆಂದು ಕೋಟ್ಯಾನುಗಟ್ಟಲೆ ಅನುದಾನವನ್ನು ವಿನಿಯೋಗಿಸುತ್ತಿವೆ.
ಆದರೆ ಆ ಅನುದಾನಗಳು ಸರಿಯಾಗಿ ಗಿರಿಜನರಿಗೆ ತಲುಪುತ್ತಿವೆಯಾ? ಗಿರಿಜನ ವಸತಿ ಪ್ರದೇಶಗಳ ಬಾಲಕಿಯರು ಹಾಗೂ ಮಹಿಳೆಯರಿಗೆ ನೈತಿಕ ಶಿಕ್ಷಣ, ಲೈಂಗಿಕ ಮಾಹಿತಿ, ಆರೋಗ್ಯ ಮಾಹಿತಿ, ವೈಯಕ್ತಿಕ ಸ್ವಚ್ಛತೆ ಮೊದಲಾದ ಹತ್ತಾರು ಕಾರ್ಯಕ್ರಮಗಳು ಸರಿಯಾಗಿ ಅನುಷ್ಠಾನಗೊಳ್ಳುತ್ತಿವೆಯಾ? ಈ ಬಗ್ಗೆ ಗಂಭೀರ ಗಮನ ಹರಿಸಬೇಕಿದೆ.
-ಕೆ.ಎಸ್. ಮೂರ್ತಿ