ಸಿದ್ದಾಪುರ, ಅ. 3: ಸಾರ್ವಜನಿಕರಿಗೆ ಉಪಟಳ ನೀಡುತ್ತಿರುವ ಪುಂಡಾನೆಯೊಂದನ್ನು ಸೆರೆ ಹಿಡಿಯಲು ಅರಣ್ಯ ಇಲಾಖೆ ತಾ. 4ರಿಂದ (ಇಂದಿನಿಂದ) ಕಾರ್ಯಾಚರಣೆ ಕೈಗೊಳ್ಳುತ್ತಿದೆ. ಅಮ್ಮತ್ತಿ ಸಮೀಪದ ಹೊಸೂರು ಹಾಗೂ ಬೆಟ್ಟಗೇರಿ ಭಾಗದಲ್ಲಿ ಕಾಫಿ ತೋಟದಲ್ಲಿ ಬೀಡುಬಿಟ್ಟು ದಾಂಧಲೆ ನಡೆಸುತ್ತಾ ಸಾರ್ವಜನಿಕರ ಮೇಲೆ (ಮೊದಲ ಪುಟದಿಂದ) ದಾಳಿ ನಡೆಸುತ್ತಿರುವ ಪುಂಡಾನೆಯನ್ನು ಹಿಡಿಯಲು ಅರಣ್ಯ ಇಲಾಖೆ ಎಲ್ಲ ರೀತಿಯ ಸಿದ್ಧತೆಗಳನ್ನು ಕೈಗೊಂಡಿದೆ. ಒಂಟಿ ಸಲಗ ಸೆರೆಹಿಡಿಯಲು ಅರ್ಜುನ, ಕೃಷ್ಣ, ಗೋಪಾಲಸ್ವಾಮಿ, ಗಣೇಶ, ಹರ್ಷ ಎಂಬ 5 ಸಾಕಾನೆಗಳನ್ನು ಬಳಸಲಾಗುತ್ತಿದೆ ಮತ್ತಿಗೋಡು ಸಾಕಾನೆ ಶಿಬಿರ ಹಾಗೂ ದುಬಾರೆ ಸಾಕಾನೆ ಶಿಬಿರಗಳಿಂದ ಸಾಕಾನೆಗಳನ್ನು ಕರೆತರಲಾಗಿದೆ. ಒಂಟಿ ಸಲಗ ಕಳೆದ ಸುಮಾರು ತಿಂಗಳಿನಿಂದ ಹೊಸೂರು ಭಾಗದ ಕಾಫಿ ತೋಟಗಳಲ್ಲಿ ಬೀಡುಬಿಟ್ಟು ದಾಂಧಲೆ ನಡೆಸುತ್ತಿತ್ತು. ಇದರ ಉಪಟಳದಿಂದ ಗ್ರಾಮಸ್ಥರು ಭಯಭೀತರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಈ ಭಾಗದ ಕಾಫಿ ತೋಟಗಳಲ್ಲಿ ಬೀಡುಬಿಟ್ಟಿರುವ ಕಾಡಾನೆಗಳ ಪೈಕಿ ಪುಂಡಾನೆಯನ್ನು ಹಿಡಿಯಲು ಅರಣ್ಯ ಇಲಾಖೆ ಕಾರ್ಯಾಚರಣೆ ಕೈಗೊಂಡಿದೆ. ಅರಣ್ಯ ಇಲಾಖೆಯ 50 ಮಂದಿ ಸಿಬ್ಬಂದಿಗಳು ಹಾಗೂ ಅರಣ್ಯ ಇಲಾಖಾಧಿಕಾರಿಗಳು ವನ್ಯಜೀವಿ ವೈದ್ಯಾಧಿಕಾರಿಗಳು ಕಾರ್ಯಚರಣೆಯಲ್ಲಿ ಪಾಲ್ಗೊಳ್ಳುವರು. ಈಗಾಗಲೇ ಅರಣ್ಯ ಇಲಾಖಾಧಿಕಾರಿಗಳು ಸ್ಥಳದಲ್ಲಿ ಇದ್ದು ಎಲ್ಲ ರೀತಿಯ ಸಿದ್ಧತೆ ಕೈಗೊಂಡು ಕಾರ್ಯಾಚರಣೆ ನಡೆಸಲು ಸಜ್ಜಾಗಿದ್ದಾರೆ. ಅರವಳಿಕೆ ಔಷÀಧಿ ಬಳಸಿ ಪುಂಡಾನೆಯನ್ನು ಹಿಡಿಯುವ ಕಾರ್ಯಾಚರಣೆ ನಡೆಯಲಿದೆ. ವೀರಾಜಪೇಟೆ ತಾಲೂಕು ಡಿಸಿಎಫ್ ಚಕ್ರಪಾಣಿ ಎಸಿಎಫ್ ರೋಷ್ನಿ ಹಾಗೂ ಶ್ರೀಪತಿ ವಲಯಾರಣ್ಯಾಧಿಕಾರಿ ಕೆಪಿ ದೇವಯ್ಯ ಇನ್ನಿತರ ಅಧಿಕಾರಿಗಳು ಉಸ್ತುವಾರಿ ವಹಿಸಲಿದ್ದಾರೆ.